ಆರು ರಾಜ್ಯಗಳ ಗೃಹ ಕಾರ್ಯದರ್ಶಿ, ಬಂಗಾಳದ ಡಿಜಿಪಿ ವರ್ಗ
ಲೋಕಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗೆ ಸಮಾನಾವಕಾಶ ನೀಡಲು ಚುನಾವಣೆ ಆಯೋಗವು ಗುಜರಾತ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ಸೋಮವಾರ ವರ್ಗಾಯಿಸಿದೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ), ಮಿಜೋರಾಂ ಮತ್ತು ಹಿಮಾಚಲ ಪ್ರದೇಶದ ಸಾಮಾನ್ಯ ಆಡಳಿತ ಇಲಾಖೆಗಳ ಕಾರ್ಯದರ್ಶಿಗಳನ್ನು ಸ್ಥಳಾಂತರಿಸಿದೆ. ಸಿಇಸಿ ರಾಜೀವ್ ಕುಮಾರ್ ನೇತೃತ್ವದ ಚುನಾವಣಾ ಆಯೋಗವು ಬೃಹನ್‌ಮುಂಬೈ ಮುನ್ಸಿಪಲ್ ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್, ಹೆಚ್ಚುವರಿ ಆಯುಕ್ತ ಮತ್ತು ಉಪ ಆಯುಕ್ತರ ಸ್ಥಳಾಂತರಕ್ಕೆ ಆದೇಶಿಸಿದೆ. ತವರು ಜಿಲ್ಲೆಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ವರ್ಷ ಸೇವೆ ಪೂರೈಸಿರುವ ಚುನಾವಣೆ ಸಂಬಂಧಿತ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಯೋಗ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಮಹಾರಾಷ್ಟ್ರ ಕೆಲವು ಮುನ್ಸಿಪಲ್ ಕಮಿಷನರ್‌ಗಳು, ಹೆಚ್ಚುವರಿ ಮತ್ತು ಉಪ ಮುನ್ಸಿಪಲ್ ಕಮಿಷನರ್‌ಗಳಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ಪಾಲಿಸಿರಲಿಲ್ಲ.
ಸೋಮವಾರ ಸಂಜೆ 6 ಗಂಟೆಯೊಳಗೆ ವರದಿ ನೀಡುವಂತೆ ಆಯೋಗ ಸೂಚಿಸಿತ್ತು. ಮಹಾರಾಷ್ಟ್ರದ ಇತರ ಕಾರ್ಪೊರೇಷನ್‌ಗಳ ಮುನ್ಸಿಪಲ್ ಕಮಿಷನರ್‌ಗಳು, ಹೆಚ್ಚುವರಿ ಅಥವಾ ಉಪ ಮುನ್ಸಿಪಲ್ ಕಮಿಷನರ್‌ಗಳನ್ನು ವರ್ಗಾವಣೆ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಸಿಇಸಿ ಕುಮಾರ್, ಸಹ ಇಸಿಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರನ್ನು ಒಳಗೊಂಡ ಆಯೋಗ ಸೋಮವಾರ ಸಭೆ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.