
ಮಾ.16 ರಂದು ಹಾಜರಾಗಲು ಕೇಜ್ರಿವಾಲ್‌ಗೆ ಸಮನ್ಸ್
ದೆಹಲಿ ನ್ಯಾಯಾಲಯ ಮಾರ್ಚ್ 16ರಂದು ಹಾಜರಾಗಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅನೇಕ ಸಮನ್ಸ್‌ಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂದು ಇಡಿ ಹೇಳಿತ್ತು. ಜಾರಿ ನಿರ್ದೇಶನಾಲಯದ ಇತ್ತೀಚಿನ ದೂರಿನ ಪ್ರಕಾರ, ಕೇಜ್ರಿವಾಲ್ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಳುಹಿಸಿದ ಸಮನ್ಸ್‌ಗಳನ್ನು ಗೌರವಿಸಿಲ್ಲ.
ಮೋದಿ ವಿರುದ್ಧ ಕಿಡಿ: ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರು ಮಾರ್ಚ್ 16 ರಂದು ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಡಿ ಮೂಲಕ ʻಕಿರುಕುಳʼ ನೀಡುತ್ತಿದ್ದು, ವಿರೋಧ ಪಕ್ಷದ ನಾಯಕರನ್ನು ಬಿಜೆಪಿಗೆ ಸೇರಲು ಒತ್ತಡ ಹೇರುತ್ತಿದ್ದಾರೆ ಎಂದು ಎಕ್ಸ್‌ನ ಪೋಸ್ಟ್‌ನಲ್ಲಿ ಕೇಜ್ರಿವಾಲ್ ಆರೋಪಿಸಿದ್ದಾರೆ. ತಾವು ಬಿಜೆಪಿ ಸೇರಿದರೆ, ನೋಟಿಸ್ ನಿಲ್ಲುತ್ತದೆ ಎಂದು ಹೇಳಿದ್ದಾರೆ.
'ಬಿಜೆಪಿಯೋ ಅಥವಾ ಜೈಲು?': ʻನೀವು ಎಲ್ಲಿಗೆ ಹೋಗುತ್ತೀರಿ - ಬಿಜೆಪಿ ಅಥವಾ ಜೈಲು? ಬಿಜೆಪಿಗೆ ಸೇರಲು ನಿರಾಕರಿಸಿದವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಬಿಜೆಪಿ ಸೇರಿದರೆ ನಾಳೆ ಜಾಮೀನು ಸಿಗುತ್ತದೆ. ನಾನು ಬಿಜೆಪಿಗೆ ಸೇರಿದರೆ ಇಡಿ ಸಮನ್ಸ್ ನೀಡುವುದನ್ನು ನಿಲ್ಲಿಸುತ್ತದೆʼ ಎಂದು ಅವರು ಹೇಳಿದರು.
ಸಮಯ ಅತ್ಯಂತ ಶಕ್ತಿಯುತವಾದುದು ಮತ್ತು ಅದು ಬದಲಾಗುತ್ತ ಇರುತ್ತದೆ ಎಂದು ಕೇಜ್ರಿವಾಲ್ ಹೇಳಿದರು. ʻಒಬ್ಬ ವ್ಯಕ್ತಿಯನ್ನು ಯಾವ ಆಧಾರದಲ್ಲಿ ಕರೆಸಲಾಗುತ್ತಿದೆ ಎಂಬುದನ್ನು ಇಡಿ ತಿಳಿಸಬೇಕು ಎಂದು ನ್ಯಾಯಾಲಯದ ಹಲವು ತೀರ್ಪುಗಳು ಹೇಳಿವೆ. ಆದರೆ, ಕೇಂದ್ರ ಸರ್ಕಾರ ನ್ಯಾಯಾ ಲಯದ ಆದೇಶಗಳನ್ನು ಪಾಲಿಸಲು ನಿರಾಕರಿಸುತ್ತದೆ ಮತ್ತು ತಾನು ಕಾನೂನಿಗಿಂತ ದೊಡ್ಡವನು ಎಂದು ಭಾವಿಸಿದೆʼ ಎಂದು ಹೇಳಿದ್ದಾರೆ.
ದೆಹಲಿ ಸಿಎಂ ಇದುವರೆಗೆ ಇಡಿಯ ಎಂಟು ಸಮನ್ಸ್‌ಗಳನ್ನು ತಪ್ಪಿಸಿದ್ದಾರೆ ಮತ್ತು ಈ ಸಮನ್ಸ್‌ಗಳನ್ನು ʻಕಾನೂನುಬಾಹಿರʼ ಎಂದು ಹೇಳಿದ್ದಾರೆ. ಎಎಪಿ ಗೋವಾ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ 45 ಕೋಟಿ ರೂ. ʻಅಪರಾಧದ ಆದಾಯʼವನ್ನು ಬಳಸಿಕೊಂಡಿದೆ ಎಂದು ಇಡಿ ಹೇಳಿಕೊಂಡಿದೆ.