ಚುನಾವಣಾ ಬಾಂಡ್: ‌ ಗಡುವು ವಿಸ್ತರಿಸಲು ಎಸ್‌ಬಿಐ ಮನವಿ
x

ಚುನಾವಣಾ ಬಾಂಡ್: ‌ ಗಡುವು ವಿಸ್ತರಿಸಲು ಎಸ್‌ಬಿಐ ಮನವಿ


ಹೊಸದಿಲ್ಲಿ, ಮಾ.4- ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಕಾಲಾವಕಾಶ ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿ̧ಯಾ, ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ತನ್ನ ತೀರ್ಪಿನಲ್ಲಿ ಮಾರ್ಚ್ 6 ರೊಳಗೆ ಚುನಾವಣೆ ಆಯೋಗಕ್ಕೆ ವಿವರಗಳನ್ನು ಒದಗಿಸುವಂತೆ ಎಸ್‌ಬಿಐಗೆ ಸೂಚಿಸಿತ್ತು. ಎಸ್‌ಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಪ್ರತಿಯೊಂದು ಸಂಗ್ರಹಾಗಾರದಿಂದ ಮಾಹಿತಿ ಮರು ಪಡೆಯುವುದು ಮತ್ತು ಒಂದು ಸಂಗ್ರಹಾಗಾರದ ಮಾಹಿತಿಯನ್ನು ಇನ್ನೊಂದಕ್ಕೆ ಹೊಂದಿಸುವ ಪ್ರಕ್ರಿಯೆ ಸಮಯ ತೆಗೆದುಕೊಳ್ಳು ತ್ತದೆ ಎಂದು ಹೇಳಿದೆ.

ದಾನಿಗಳ ಗುರುತನ್ನು ಅನಾಮಧೇಯವಾಗಿ ಇಡುವುದನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ, ಬಾಂಡ್‌ಗಳನ್ನು ಡಿಕೋಡಿಂಗ್ ಮಾಡುವುದು ಮತ್ತು ದೇಣಿಗೆ ಗಳು- ದಾನಿ ಗಳನ್ನು ಹೊಂದಿಸುವುದು ಕ್ಲಿಷ್ಟವಾಗಿದೆ ಎಂದು ಮನವಿಯಲ್ಲಿ ಹೇಳಿದೆ.

ʻಬಾಂಡ್‌ನ ವಿತರಣೆ ಮತ್ತು ವಿಮೋಚನೆಗೆ ಸಂಬಂಧಿಸಿದ ದತ್ತಾಂಶವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಇರಿಸಲಾಗಿದೆ. ಇದಕ್ಕೆ ಯಾವುದೇ ಕೇಂದ್ರೀಯ ದತ್ತಾಂಶಮೂಲವನ್ನು ಸೃಷ್ಟಿಸಿಲ್ಲ. ದಾನಿಗಳ ಅನಾಮಧೇಯತೆಯನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆʼ ಎಂದು ತಿಳಿಸಿದೆ.

ʻದಾನಿಗಳ ವಿವರಗಳನ್ನು ಶಾಖೆಗಳಲ್ಲಿ ಮುಚ್ಚಿದ ಕವರ್‌ನಲ್ಲಿ ಇರಿಸಲಾಗಿದೆ ಮತ್ತು ಎಲ್ಲಾ ಮೊಹರಾದ ಕವರ್‌ಗಳನ್ನು ಮುಂಬೈನಲ್ಲಿರುವ ಬ್ಯಾಂಕ್‌ನ ಮುಖ್ಯ ಶಾಖೆಯಲ್ಲಿ ಇರಿಸಲಾಗಿದೆʼ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆಡಳಿತ ಪಕ್ಷಕ್ಕೆ ಭಾರಿ ಹೊಡೆತ ನೀಡಿದ ಫೆ.15ರ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ , ಚುನಾವಣೆ ಬಾಂಡ್‌ ಯೋಜನೆ ರದ್ದುಗೊಳಿಸಿತು. ಬಾಂಡ್‌ಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕು ಮತ್ತು ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿತ್ತು.

ಲೋಕಸಭೆ ಚುನಾವಣೆಗೆ ಮುನ್ನ ನೀಡಿದ ತೀರ್ಪಿನಲ್ಲಿ ಕೊಡುಗೆ ನೀಡಿದವರ ಹೆಸರನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಎಸ್‌ಬಿಐಗೆ ಮು.ನ್ಯಾ.ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಆದೇಶಿಸಿತ್ತು.

Read More
Next Story