ಎನ್‌ ಸಿಪಿ ಮಾನ್ಯತೆ: ಆಯೋಗದ ತೀರ್ಪಿಗೆ ಶರದ್ ಪವಾರ್ ಬಣ ಅಸಮಾಧಾನ
x

ಎನ್‌ ಸಿಪಿ ಮಾನ್ಯತೆ: ಆಯೋಗದ ತೀರ್ಪಿಗೆ ಶರದ್ ಪವಾರ್ ಬಣ ಅಸಮಾಧಾನ

ಪ್ರಜಾಪ್ರಭುತ್ವದ ಕೊಲೆ ಎಂದ ಶರದ್ ಪವಾರ್ ಗುಂಪು


ನವದೆಹಲಿ: ಮಹಾರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಹಾಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಣವೇ ನಿಜವಾದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಎಂದು ಚುನಾವಣಾ ಆಯೋಗ ಮಂಗಳವಾರ ಘೋಷಿಸಿದೆ. ಇದೀಗ, ಪಕ್ಷ ವಿಷಯದಲ್ಲಿ ಕಳೆದ ಒಂದು ವರ್ಷದಿಂದ ಸಂಸ್ಥಾಪಕ ಶರದ್ ಪವಾರ್‌ ಮತ್ತು ಅಜಿತ್‌ ಪವಾರ್ ನಡುವಿನ ಸಮರ ಅಂತ್ಯಕಂಡಂತಾಗಿದೆ.

ಚುನಾವಣಾ ಆಯೋಗವು (EC) ನೀಡಿರುವ ಆದೇಶದಲ್ಲಿ ಅಜಿತ್ ಪವಾರ್ ನೇತೃತ್ವದ ಗುಂಪಿಗೆ ಎನ್‌ಸಿಪಿ ಚಿಹ್ನೆ 'ಗೋಡೆ ಗಡಿಯಾರ'ವನ್ನು ಸಹ ಹಂಚಿಕೆ ಮಾಡಿದೆ.

ಉಭಯ ಬಣಗಳು ಪಕ್ಷದ ಸಂವಿಧಾನ ಮತ್ತು ಸಾಂಸ್ಥಿಕ ಚುನಾವಣೆಗಳ ಹೊರತಾಗಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ವಿಧಾನಸಭಾ ಬಹುಮತ ಸಾಬೀತು ಸಂದರ್ಭದಲ್ಲಿ ಸದನದಲ್ಲಿ ಬಣದ ಬಹುಮತವನ್ನು ಪರಿಗಣಿಸಿ ಈ ಆದೇಶ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ. ಇದೇ ವೇಳೆ, ಮುಂಬರುವ ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬುಧವಾರ ಮಧ್ಯಾಹ್ನದ ವೇಳೆಗೆ ತನ್ನ ರಾಜಕೀಯ ಸಂಘಟನೆಗೆ ಹೆಸರು ಸೂಚಿಸುವ ಮೂರು ಪ್ರಸ್ತಾವಗಳನ್ನು ಸಲ್ಲಿಸಲು ಶರದ್ ಪವಾರ್ ನೇತೃತ್ವದ ಬಣಕ್ಕೆ ಆಯೋಗ ಅವಕಾಶ ನೀಡಿದೆ.

ಎನ್ ಸಿಪಿ ಪಕ್ಷದ ಸಂಸ್ಥಾಪಕರಾದ ಶರದ್ ಪವಾರ್ ರವರ ಬಣ ರಾಜಕೀಯ ಪಕ್ಷದ ರೂಪ ಕೊಡಲು ಹೊಸ ಹೆಸರು ಹಾಗೂ ಹೊಸ ಚಿಹ್ನೆಯನ್ನು ಕೊಡಬೇಕು ಎಂದು ಆಯೋಗ ಸೂಚಿಸಿದೆ. ಮೂರು ಹೆಸರುಗಳನ್ನು ಹಾಗೂ ಮೂರು ಚಿಹ್ನೆಗಳನ್ನು ತನಗೆ ಸಲ್ಲಿಸಬೇಕು, ಅವುಗಳಲ್ಲಿ ಒಂದು ಹೆಸರು ಹಾಗೂ ಒಂದು ಚಿಹ್ನೆಯನ್ನು ಆಯೋಗವು ಆಯ್ಕೆ ಮಾಡಲಿದೆ. ಆ ಹಿನ್ನೆಲೆಯಲ್ಲಿ ಫೆ.7ರ ಮಧ್ಯಾಹ್ನ 3 ಗಂಟೆಯೊಳಗೆ ಈ ಹೆಸರು, ಚಿಹ್ನೆಗಳನ್ನು ಸಲ್ಲಿಸಬೇಕೆಂದು ಹೇಳಿದೆ.

ಕಳೆದ ವರ್ಷ ಪಕ್ಷದ ನಿಯಂತ್ರಣಕ್ಕಾಗಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವೆ ಕದನ ಆರಂಭವಾದಾಗಿನಿಂದ ಪಕ್ಷದ 53 ಶಾಸಕರಲ್ಲಿ 12 ಮಂದಿ ಮಾತ್ರ ಶರದ್ ಪವಾರ್ ಅವರನ್ನು ಬೆಂಬಲಿಸುತ್ತಿದ್ದಾರೆ. ಉಳಿದ 41 ಶಾಸಕರು ಅಜಿತ್ ಪವಾರ್ ಬೆನ್ನಿಗಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ-ಶಿವಸೇನೆ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ.

ಆಯೋಗದ ತೀರ್ಮಾನ ಪ್ರಜಾಪ್ರಭುತ್ವದ ಕೊಲೆ

ಪಕ್ಷದ ಬಹುಪಾಲು ಕಾರ್ಯಕರ್ತರು ಮತ್ತು ಚುನಾಯಿತ ಪ್ರತಿನಿಧಿಗಳು ಅಜಿತ್ ಪವಾರ್ ಅವರೊಂದಿಗಿದ್ದಾರೆ ಎಂದು ಚುನಾವಣಾ ಆಯೋಗದ ತೀರ್ಪು ಸಾಬೀತುಪಡಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವ ಮತ್ತು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ.

ಆದರೆ, ಚುನಾವಣಾ ಆಯೋಗವು ಒತ್ತಡದಲ್ಲಿ ಅಜಿತ್ ಪವಾರ್ ಬಣವನ್ನು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಎಂದು ಘೋಷಿಸಿದೆ ಎಂದು ಶರದ್ ಪವಾರ್ ನೇತೃತ್ವದ ಗುಂಪಿನ ನಾಯಕರೊಬ್ಬರು ಮಂಗಳವಾರ ಹೇಳಿದ್ದಾರೆ.

"ಎನ್‌ಸಿಪಿ ಸ್ಥಾಪಿಸಿದವರು ಯಾರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಹೀಗಿರುವಾಗ ಚುನಾವಣಾ ಆಯೋಗದ ತೀರ್ಪು ಪ್ರಜಾಪ್ರಭುತ್ವದ ಕೊಲೆ" ಎಂದು ಶರದ್ ಪವಾರ್ ಬಣದ ಹಿರಿಯ ನಾಯಕ ಅನಿಲ್ ದೇಶಮುಖ್ ಹೇಳಿದ್ದಾರೆ

"ಮೇಲಿನವರ ಒತ್ತಡದಲ್ಲಿ" ಚುನಾವಣಾ ಸಮಿತಿಯು ಈ ತೀರ್ಪನ್ನು ನೀಡಿದೆ ಎಂದು ದೇಶಮುಖ್ ಟಿವಿ ಚಾನೆಲ್‌ವೊಂದಕ್ಕೆ ಪ್ರತಿಕ್ರಿಯಿದ್ದಾರೆ.

Read More
Next Story