
ಸಾಯಿಬಾಬಾ ಜೈಲಿನಿಂದ ಬಿಡುಗಡೆ
ನಾಗ್ಪುರ, ಮಾ.7- ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ ಎರಡು ದಿನಗಳ ನಂತರ ದೆಹಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಅವರನ್ನು ಗುರುವಾರ ನಾಗ್ಪುರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.
ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯ ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಅವರನ್ನು 2017 ರಿಂದ ನಾಗಪುರ ಜೈಲಿನಲ್ಲಿ ಇರಿಸಲಾಗಿತ್ತು. 2014 ರಿಂದ 2016 ರವರೆಗೆ ಜೈಲಿನಲ್ಲಿದ್ದ ಅವರಿಗೆ ಆನಂತರ ಜಾಮೀನು ನೀಡಲಾಗಿತ್ತು.
ʻನನ್ನ ಆರೋಗ್ಯ ತೀರ ಹದಗೆಟ್ಟಿದೆ. ಮಾತನಾಡಲು ಸಾಧ್ಯವಿಲ್ಲ. ನಾನು ಮೊದಲು ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳಬೇಕು.ಆನಂತರವಷ್ಟೇ ಮಾತನಾಡಬಹುದುʼ ಎಂದು ಗಾಲಿಕುರ್ಚಿಯಲ್ಲಿರುವ ಸಾಯಿಬಾಬಾ ಜೈಲಿನಿಂದ ಹೊರಬಂದ ನಂತರ ಸುದ್ದಿಗಾರರಿಗೆ ತಿಳಿಸಿದರು. ಜೈಲಿನ ಹೊರಗೆ ಕುಟುಂಬದ ಸದಸ್ಯರು ಅವರಿಗೋಸ್ಕರ ಕಾಯುತ್ತಿದ್ದರು.
ಮಾರ್ಚ್ 2017 ರಲ್ಲಿ ಗಡ್ಚಿರೋಲಿಯ ಸೆಷನ್ಸ್ ನ್ಯಾಯಾಲಯ ಸಾಯಿಬಾಬಾ, ಪತ್ರಕರ್ತ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸೇರಿದಂತೆ ಐವರಿಗೆ ಶಿಕ್ಷೆ ವಿಧಿಸಿತ್ತು.