ಪಂಜಾಬ್: ರೈತರಿಂದ 'ರೈಲ್ ರೋಕೋ' ಪ್ರತಿಭಟನೆ
ಚಂಡೀಗಢ, ಮಾ.10- ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿದ್ದ ‘ರೈಲ್ ರೋಕೋ’ ಪ್ರತಿಭಟನೆಯ ಭಾಗವಾಗಿ ರೈತರು ಭಾನುವಾರ ಪಂಜಾಬ್‌ನ ಹಲವೆಡೆ ರೈಲ್ವೆ ಹಳಿಗಳ ಮೇಲೆ ಧರಣಿ ನಡೆಸಿದರು.
ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸದ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ರೈಲು ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಪ್ರತಿಭಟನೆ ನಡೆಯಲಿದೆ.
ಪಂಜಾಬ್‌ನಲ್ಲಿ ಅಮೃತಸರ, ಲೂಧಿಯಾನ, ತರಣ್ ತರಣ್, ಹೋಶಿಯಾರ್‌ಪುರ್, ಫಿರೋಜ್‌ಪುರ, ಫಜಿಲ್ಕಾ, ಸಂಗ್ರೂರ್, ಮಾನ್ಸಾ, ಮೊಗಾ ಮತ್ತು ಭಟಿಂಡಾ ಸೇರಿದಂತೆ 22 ಜಿಲ್ಲೆಗಳ 52 ಸ್ಥಳಗಳಲ್ಲಿ ರೈಲ್ವೆ ಹಳಿ ಮೇಲೆ ಕುಳಿತುಕೊಳ್ಳುವುದಾಗಿ ರೈತರು ಘೋಷಿಸಿದ್ದರು. ಪ್ರತಿಭಟನೆ ಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಮನವಿ ಮಾಡಿದ್ದರು.
ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರುವ ಭಾರತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರಹನ್), ಬಿಕೆಯು (ದಕೌಂಡ-ಧನೇರ್) ಮತ್ತು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಕೂಡ 'ರೈಲ್ ರೋಕೋ' ಆಂದೋಲನದಲ್ಲಿ ಭಾಗವಹಿಸುತ್ತಿವೆ.
ರೈತರ 2020-21 ಆಂದೋಲನವನ್ನು ಮುನ್ನಡೆಸಿದ್ದ ಎಸ್‌ಎಕೆಎಂ 'ದೆಹಲಿ ಚಲೋ' ಪ್ರತಿಭಟನೆಯ ಭಾಗವಾಗಿಲ್ಲ. ಆದರೆ, ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಮತ್ತು ಖನೌರಿ ಪಾಯಿಂಟ್‌ಗಳಲ್ಲಿ ನಡೆಯುತ್ತಿರುವ ಆಂದೋಲನಕ್ಕೆ ತನ್ನ ಬೆಂಬಲ ನೀಡಿದೆ. ಎಂಎಸ್‌ಪಿ ಕಾನೂನು ಖಾತರಿ ಜೊತೆಗೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರ ಹೆಚ್ಚಳ ವಾಪಸು, ರೈತರ ಮೇಲೆ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು 2021 ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಪಂಜಾಬಿನ ಪ್ರತಿಭಟನಾ ನಿರತ ರೈತರು ಫೆಬ್ರವರಿ 13 ರಿಂದ ಶಂಭು ಮತ್ತು ಖನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಭದ್ರತಾ ಪಡೆಗಳು ದೆಹಲಿಯತ್ತ ಸಾಗದಂತೆ ಅವರನ್ನು ತಡೆದವು.
ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಐದು ವರ್ಷಗಳ ಕಾಲ ಸರ್ಕಾರಿ ಸಂಸ್ಥೆಗಳಿಂದ ಎಂಎಸ್‌ಪಿ ದರದಲ್ಲಿ ಖರೀದಿಸುವ ಕೇಂದ್ರದ ಪ್ರಸ್ತಾವನೆಯನ್ನು ರೈತ ಮುಖಂಡರು ತಿರಸ್ಕರಿಸಿದ್ದಾರೆ.