ಐಪಿಎಲ್: ಸನ್ ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್
ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ವಿಶ್ವಕಪ್ ವಿಜೇತ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಹೊಸ ನಾಯಕನನ್ನಾಗಿ ಮಾರ್ಚ್ 4 ರಂದು ನೇಮಿಸಿದೆ. 2023ರ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಈ ವೇಗದ ಬೌಲರ್‌ನ್ನು ಎಸ್‌ಆರ್‌ಹೆಚ್ 20.50 ಕೋಟಿ ರೂ. ಖರೀದಿಸಿತು. ಇವರು ಐಪಿಎಲ್ ನ ಎರಡನೇ ದುಬಾರಿ ಆಟಗಾರ.
ಮಾರ್ಕ್ರಮ್ ಬದಲು ಕಮ್ಮಿನ್ಸ್: 2023ರ ಋತುವಿನಲ್ಲಿ ಎಸ್ ಆರ್ ಎಚ್ ಅನ್ನು ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಮ್ ಮುನ್ನಡೆಸಿದ್ದರು. ಕಮ್ಮಿನ್ಸ್ ಈ ಮೊದಲು ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಡಿದ್ದಾರೆ. ಆದರೆ, ಇದೇ ಮೊದಲ ಬಾರಿ ನಾಯಕತ್ವದ ಹಹೊಣೆ ಹೊತ್ತಿದ್ದಾರೆ. ಆದರೆ, ಅವರು ಆಸ್ಟ್ರೇಲಿಯದ ನಾಯಕರಾಗಿ ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು 2023 ರ ಒಡಿಐ ವಿಶ್ವಕಪ್‌ನಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಎರಡೂ ಗೆಲುವುಗಳು ಭಾರತದ ವಿರುದ್ಧ ಬಂದಿವೆ.
ಕಮಿನ್ಸ್ ಅವರ ಐಪಿಎಲ್ ದಾಖಲೆ: 42 ಐಪಿಎಲ್ ಪಂದ್ಯಗಳಲ್ಲಿ 45 ವಿಕೆಟ್‌ಗಳನ್ನು ಗಳಿಸಿದ್ದು, 4/34 ಅವರ ಅತ್ಯುತ್ತಮ ಸಾಧನೆಯಾಗಿದೆ. 18.95 ಸರಾಸರಿಯಲ್ಲಿ 379 ರನ್ ಮತ್ತು ಔಟಾಗದೆ 66 ರನ್ ಗಳಿಸಿದ್ದಾರೆ. 2014 ರಲ್ಲಿ ಕೆಕೆಆರ್ ಗಾಗಿ ಐಪಿಎಲ್ ಪದಾರ್ಪಣೆ ಮಾಡಿದರು. ಆದರೆ, ಆ ಋತುವಿನಲ್ಲಿ ಕೇವಲ ಒಂದು ಪಂದ್ಯದಲ್ಲಿ ಆಡಿದರು. 2017 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕೆಲವು ವರ್ಷ ಐಪಿಎಲ್‌ನಿಂದ ಹೊರಗುಳಿದಿದ್ದರು. ಐಪಿಎಲ್ 2020ರಲ್ಲಿ15.5 ಕೋಟಿ ರೂ. ಹರಾಜಾಗಿ ದುಬಾರಿ ಆಟಗಾರನಾಗಿ ಕೆಕೆಆರ್ ಗೆ ಮರಳಿದರು. ಐಪಿಎಲ್ 2024 ರ ಋತುವಿಗೆ 20 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಬಿಡ್ ಪಡೆದ ಮೊದಲ ಆಟಗಾರರಾದರು. ಎಸ್‌ಆರ್‌ಎಚ್ ಗೆ ಕಮ್ಮಿನ್ಸ್ ಮೂರು ಋತುಗಳಲ್ಲಿ ಮೂರನೇ ನಾಯಕ.
ಹೊಸ ಮುಖ್ಯ ಕೋಚ್: ನಾಯಕತ್ವ ಬದಲಾವಣೆ ಜೊತೆಗೆ ಎಸ್‌ಆರ್‌ಎಚ್ ಹೊಸ ಮುಖ್ಯ ಕೋಚ್ ನ್ನು ಆಯ್ಕೆಮಾಡಿಕೊಂಡಿದೆ. ನ್ಯೂಜಿಲೆಂಡ್ ಎಡಗೈ ಸ್ಪಿನ್ನರ್ ಮತ್ತು ನಾಯಕ ಡೇನಿಯಲ್ ವೆಟ್ಟೋರಿ ಅಧಿಕಾರ ವಹಿಸಿಕೊಂಡರು. ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಬದಲಿಗೆ ನ್ಯೂಜಿಲೆಂಡ್‌ನ ಆಲ್‌ರೌಂಡರ್ ಜೇಮ್ಸ್ ಫ್ರಾಂಕ್ಲಿನ್ ಬೌಲಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಾರ್ಚ್ 23 ರಂದು ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಸ್ ಆರ್ ಎಚ್ ತನ್ನ ಐಪಿಎಲ್ ಅಭಿಯಾನವನ್ನು ಪ್ರಾರಂಭಿಸಲಿದೆ.