ಶಿಕಾರಿಪುರದಲ್ಲೇ ಅಪ್ಪ– ಮಕ್ಕಳ ಶಿಕಾರಿ ಮಾಡುವೆ: ಏಕವಚನದಲ್ಲೇ ಈಶ್ವರಪ್ಪ ವಾಗ್ದಾಳಿ !
x
ಕೆ.ಎಸ್‌ ಈಶ್ವರಪ್ಪ

ಶಿಕಾರಿಪುರದಲ್ಲೇ ಅಪ್ಪ– ಮಕ್ಕಳ ಶಿಕಾರಿ ಮಾಡುವೆ: ಏಕವಚನದಲ್ಲೇ ಈಶ್ವರಪ್ಪ ವಾಗ್ದಾಳಿ !

ʻನೀನಿನ್ನೂ ಬಚ್ಚಾ, ನನ್ನ ಬಗ್ಗೆ ಹಗುರಾಗಿ ಮಾತನಾಡಿದರೆ ಹುಷಾರ್‌ʼ ಎಂದು ಕೆ.ಎಸ್‌ ಈಶ್ವರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಿರುವ ಹಿನ್ನೆಲೆಯಲ್ಲಿ ಪಕ್ಷ ಶಿಸ್ತು ಕ್ರಮ ಜರುಗಿಸಲಿದೆ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯ ಘಟಕದ ಬಿ.ವೈ ವಿಜಯೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿ, ಬಿಜೆಪಿ ಹಿರಿಯ ನಾಯಕ ಕೆ ಎಸ್‌ ಈಶ್ವರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻಪುಕ್ಸಟ್ಟೆ ಮಾತು ಹಾಗೂ ವಿಜಯೇಂದ್ರನ ಮಾತುಗಳಿಗೆ ನಾನು ಬೆಲೆ ಕೊಡಲ್ಲ. ನೀನಿನ್ನೂ ಬಚ್ಚಾ. ನಿಮ್ಮಪ್ಪನ ಶ್ರಮದಿಂದ ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದೀಯ. ಇದನ್ನು ನೆನಪು ಇಟ್ಟುಕೊಂಡು ಮಾತನಾಡಬೇಕುʼ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ʻಪಕ್ಷಕ್ಕಾಗಿ ನಾನು 40 ವರ್ಷ ತಪಸ್ಸು ಮಾಡಿದ್ದೇನೆ. ನನ್ನನ್ನು ಟೀಕೆ ಮಾಡುವ ಯೋಗ್ಯತೆ ನಿನಗಿಲ್ಲ. ರಾಜ್ಯಾಧ್ಯಕ್ಷನಾಗಲು ಕೇಂದ್ರಕ್ಕೆ (ದೆಹಲಿ) ಹೋಗಿ 6 ತಿಂಗಳು ಮೇಲಿನವರಿಗೆ ಒತ್ತಡ ಹಾಕಿ, ಅಧ್ಯಕ್ಷನಾಗಿದ್ದು ಬಿಟ್ಟರೆ,.. ನಿನಗೆ ಬಾಯಿಗೆ ಬಂದಂತೆ ಮಾತನಾಡಲು ಅವಕಾಶ ಕೊಟ್ಟಿರುವೆ ಅಂದುಕೊಂಡಿರುವೆಯಾ ಹುಷಾರ್ʼ ಎಂದು ಎಚ್ಚರಿಸಿದ್ದಾರೆ.

ʻಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗುವುದಕ್ಕೆ ನಿನಗೇನು ಯೋಗ್ಯತೆ ಇದೆ. ನಿಮ್ಮಪ್ಪ ಪಕ್ಷಕ್ಕಾಗಿ ಶ್ರಮ ಹಾಕಿರುವುದಕ್ಕೆ ನೀನು ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದೀಯ. ಶಿವಮೊಗ್ಗದ ಜನರಿಗೆ ನಾನೇನು ಕೆಲಸ ಮಾಡಿದ್ದೇನೆ ಎನ್ನುವುದು ಗೊತ್ತಿದೆ. ಶಿಕಾರಿಪುರದಲ್ಲಿ 60 ಸಾವಿರವಿದ್ದ ಲೀಡ್ ಈಗ 10 ಸಾವಿರಕ್ಕೆ ಇಳಿದಿದೆ. ನಿನಗೆ ಶಿವಮೊಗ್ಗ ನಗರದ ಜನತೆ ಬಗ್ಗೆ ಗೊತ್ತಿಲ್ಲ. ತಿಣುಕಾಡಿ 10 ಸಾವಿರ ಮತ ತೆಗೆದುಕೊಂಡಿದ್ದೀಯ. ಈ ಲೀಡ್‌ಗಾಗಿ ಎಷ್ಟು ಕೋಟಿ ಖರ್ಚು ಮಾಡಿರುವೆ ಎಂದು ತಿಳಿದಿದೆ. ಮುಂದಿನ ಚುನಾವಣೆಯಲ್ಲಿ ನಿನ್ನ ಹಣೆಬರಹ ಗೊತ್ತಾಗುತ್ತೆ. ಹಗುರವಾಗಿ ಮಾತನಾಡಿದರೆ, ಬೇರೆ ಭಾಷೆಯಲ್ಲಿ ನಾನು ಉತ್ತರಿಸುತ್ತೇನೆʼ ಎಂದು ಹೇಳಿದರು.

ʻನಾನು ಬಿಜೆಪಿಯಿಂದ ಹೊರಗೆ ಬಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎನ್ನುವುದು ಸಹ ರಾಜ್ಯಾಧ್ಯಕ್ಷನಿಗೆ ಗೊತ್ತಿಲ್ಲ. ನಾನು ಬಿಜೆಪಿಯಲ್ಲೇ ಇಲ್ಲದಿರುವಾಗ ನೀನೇನು ಶಿಸ್ತು ಕ್ರಮ ತೆಗೆದುಕೊಳ್ಳುವೆಯೋ ತೆಗೆದುಕೋ. ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ಹೆದರುವವನಲ್ಲ ನಾನು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು. ಕೇಂದ್ರದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕುಟುಂಬ ರಾಜಕಾರಣವನ್ನು ಪ್ರಧಾನಿ ನರೇಂದ್ರ ಮೋದಿ ವಿರೋಧಿಸುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಅಪ್ಪ-ಮಕ್ಕಳು ಕುಟುಂಬ ರಾಜಕಾರಣ ನಡೆದಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕಾರಿಪುರದಲ್ಲೇ ಅಪ್ಪ– ಮಕ್ಕಳ ಶಿಕಾರಿ ಮಾಡುವೆ!

ʻಶಿವಮೊಗ್ಗದ ಶಿಕಾರಿಪುರದಲ್ಲೇ ಅಪ್ಪ- ಮಕ್ಕಳ ಶಿಕಾರಿ ಮಾಡುವೆʼ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ʻಪಕ್ಷಕ್ಕೆ ವಿಜಯೇಂದ್ರನ ಕೊಡುಗೆ ಏನು. ಅವನಿಗೆ ಬಾಯಿಗೆ ಬಂದಂತೆ ಮಾತನಾಡಲು ಅವಕಾಶ ಕೊಟ್ಟಿಲ್ಲʼ ಎಂದಿದ್ದಾರೆ.

Read More
Next Story