ಇಡಿ, ಐಟಿ, ಸಿಬಿಐ ದಾಳಿಗೊಳಗಾದ ಸಂಸ್ಥೆಗಳಿಂದ ದೇಣಿಗೆ: ತನಿಖೆಗೆ ಕಾಂಗ್ರೆಸ್ ಆಗ್ರಹ
ಬಿಜೆಪಿಯು ಐಟಿ, ಇಡಿ, ಸಿಬಿಐನಂತಹ ಕೇಂದ್ರ ತನಿಖಾ ಸಂಸ್ಥೆಗಳಿಂದ ದಾಳಿಗೊಳಗಾದ 'ಸಂಶಯಾಸ್ಪದ' ಕಾರ್ಪೊರೇಟ್ ದಾನಿಗಳಿಂದ ದೇಣೀಗೆ ಸಂಗ್ರಹಿಸಿದೆ ಎಂಬ ಆರೋಪ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಫೆಬ್ರವರಿ 23 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದ ಪತ್ರದಲ್ಲಿ, ಈ ʻಸಂಶಯಾಸ್ಪದʼ ಸಂಸ್ಥೆಗಳು ಏಕೆ ಆಡಳಿತ ಪಕ್ಷಕ್ಕೆ ದೇಣಿಗೆ ನೀಡುತ್ತಿದ್ದಾರೆ ಎಂಬುದನ್ನು ತಿಳಿಸಬೇಕೆಂದು ಒತ್ತಾಯಿಸಿದ್ದಾರೆ.
ʻದಾಖಲಾದ ಪ್ರಕರಣ ಅಥವಾ ತನಿಖಾ ಸಂಸ್ಥೆಗಳು ತೆಗೆದುಕೊಂಡ ಕ್ರಮಗಳು ಕಾನೂನುಬಾಹಿರವೆಂದು ನಾವು ಆರೋಪಿಸುವುದಿಲ್ಲ. ಆದರೆ, ಈ ʻಸಂಶಯಾಸ್ಪದʼ ಸಂಸ್ಥೆಗಳು ಆಡಳಿತ ಪಕ್ಷ ಬಿಜೆಪಿಗೆ ಏಕೆ ದೇಣಿಗೆ ನೀಡುತ್ತಿವೆ ಎಂಬ ಕುರಿತ ಪ್ರಶ್ನೆ ಇದು. ತನಿಖಾ ಸಂಸ್ಥೆಗಳ ದಾಳಿ ನಂತರ ಅವರು ಬಿಜೆಪಿಗೆ ದೇಣಿಗೆ ನೀಡುತ್ತಿರುವುದು ಕೇವಲ ಕಾಕತಾಳೀಯವೇ?ʼ ಎಂದು ಕೇಳಿದ್ದಾರೆ.
ತನಿಖಾ ವರದಿ: ಆನ್‌ಲೈನ್ ಸುದ್ದಿ ವೇದಿಕೆಗಳಾದ ನ್ಯೂಸ್ ಲಾಂಡ್ರಿ ಮತ್ತು ನ್ಯೂಸ್ ಮಿನಿಟ್‌ನಲ್ಲಿ ಪ್ರಕಟವಾದ ತನಿಖಾ ವರದಿಯನ್ನು ಉಲ್ಲೇಖಿಸಿರುವ ಅವರು, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆಯಿಂದ ದಾಳಿಗೆ ಒಳಪಟ್ಟ 30 ಕಂಪನಿಗಳು ಬಿಜೆಪಿಗೆ 335 ಕೋಟಿ ರೂ. ದೇಣಿಗೆ ನೀಡಿರುವುದಾಗಿ ವರದಿ ಯಾಗಿದೆ. ಗಮನಾರ್ಹ ಅಂಶವೆಂದರೆ, ಪಕ್ಷಕ್ಕೆ 187.58 ಕೋಟಿ ರೂ. ದೇಣಿಗೆ ನೀಡಿದ ಈ ಸಂಸ್ಥೆಗಳ ಪೈಕಿ 23 ಕಂಪನಿಗಳು 2014ರಿಂದ ದಾಳಿ ನಡೆದ ವರ್ಷದವರೆಗೆ ಬಿಜೆಪಿಗೆ ಯಾವುದೇ ದೇಣಿಗೆ ನೀಡಿರಲಿಲ್ಲ. ಈ ಪೈಕಿ ನಾಲ್ಕು ಕಂಪನಿಗಳು ದಾಳಿ ನಡೆದ ನಾಲ್ಕು ತಿಂಗಳೊಳಗೆ 9.05 ಕೋಟಿ ರೂ. ದೇಣಿಗೆ ನೀಡಿವೆ. ಬಿಜೆಪಿಗೆ ದೇಣಿಗೆ ನೀಡುತ್ತಿದ್ದ ಆರು ಸಂಸ್ಥೆಗಳು ದಾಳಿ ಬಳಿಕ ಹೆಚ್ಚು ಮೊತ್ತವನ್ನು ಹಸ್ತಾಂತರಿಸಿದವು ಎಂದಿದ್ದಾರೆ.
ಕಾನೂನು ಸುಲಿಗೆ: ಮೇಲಿನ ನಿದರ್ಶನಗಳು ಆಡಳಿತ ಪಕ್ಷಕ್ಕೆ ದೇಣಿಗೆ ರೂಪದಲ್ಲಿ ʻಕಾನೂನು ಸುಲಿಗೆʼಯ ಸ್ಪಷ್ಟ ಪ್ರಕರಣ. ಈ ಸುಲಿಗೆ ಕೇವಲ ʻಮಂಜುಗಡ್ಡೆಯ ತುದಿʼ ಇದು. ಐಟಿ, ಇಡಿ, ಸಿಬಿಐಗಳಲ್ಲಿ ಎರಡು ಹಣಕಾಸು ಸಚಿವಾಲಯದ ಅಧೀನದಲ್ಲಿ ಬರುತ್ತವೆ. ಈ ಸಂಸ್ಥೆಗಳು ನಡೆಸಿದ ದುರಾಚಾರಗಳಿಗೆ ಹಣಕಾಸು ಸಚಿವಾಲಯ ಹೊಣೆಗಾರ ಎಂದು ದೂರಿದ್ದಾರೆ.
ಸಂಸ್ಥೆಗಳ ದುರುಪಯೋಗಕ್ಕೆ ಸಂಬಂಧಿಸಿದಂತೆ ಸಚಿವಾಲಯ ʻಶ್ವೇತಪತ್ರʼ ಬಿಡುಗಡೆ ಮಾಡುತ್ತದೆಯೇ ಎಂದು ಸಚಿವರಾದ ಸೀತಾರಾಮನ್ ಅವರನ್ನು ಕೇಳಿದರು. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಬಿಜೆಪಿ ಸಿದ್ಧವಿದೆಯೇ? ಎಂದು ಪ್ರಶ್ನಿಸಿದರು.
ಇ.ಡಿ. ಪ್ರಕರಣಗಳಲ್ಲಿ ನಾಲ್ಕು ಪಟ್ಟು ಹೆಚ್ಚಳ: 2014 ರಿಂದ ರಾಜಕಾರಣಿಗಳ ವಿರುದ್ಧದ ಇಡಿ ಪ್ರಕರಣಗಳು 4 ಪಟ್ಟು ಹೆಚ್ಚಿವೆ. ಶೇ.95 ಪ್ರಕರಣಗಳು ವಿರೋಧ ಪಕ್ಷದ ನಾಯಕರ ವಿರುದ್ಧವಾಗಿವೆ. ಕ್ಷುಲ್ಲಕ ಆರೋಪ ಹೊರಿಸಿ ಕಾಂಗ್ರೆಸ್‌ಗೆ ಆದಾಯ ತೆರಿಗೆ ನೋಟಿಸ್ ನೀಡಿ, ನಮ್ಮಿಂದ ಹಣ ಸುಲಿಗೆ ಮಾಡುತ್ತಿದೆ. ಈ ಹಣ ದೇಶದ ಜನರ ಸಣ್ಣ ದೇಣಿಗೆಗಳ ಮೂಲಕ ಬಂದಿದೆ. ಚುನಾವಣೆಯ ಹೊಸ್ತಿಲಲ್ಲಿ ಸ್ಪರ್ಧೆಯನ್ನು ಹತ್ತಿಕ್ಕುವ ಷಡ್ಯಂತ್ರ ಇದುʼ ಎಂದು ದೂರಿದ್ದಾರೆ.