WOMEN'S DAY SPECIAL | ಕಿರಿಯ ವಯಸ್ಸಿಗೆ ಜಡ್ಜ್: ಸವಾಲುಗಳನ್ನು ದಾಟಿ ಬಂದ ಸುಮಾ

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಅತ್ಯಂತ ಕಿರಿಯ ವಯಸ್ಸಿಗೇ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಚಿತ್ರದುರ್ಗದ ಆಟೋ ಚಾಲಕರ ಪುತ್ರಿ ಸುಮಾ ಅವರ ಸಾಧನೆಯ ಪರಿಚಯ ಇಲ್ಲಿದೆ.


WOMENS DAY SPECIAL | ಕಿರಿಯ ವಯಸ್ಸಿಗೆ ಜಡ್ಜ್: ಸವಾಲುಗಳನ್ನು ದಾಟಿ ಬಂದ ಸುಮಾ
x
ಚಿತ್ರದುರ್ಗದ ಸುಮಾ ಕಿರಿಯ ವಯಸ್ಸಿಗೆ ಜಡ್ಜ್‌

ಒಂದು ಕಡೆ ಬಡತನ, ಮತ್ತೊಂದು ಕಡೆ ಅನಾರೋಗ್ಯ ಸಮಸ್ಯೆ.. ಈ ಎರಡು ಸವಾಲನ್ನೂ ಏಕಕಾಲಕ್ಕೆ ಎದುರಿಸಿದ ಚಿತ್ರದುರ್ಗದ ಟಿ.ಸುಮಾ ಅವರು ಈಗ ಸಿವಿಲ್ ನ್ಯಾಯಾಧೀಶರಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಟಿ.ಸುಮಾ (33) ಅವರು ಕಿರಿಯ ವಯಸ್ಸಿಗೆ ನ್ಯಾಯಾಧೀಶರಾಗಿದ್ದಾರೆ. ಈಚೆಗೆ ರಾಜ್ಯದ ನೂತನ ಸಿವಿಲ್ ನ್ಯಾಯಾಧೀಶರಾಗಿ 33 ಯುವ ವಕೀಲರು ನೇಮಕವಾಗಿದ್ದು, ಅವರಲ್ಲಿ ಸುಮಾ ಸಹ ಒಬ್ಬರು.

ಸುಮಾ ಅವರು ಸವೆಸಿದ ಹಾದಿಯು ಕಠಿಣ ಹಾಗೂ ಸವಾಲಿನಿಂದ ಕೂಡಿತ್ತು. ಬಡತನ ಹಾಗೂ ಸಾಧನೆಯ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಸಿವಿಲ್ ನ್ಯಾಯಾಧೀಶೆ ಸುಮಾ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

"ನಾನು ಬಡತನದಲ್ಲೇ ಬೆಳೆದೆ. ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನು ಚೆನ್ನಾಗಿ ಇರಲಿಲ್ಲ. ನನ್ನ ಅಪ್ಪಾಜಿ ಪಿಯುಸಿಯ ವರೆಗೆ ಓದಿಸಿದರು. ನನ್ನ ಅಕ್ಕನ ಮದುವೆಗೆ ಅಪ್ಪ ಹಣ ಖರ್ಚು ಮಾಡಿದ್ದರು. ಹೀಗಾಗಿ, ನನ್ನ ವಿದ್ಯಾಭ್ಯಾಸಕ್ಕೆ ಅಪ್ಪನಿಂದ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ನಮ್ಮೂರಿನಲ್ಲಿ ನನಗೆ ಏಳನೇ ತರಗತಿಯಲ್ಲಿ ಟ್ಯೂಷನ್ ಹೇಳಿಕೊಡುತ್ತಿದ್ದ ಹಾಗೂ ವಕೀಲರೂ ಆಗಿರುವ ಎಂ.ಸಿ ಪಾಪಣ್ಣ ಅವರು, ನನಗೆ ಮಾರ್ಗದರ್ಶನ ಮಾಡಿದರು. ಅಷ್ಟೇ ಅಲ್ಲ ಆರ್ಥಿಕವಾಗಿಯೂ ಸಹಾಯ ಮಾಡಿದರು. ನಾನು ಎಲ್ಎಲ್ ಬಿ ಓದುವಾಗಲೇ ನ್ಯಾಯಾಧೀಶೆಯಾಗಬೇಕು ಎನ್ನುವ ಕನಸು ಕಂಡಿದ್ದೆ" ಎನ್ನುತ್ತಾರೆ ಅವರು.

ಎಂ.ಸಿ ಪಾಪಣ್ಣ ಅವರು ಸಹ ಬಡವರು. ಅವರು ಸಹ ಹೇಳಿಕೊಳ್ಳುವ ಸ್ಥಿತಿವಂತರಲ್ಲ. ಆದರೆ, ಬಿ.ಎಡ್ ವಿದ್ಯಾಭ್ಯಾಸಕ್ಕೆ ಅವರು ನೆರವು ನೀಡಿದರು. ಪದವಿ ಮಾಡುವಾಗ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು ಎನ್ನುವ ಆಸೆ ಇತ್ತು. ಆದರೆ, ಮನೆಯ ಆರ್ಥಿಕ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿ ಆ ಕನಸು ಬಿಟ್ಟೆ. ಪಾಪಣ್ಣ ಅವರು ಎಲ್ಎಲ್ ಬಿ ಸೇರಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು ಎನ್ನುವುದು ಸುಮಾ ಅವರ ಮಾತು.

ಬಡತನವಿದೆಯೆಂದು ಸಾಧನೆ ಬಿಡಬೇಡಿ: ಸುಮಾ

ನಾನು ನೋಡಿದಂತೆ ಬಡತನ ಇದೆ ಎಂದು ಹೇಳಿ ಸಾಧನೆಯಿಂದ ಹಿಂದೆ ಸರಿಯುವವರೇ ಹೆಚ್ಚು. ಬಡತನ ಎಲ್ಲರಿಗೂ ಇದೆ ಅದನ್ನು ದಾಟಿ ಮುಂದೆ ಸಾಗಬೇಕು ಎನ್ನುತ್ತಾರೆ ಸುಮಾ. ಬಡತನ ಇದೆ ಎಂದುಕೊಂಡು ವಿದ್ಯಾಭ್ಯಾಸ ಬಿಡಬಾರದು. ಅದನ್ನು ನೆಪವಾಗಿಯೂ ತೆಗೆದುಕೊಳ್ಳಬಾರದು. ವಿದ್ಯಾಭ್ಯಾಸವೊಂದೆ ನಮ್ಮನ್ನು ಬಡತನದಿಂದ ದೂರ ಮಾಡಬಲ್ಲದು. ಬಡವರಾಗಿ ಹುಟ್ಟುವುದು ತಪ್ಪಲ್ಲ. ಬಡವರಾಗಿ ಸಾಯಬಾರದು ಎನ್ನುವ ಮಾತಿಗೆ ನನ್ನ ಸಹಮತವಿದೆ. ಬಡತನ ಮತ್ತು ಕಷ್ಟಗಳನ್ನು ದಾಟಬೇಕಾದರೆ ನಮಗಿರುವ ಅಸ್ತ್ರ ಶಿಕ್ಷಣ ಮಾತ್ರ ಎಂದರು.


ಸುಮಾ ಅವರ ಬಡ ಕುಟುಂಬದಿಂದ ಬಂದವರು. ಇವರಿಗೆ ಅಣ್ಣ, ಅಕ್ಕ ಹಾಗೂ ಒಬ್ಬರು ಸಹೋದರ ಇದ್ದಾರೆ. ಎಲ್ಲರೂ ಎಸ್ಎಸ್ಎಲ್‌ಸಿ ಹಾಗೂ ಐಟಿಐ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ತಂದೆ ಆಟೋ ಚಾಲಕರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಇವರ ಕುಟುಂಬದಲ್ಲಿ ಪದವಿ ಶಿಕ್ಷಣ ಮಾಡಿರುವುದು ಸುಮಾ ಮಾತ್ರ.

ಸುಮಾ ಅವರ ವಿದ್ಯಾಭ್ಯಾಸ

ಸುಮಾ ಅವರು ಚಿತ್ರದುರ್ಗ ಕೋಡೆನಹಟ್ಟಿಯವರು. ಇನ್ನು ಇವರು ವಿದ್ಯಾಭ್ಯಾಸವನ್ನು ಮಠದ ಕುರುಬರಹಟ್ಟಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮಾಡಿದ್ದಾರೆ. ಪದವಿಯನ್ನು ಎಸ್‍ಜೆಎಂ ಮಹಿಳಾ ಕಾಲೇಜಿನಲ್ಲಿ ಮಾಡಿದ್ದಾರೆ.

2023ರ ನವೆಂಬರ್‌ನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ, 2024 ಜನವರಿಯಲ್ಲಿ ಮೌಖಿಕ ಪರೀಕ್ಷೆಯ ಅಂಕಗಳ ಆಧಾರದ ಮೇಲೆ 33 ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಿಸಲಾಗಿದೆ. ಇವರಲ್ಲಿ ಸುಮಾ ಸಹ ಒಬ್ಬರಾಗಿದ್ದು, ಮೂರನೇ ಪ್ರಯತ್ನದಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಕುಟುಂಬ ನಿರ್ವಹಣೆಗೆ ಆಟೋ ಚಾಲನೆ

ಸುಮಾ ಅವರ ಕುಟುಂಬದಲ್ಲಿ ಮೂರು ಜನ ಆಟೋ ಚಾಲನೆ ಮಾಡುತ್ತಿದ್ದಾರೆ. ಸುಮಾ ಅವರ ಅಣ್ಣ, ತಮ್ಮ ಹಾಗೂ ತಂದೆ ಮೂರೂ ಜನ ಆಟೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಸುಮಾ ಅವರು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಸಣ್ಣ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುಸು ಹಿನ್ನಡೆ ಉಂಟಾಗಿತ್ತು. ಈ ಎಲ್ಲ ಸವಾಲುಗಳನ್ನು ದಾಟಿ, ಈಗ ಸುಮಾ ಅವರು ನ್ಯಾಯಾಧೀಶರಾಗಿರುವುದು ಬಡತನ ಮತ್ತು ಸಮಸ್ಯೆಗಳು ಹೆಣ್ಣಿನ ಸಾಧನೆಯ ಕನಸಿಗೆ ಕಡಿವಾಣವಾಗಲಾರವು ಎಂಬುದನ್ನು ಸಾಬೀತುಮಾಡಿದೆ.

Next Story