Delhi Chalo: ದೆಹಲಿಯಲ್ಲಿ ಸಂಚಾರ ದಟ್ಟಣೆ, ಜನ ಹೈರಾಣು
x
ದೆಹಲಿ ಚಲೋ ಭಾರೀ ಭದ್ರತೆ

Delhi Chalo: ದೆಹಲಿಯಲ್ಲಿ ಸಂಚಾರ ದಟ್ಟಣೆ, ಜನ ಹೈರಾಣು

ದೆಹಲಿಯತ್ತ ರೈತರ ದಾಪುಗಾಲು, ಭಾರೀ ಪೊಲೀಸ್‌ ಭದ್ರತೆ


ರೈತರೊಂದಿಗೆ ಕೇಂದ್ರ ಸರ್ಕಾರದ ಮಾತುಕತೆ ವಿಫಲವಾಗಿದ್ದು, ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದ್ದಾರೆ. ಇದರ ಬೆನ್ನಲ್ಲೇ “ದೆಹಲಿ ಚಲೋ” ಆಂದೋಲನ ತೀವ್ರಗೊಂಡಿದೆ.

ರೈತರು ದೆಹಲಿಯತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸಿದ್ದಾರೆ.

ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ, ರೈತರು ಮೆರವಣಿಗೆ ಪ್ರಾರಂಭಿಸಲು ಉದ್ದೇಶಿಸಿದ್ದರು. ಕೆಲವು ಯುವ ರೈತರು ಪಂಜಾಬ್ ಮತ್ತು ಹರಿಯಾಣದ ಶಂಭು ಗಡಿ ಭಾಗದಲ್ಲಿ ಪೊಲೀಸರು ಹಾಕಿರುವ ಬಹು- ಹಂತದ ಬ್ಯಾರಿಕೇಡ್‌ಗಳನ್ನು ದಾಟಿ ಹೋಗಲು ಪ್ರಯತ್ನಿಸಿದರು. ಆದರೆ, ಇದನ್ನು ತಡೆಯಲು ಹರಿಯಾಣದ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು.

ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಧರಣಿ ನಿರತ ರೈತರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಅಲ್ಲದೇ ಶಾಂತಿಯುತ ಪರಿಹಾರಕ್ಕಾಗಿ ರೈತರು ಮಾತುಕತೆಗೆ ಬರಬೇಕು ಎಂದು ಅವರು ಮನವಿ ಮಾಡಿದ್ದಾರೆ.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗಾಗಿ ಸಾಕಷ್ಟು ಕೆಲಸ ಮಾಡಿದೆ ಎಂದರು.

ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಪ್ರತಿಭಟನಾ ನಿರತ ರೈತರೊಂದಿಗೆ ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಯಾವುದೇ ಪರಿಹಾರ ಮಾತುಕತೆ ಮತ್ತು ಚರ್ಚೆಗಳಿಂದ ಮಾತ್ರ ಸಾಧ್ಯ ಎಂದಿದ್ದಾರೆ.

ರೈತ ಆಂದೋಲನ ಶಾಂತಿಯುತವಾಗಿರಲಿ: ರೈತ ಮುಖಂಡ

ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಮಾತನಾಡಿ, ರೈತರು ಶಾಂತಿಯುತವಾಗಿ ದೆಹಲಿ ಚಲೋ ನಡೆಸಲಿದ್ದಾರೆ. ಶಾಂತಿಯನ್ನು ಕದಡುವುದು ನಮ್ಮ ಉದ್ದೇಶವಲ್ಲ. ಕೇಂದ್ರ ಸರ್ಕಾರವು ರೈತರ ಬೇಡಿಕೆಗಳನ್ನು ಈಡೇರಿಸುವ ಬದಲು ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲಿ ರೈತರು ಮುಂದೆ ಹೋಗದಂತೆ ಕೇಂದ್ರ ಸರ್ಕಾರ ಬಹು- ಹಂತದ ಬ್ಯಾರಿಕೇಡ್‌ಗಳನ್ನು ಹಾಕಿರುವುದು ಖಂಡನೀಯ ಎಂದರು.

ನಾವು ಶಾಂತಿಯುತವಾಗಿ ದೆಹಲಿ ಚಲೋ ನಡೆಸಲು ಅವಕಾಶ ಕಲ್ಪಿಸಬೇಕು. ಸರ್ಕಾರವೇ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಬೇಕು ಮತ್ತು ದೆಹಲಿಯತ್ತ ಮೆರವಣಿಗೆ ನಡೆಸಲು ಅನುಮತಿ ನೀಡಬೇಕು. ದೆಹಲಿಯಲ್ಲಿ ನಾವು ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಭಾರಿ ಭದ್ರತೆ: ಹೆಚ್ಚಾಯ್ತು ಸಂಚಾರ ದಟ್ಟಣೆ

ರೈತರು ದೆಹಲಿ ಚಲೋ ಆಂದೋಲವನ್ನು ಚುರುಕುಗೊಳಿಸಿದ ನಂತರದಲ್ಲಿ ದೆಹಲಿಯಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಹೀಗಾಗಿ, ದೆಹಲಿ ಹಾಗೂ ದೆಹಲಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ದೆಹಲಿ ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಕಾನೂನು ಸುವ್ಯವಸ್ಥೆಯ ಉದ್ದೇಶದಿಂದ ಭಾರೀ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದ್ದು, ಇದರಿಂದ ದೆಹಲಿ-ಗುರುಗ್ರಾಮ್, ದೆಹಲಿ-ಬಹದ್ದೂರ್‌ಗಢ್ ಸೇರಿದಂತೆ ದೆಹಲಿಯ ವಿವಿಧೆಡೆ ಸಂಚಾರ ದಟ್ಟಣೆ ಎದುರಾಗಿದೆ.

ದೆಹಲಿ ಮತ್ತು ಹರಿಯಾಣ ಗಡಿ ಪ್ರದೇಶದಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಕಾಂಕ್ರೀಟ್ ಮತ್ತು ಕಬ್ಬಿಣದ ಮೊಳೆಗಳನ್ನು ಹೊಡೆಯಲಾಗಿದ್ದು, ಹಲವು ಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಅಗತ್ಯವಿದ್ದರೆ, ಗಾಜಿಪುರ ಗಡಿಯನ್ನು ಬುಧವಾರವೂ ಮುಚ್ಚಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈತರನ್ನು ತಡೆಯಲು ಸಿದ್ಧತೆ

ದೆಹಲಿ ಗಡಿಯಲ್ಲಿ ರೈತರನ್ನು ತಡೆಯಲು ದೆಹಲಿ ಪೊಲೀಸರು ಸನ್ನದ್ಧರಾಗಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಪ್ರತಿಭಟನಾ ನಿರತ ರೈತರು ಅಥವಾ ಯಾವುದೇ ಭಾರೀ ವಾಹನಗಳನ್ನು ದೆಹಲಿಗೆ ಪ್ರವೇಶಿಸದಂತೆ ತಡೆಯಲು ಭದ್ರತಾ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ.

ಇನ್ನು ದೆಹಲಿ ಪೊಲೀಸರು ಈಗಾಗಲೇ 30,000 ಅಶ್ರುವಾಯು ಶೆಲ್‌ಗಳನ್ನು ಸಂಗ್ರಹಿಸಿದ್ದಾರೆ. ದೆಹಲಿಯ ಕೇಂದ್ರ ಭಾಗಕ್ಕೆ ಹೋಗುವ ವಿವಿಧ ರಸ್ತೆಗಳಲ್ಲಿ ವಾಹನಗಳನ್ನು ತಪಾಸಣೆ ಮಾಡುವುದರಿಂದ ಬುಧವಾರ ಸಂಚಾರ ದಟ್ಟಣೆ ಉಂಟಾಗಿದೆ.

Read More
Next Story