ಚುನಾವಣೆ ಬಾಂಡ್:‌ ಮಾ.12ರೊಳಗೆ ವಿವರ ಸಲ್ಲಿಸುವಂತೆ ಎಸ್‌ಬಿಐಗೆ ಸೂಚನೆ
x

ಚುನಾವಣೆ ಬಾಂಡ್:‌ ಮಾ.12ರೊಳಗೆ ವಿವರ ಸಲ್ಲಿಸುವಂತೆ ಎಸ್‌ಬಿಐಗೆ ಸೂಚನೆ


ಹೊಸದೆಹಲಿ, ಮಾ.11-ರಾಜಕೀಯ ಪಕ್ಷಗಳು ನಗದು ಮಾಡಿಕೊಂಡ ಚುನಾವಣಾ ಬಾಂಡ್‌ ಗಳ ವಿವರವನ್ನು ಮಾ.12ರೊಳಗೆ ಬಹಿರಂಗಪಡಿಸಬೇಕೆಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.ಜೂನ್ 30 ರವರೆಗೆ ಕಾಲಾವಕಾಶ ನೀಡಬೇಕೆಂಬ ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಸಲ್ಲಿಸಿದ ಮನವಿಯನ್ನು ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಂವಿಧಾನ ಪೀಠ, ʻಮಾರ್ಚ್ 12, 2024 ರ ವ್ಯವಹಾರದ ಸಮಯದೊಳಗೆ ವಿವರ ಬಹಿರಂಗಪಡಿಸಬೇಕುʼ ಎಂದು ಎಸ್‌ಬಿಐಗೆ ನಿರ್ದೇಶಿಸಿದೆ.

ಚುನಾವಣಾ ಆಯೋಗ ಮಾಹಿತಿಯನ್ನು ಸಂಗ್ರಹಿಸಿ, ವಿವರಗಳನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಮಾರ್ಚ್ 15, 2024 ರ ನಂತರ ಸಂಜೆ 5 ಗಂಟೆಯೊಳಗೆ ಪ್ರಕಟಿಸಬೇಕು ಎಂದು ಕೋರ್ಟ್ ಹೇಳಿದೆ. ʻಕಳೆದ 26 ದಿನಗಳಲ್ಲಿ ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ನಿಮ್ಮ ಅರ್ಜಿಯಲ್ಲಿ ಈ ಬಗ್ಗೆ ಏನೂ ಮಾಹಿತಿಯಿಲ್ಲʼ ಎಂದು ಪೀಠ ಪ್ರಶ್ನಿಸಿತು. ಮೊಹರು ಮಾಡಿದ ಲಕೋಟೆ ತೆರೆದು ವಿವರಗಳನ್ನು ಒಟ್ಟುಗೂಡಿಸಿ, ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಪೀಠ ಹೇಳಿತು.

ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಿದ ಕೊಡುಗೆಗಳ ವಿವರಗಳ ನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕೆಂಬ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ʻಉದ್ದೇಶಪೂರ್ವಕವಾಗಿʼ ಧಿಕ್ಕರಿಸಿದೆ ಎಂದು ಆರೋಪಿಸಿ, ಎಸ್‌ಬಿಐ ವಿರುದ್ಧ ನಿಂದನೆ ಕ್ರಮವನ್ನು ಪ್ರಾರಂಭಿಸಲು ಕೋರಿರುವ ಪ್ರತ್ಯೇಕ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಲಿಸಲಿದೆ.

ಹಿನ್ನೆಲೆ: ಸಂವಿಧಾನ ಪೀಠ ಫೆಬ್ರವರಿ 15 ರಂದು ನೀಡಿದ ಮಹತ್ವದ ತೀರ್ಪಿನಲ್ಲಿ ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿತು. ಇದನ್ನು ʻಅಸಾಂವಿಧಾನಿಕʼ ಎಂದು ಹೇಳಿ, ದಾನಿಗಳು ನೀಡಿದ ದೇಣಿಗೆ ನೀಡಿದ ಮೊತ್ತವನ್ನು ಬಹಿರಂಗಪಡಿಸುವಂತೆ ಆದೇಶಿಸಿತು.

2019ರ ಏಪ್ರಿಲ್ 12 ರಿಂದ ಇಲ್ಲಿಯವರೆಗೆ ಖರೀದಿಸಲಾದ ಚುನಾವಣೆ ಬಾಂಡ್‌ಗಳ ವಿವರಗಳನ್ನು ಮಾರ್ಚ್ 6 ರೊಳಗೆ ಸಲ್ಲಿಸುವಂತೆ ಎಸ್‌ಬಿಐಗೆ ಸೂಚಿಸಿ, ಮಾ.13ರೊಳಗೆ ಅಧಿಕೃತ ಮಾಹಿತಿಯನ್ನು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ತಿಳಿಸಲಾಯಿತು. ಎಸ್‌ ಬಿಐ ಮಾರ್ಚ್ 4 ರಂದು ವಿವರ ಬಹಿರಂಗಪಡಿಸಲು ಜೂನ್ 30 ರವರೆಗೆ ಕಾಲಾವಧಿ ವಿಸ್ತರಿಸುವಂತೆ ಕೋರಿ, ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

ನ್ಯಾಯಾಂಗ ನಿಂದನೆ ಅರ್ಜಿ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಕಾಮನ್ ಕಾಸ್ ಸಂಘಟನೆಗಳು ಎಸ್‌ಬಿಐ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಉಲ್ಲಂಘಿಸಿದೆ ಎಂದು ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕೆಂದು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದವು.

Read More
Next Story