ಇಂಡಿಯ ಬ್ಲಾಕ್ ನಾಯಕರಿಂದ ಜಾತ್ಯತೀತತೆಯ ಅಣಕ: ದೇವೇಗೌಡ
x

ಇಂಡಿಯ ಬ್ಲಾಕ್ ನಾಯಕರಿಂದ ಜಾತ್ಯತೀತತೆಯ ಅಣಕ: ದೇವೇಗೌಡ


ಮಾ.9 -ಬಿಜೆಪಿ ಅಥವಾ ಶಿವಸೇನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಟಿಎಂಸಿ, ಡಿಎಂಕೆ, ಮತ್ತು ಎನ್‌ಸಿಪಿಯಂತಹ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ ಜೆಡಿ (ಎಸ್) ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಇಂಡಿಯ ಒಕ್ಕೂಟದ ಜಾತ್ಯತೀತತೆಯನ್ನು ಗೇಲಿ ಮಾಡಿದರು.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರೈಲ್ವೆ ಸಚಿವರಾಗಿದ್ದರು. ಅದೇ ರೀತಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ತಂದೆ ಹಾಗೂ ಮಾಜಿ ಸಿಎಂ ಎಂ.ಕರುಣಾನಿಧಿ ಅವರು ಆರು ವರ್ಷ ಕಾಲ ಬಿಜೆಪಿಯಲ್ಲಿದ್ದರು. ಅವರ ಅಳಿಯ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು ಎಂದು ನೆನಪಿಸಿದರು. ಟಿಎಂಸಿ ಮತ್ತು ಡಿಎಂಕೆ ಇಂಡಿಯ ಒಕ್ಕೂಟದ ಭಾಗವಾಗಿವೆ.

ಹೇರಳ ಉದಾಹರಣೆಗಳಿವೆ: ʻಇಂಥ ಹಲವಾರು ನಿದರ್ಶನಗಳನ್ನು ಉಲ್ಲೇಖಿಸಬಹುದು. ಈ ದೇಶದಲ್ಲಿ ಜಾತ್ಯತೀತತೆ ಬಗ್ಗೆ ಮಾತನಾಡಿದರೆ, ಜನರು ತಮಾಷೆ ಮಾಡುತ್ತಾರೆ. ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಕೈಜೋಡಿಸಿದ್ದಾರೆ. ಮಾಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಸದಸ್ಯರೊಬ್ಬರು ಸ್ಪೀಕರ್ ಆಗಿದ್ದರು. ಇದೆಲ್ಲವೂ ಜಾತ್ಯತೀತತೆಯ ನಿಜವಾದ ಅರ್ಥಕ್ಕೆ ಸರಿಹೊಂದುವುದಿಲ್ಲʼ ಎಂದು ಹೇಳಿದರು.

ಜೆಡಿಎಸ್ ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂಬ ಕಾಂಗ್ರೆಸ್‌ನ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಎಷ್ಟು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ? ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಾತ್ರʼ ಎಂದು ವ್ಯಂಗ್ಯವಾಡಿದರು.

ಮೋದಿ ಅತ್ಯಂತ ಎತ್ತರದ ನಾಯಕ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿ,ʻ ಮೋದಿ ವಾಜಪೇಯಿಗಿಂತ ಭಿನ್ನ. ವಾಜಪೇಯಿ ಅವರ ನಾಯಕತ್ವದಲ್ಲಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 180 ಕ್ಕಿಂತ ಹೆಚ್ಚು ಸ್ಥಾನ ದಾಟಲು ಸಾಧ್ಯವಾಗಲಿಲ್ಲ. ಆದರೆ, ಮೋದಿ 282 ಸ್ಥಾನ ಮತ್ತು ಎನ್ಡಿಎ ಪಾಲುದಾರರೊಂದಿಗೆ 350 ಕ್ಕೂ ಹೆಚ್ಚು ಸ್ಥಾನ ಗಳಿಸಿದರು. ಈಗ ಅವರು 400 ಸ್ಥಾನ ದಾಟುವ ಗುರಿ ಹೊಂದಿದ್ದಾರೆʼ ಎಂದು ಹೇಳಿದರು.

ಕಾಂಗ್ರೆಸ್‌ ಶಕ್ತಿಹೀನ: ʻ ಕಳೆದ 10 ವರ್ಷಗಳಿಂದ ನಿರಂಕುಶ ಪ್ರಭುತ್ವವಿದೆ ಮತ್ತು ಕೆಲವು ಕ್ರೋನಿ ಕ್ಯಾಪಿಟಲಿಸ್ಟ್‌ಗಳು ಲಾಭ ಪಡೆದಿದ್ದಾರೆ. ಬಡವರು ಮತ್ತು ಅರ್ಹರಿಗೆ ಲಾಭವಾಗಲಿಲ್ಲʼ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ,ʻ ಕಾಂಗ್ರೆಸ್‌ಗೆ ಯಾವ ಶಕ್ತಿಯಿದೆ ಮತ್ತು ಅವರು ಎಷ್ಟು ಸ್ಥಾನ ನಿರೀಕ್ಷಿಸಬಹುದು? ಸಂಸತ್ತಿನ ಎರಡು ಅವಧಿಗಳಲ್ಲಿ ವಿರೋಧ ಪಕ್ಷದ ಮನ್ನಣೆ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಬಗ್ಗೆ ಮಾತನಾಡುವುದರಿಂದ ಪ್ರಯೋಜನವಿಲ್ಲʼ ಎಂದು ಟೀಕಿಸಿದರು.

ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸೀಟು ಹಂಚಿಕೆ ಸೂತ್ರದ ಕುರಿತು,ʻ ತಮ್ಮ ಪಕ್ಷವು ಯಾವುದೇ ಷರತ್ತುಗಳನ್ನು ಹಾಕಿಲ್ಲʼ ಎಂದು ಹೇಳಿದರು.

ಕುಮಾರಸ್ವಾಮಿ ಪ್ರಶ್ನಾತೀತ ನಾಯಕ: ʻನಾಳೆ ಏನಾಗಲಿದೆ ಎಂದು ನಾನು ಊಹಿಸಲು ಸಾಧ್ಯವಿಲ್ಲ. ಕುಮಾರಸ್ವಾಮಿ ನಾಯಕರು. ಅವರ ನಾಯಕತ್ವ ಪ್ರಶ್ನಾತೀತ. ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸುತ್ತಾರೆ ಮತ್ತು ಸೂಕ್ತ ಒಪ್ಪಂದ ಮಾಡಿಕೊಳ್ಳುತ್ತಾರೆʼ ಎಂದು ಹೇಳಿದರು.

Read More
Next Story