ಚಂಡೀಗಢ:  ಬಿಜೆಪಿಗೆ ಹಿರಿಯ ಉಪ ಮೇಯರ್,  ಉಪ ಮೇಯರ್ ಸ್ಥಾನ
x

ಚಂಡೀಗಢ: ಬಿಜೆಪಿಗೆ ಹಿರಿಯ ಉಪ ಮೇಯರ್, ಉಪ ಮೇಯರ್ ಸ್ಥಾನ


ಚಂಡೀಗಢ ಮಹಾನಗರ ಪಾಲಿಕೆಯ ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಸೋಮವಾರ ನಡೆದ ಮರು ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ.

ಜನವರಿ 30 ರಂದು ನಡೆದ ಮೇಯರ್ ಚುನಾವಣೆಯಲ್ಲಿ ಗೆದ್ದಿದ್ದ ಬಿಜೆಪಿಯ ಮನೋಜ್ ಸೋಂಕರ್ ಅವರನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ಫೆಬ್ರವರಿ 20 ರಂದು ಎಎಪಿ ಕೌನ್ಸಿಲರ್ ಕುಲದೀಪ್ ಕುಮಾರ್ ಅವರನ್ನು ಹೊಸ ಮೇಯರ್ ಎಂದು ಘೋಷಿಸಿತು. ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಚುನಾವಣೆಗೆ ಮೇಯರ್ ಅಧ್ಯಕ್ಷರಾಗಿದ್ದು, ಸೋಮವಾರ ಚುನಾವಣೆ ನಡೆಯಿತು.

ಹಿರಿಯ ಉಪ ಮೇಯರ್ ಹುದ್ದೆಗೆ ಬಿಜೆಪಿಯ ಕುಲ್ಜೀತ್ ಸಂಧು ಅವರು ಕಾಂಗ್ರೆಸ್‌ನ ಗುರುಪ್ರೀತ್ ಗಾಬಿ ಅವರನ್ನು ಸೋಲಿಸಿದರು. ಸಂಧು 19 ಹಾಗೂ ಗಾಬಿ 16 ಮತ ಪಡೆದರು. ಒಂದು ಮತ ಅಸಿಂಧುಗೊಂಡಿತು. ಬಿಜೆಪಿಯ ರಾಜಿಂದರ್ ಶರ್ಮಾ ಅವರು ಕಾಂಗ್ರೆಸ್‌ನ ನಿರ್ಮಲಾ ದೇವಿ ಅವರನ್ನು ಸೋಲಿಸಿ ಉಪಮೇಯರ್ ಸ್ಥಾನಕ್ಕೆ ಆಯ್ಕೆಯಾದರು. 36 ಮತಗಳ ಪೈಕಿ ವಿಜೇತ ಅಭ್ಯರ್ಥಿ 19 ಮತ ಪಡೆದರು. ಬಿಜೆಪಿ ಕಳೆದ ಬಾರಿಯೂ ಇದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಮತ್ತು ಅವರು ಗೆದ್ದಿದ್ದರು.

35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ 17, ಎಎಪಿ 10, ಕಾಂಗ್ರೆಸ್ ಏಳು ಹಾಗೂ ಶಿರೋಮಣಿ ಅಕಾಲಿದಳದ ಒಬ್ಬ ಕೌನ್ಸಿಲರ್‌ ಇದ್ದಾರೆ. ಚಂಡೀಗಢ ಸಂಸದೆ ಕಿರಣ್ ಖೇರ್ ಅವರು ಪಾಲಿಕೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.

Read More
Next Story