ಫೆಬ್ರವರಿ 21 ರಂದು ನಾಲ್ಕು ರಾಜ್ಯಗಳಲ್ಲಿ ಧರಣಿ: ರಾಕೇಶ್ ಟಿಕಾಯತ್
x

ಫೆಬ್ರವರಿ 21 ರಂದು ನಾಲ್ಕು ರಾಜ್ಯಗಳಲ್ಲಿ ಧರಣಿ: ರಾಕೇಶ್ ಟಿಕಾಯತ್


ಮುಜಫರ್‌ನಗರ (ಯುಪಿ), ಫೆ 17:‌ ಎಂಎಸ್‌ಪಿ ಕಾನೂನು ಖಾತರಿ ಸೇರಿದಂತೆ ರೈತರ ಬೇಡಿಕೆಗಳನ್ನುಪೂರೈಸಲು ಒತ್ತಾಯಿಸಿ ಫೆಬ್ರವರಿ 21 ರಂದು ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಧರಣಿ ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್‌ ಶನಿವಾರ ಹೇಳಿದ್ದಾರೆ.

ಸಿಸೌಲಿಯಲ್ಲಿ ನಡೆದ ಪಂಚಾಯತ್‌ನಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟಿಕಾಯತ್, ರೈತರ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಳ್ಳದಿದ್ದಲ್ಲಿ ಫೆಬ್ರವರಿ ಕೊನೆಯ ವಾರದಲ್ಲಿ ದೆಹಲಿಗೆ ಟ್ರ್ಯಾಕ್ಟರ್ ಮೆರವಣಿಗೆ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಸಂಯುಕ್ತ ಕಿಸಾನ್ ಮೋರ್ಚಾ (ರಾ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿರುವ ರೈತರ ‘ದೆಹಲಿ ಚಲೋ’ ಮೆರವಣಿಗೆ ಶನಿವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಪಂಜಾಬಿನ ರೈತರು ಮಂಗಳವಾರ ದೆಹಲಿಗೆ ತಮ್ಮ ಮೆರವಣಿಗೆ ಪ್ರಾರಂಭಿಸಿದರು ಆದರೆ, ಹರಿಯಾಣದ ಪಂಜಾಬ್‌ನ ಗಡಿಯಲ್ಲಿರುವ ಶಂಭು ಮತ್ತು ಖಾನೌರಿಗಳಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ತಡೆದರು. ಅಂದಿನಿಂದ ಈ ಗಡಿ ಬಿಂದುಗಳಲ್ಲಿ ಪ್ರತಿಭಟನಾಕಾರರು ತಂಗಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಖಾತರಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ವಿದ್ಯುತ್ ದರ ಹೆಚ್ಚಳ ಹಾಗೂ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ʻ2021 ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ಪರಿಹಾರ, ಭೂಸ್ವಾಧೀನ ಕಾಯಿದೆ 2013 ರ ಮರುಸ್ಥಾಪನೆ ಮತ್ತು 2020-21 ರಲ್ಲಿ ಹಿಂದಿನ ಆಂದೋಲನದ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎನ್ನುವುದು ರೈತರ ಬೇಡಿಕೆಗಳಾಗಿವೆ. ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಮತ್ತು ರೈತ ಮುಖಂಡರ ನಾಲ್ಕನೇ ಸುತ್ತಿನ ಮಾತುಕತೆ ಭಾನುವಾರ ನಡೆಯಲಿದೆ. ಫೆಬ್ರವರಿ 8, 12 ಮತ್ತು 15 ರಂದು ಎರಡೂ ಕಡೆಯವರು ಭೇಟಿಯಾದರು. ಆದರೆ, ಮಾತುಕತೆ ಸಫಲವಾಗಿಲ್ಲ.

ಹರಿಯಾಣ ಮತ್ತು ಪಂಜಾಬ್‌ನಲ್ಲಿ ರೈತರ ಮೇಲೆ ನಡೆದ ಪೊಲೀಸ್ ಕ್ರಮವನ್ನು ಪಂಚಾಯತ್ ಖಂಡಿಸಿದೆ. ಶಂಭು ಗಡಿಯಲ್ಲಿ ರೈತರನ್ನು ಚದುರಿಸಲು ಹರಿಯಾಣ ಪೊಲೀಸರು ಶುಕ್ರವಾರ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ ಪ್ರತಿಭಟನೆಯ ಮೊದಲ ಎರಡು ದಿನಗಳಲ್ಲಿ ರೈತರು ಮತ್ತು ಹರಿಯಾಣ ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡೆಯಿತು. ರೈತರ ಪರವಾಗಿ ಯಾವುದೇ ತ್ಯಾಗಕ್ಕೂ ಕುಟುಂಬದ ಸದಸ್ಯರು ಸಿದ್ಧರಿದ್ದಾರೆ ಎಂದು ಟಿಕಾಯತ್ ಹೇಳಿದ್ದಾರೆ.

Read More
Next Story