ಚೀನಾ: ನಾನ್‌ಜಿಂಗ್‌ನಲ್ಲಿ ಬೆಂಕಿಗೆ 15 ಸಾವು, 44 ಮಂದಿ ಗಾಯ
x
ಪ್ರಾತಿನಿಧಿಕ ಚಿತ್ರ

ಚೀನಾ: ನಾನ್‌ಜಿಂಗ್‌ನಲ್ಲಿ ಬೆಂಕಿಗೆ 15 ಸಾವು, 44 ಮಂದಿ ಗಾಯ


ಬೀಜಿಂಗ್, ಫೆ.24- ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ ರಾಜಧಾನಿ ನಾನ್‌ಜಿಂಗ್‌ನಲ್ಲಿ ಕಟ್ಟಡವೊಂದಕ್ಕೆ ಬೆಂಕಿ ತಗುಲಿ ಕನಿಷ್ಠ 15 ಮಂದಿ ಸಾವಿಗೀಡಾಗಿದ್ದಾರೆ. ಒಂದು ತಿಂಗಳು ಹಿಂದೆ ಇಂಥದ್ದೇ ಬೆಂಕಿಗೆ 39 ಮಂದಿ ಮೃತಪಟ್ಟಿದ್ದರು.

ಶುಕ್ರವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಅಪಘಾತದಲ್ಲಿ ಗಾಯಗೊಂಡ 44 ಮಂದಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿ ವಿದ್ಯುತ್ ಬೈಸಿಕಲ್‌ ಗಳನ್ನು ಇರಿಸಲಾಗಿತ್ತು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಒಂದು ತಿಂಗಳ ಅವಧಿಯಲ್ಲಿ ಚೀನಾದಲ್ಲಿ ಸಂಭವಿಸಿದ ಎರಡನೇ ದೊಡ್ಡ ಅಗ್ನಿ ಅವಘಡ ಇದಾಗಿದೆ. ಜನವರಿ 24 ರಂದು ಪೂರ್ವ ಚೀನಾದ ಜಿಯಾಂಗ್ಕ್ಸಿ ಪ್ರಾಂತ್ಯದ ಕ್ಸಿನ್ಯು ನಗರದ ಅಂಗಡಿಯೊಂದರಲ್ಲಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ 39 ಜನರು ಮೃತಪಟ್ಟಿದ್ದರು.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಇಂತಹ ಅಪಘಾತಗಳನ್ನು ತಡೆದು, ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಮತ್ತು ಸಾಮಾಜಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಆದೇಶಿಸಿದ್ದಾರೆ.

ಕಟ್ಟಡ ಮತ್ತು ಸುರಕ್ಷತಾ ಮಾನದಂಡಗಳನ್ನು ಸಮರ್ಪಕವಾಗಿ ಜಾರಿಗೊಳಿಸದೆ ಇರುವುದರಿಂದ, ಚೀನಾದಲ್ಲಿ ಬೆಂಕಿ ಅಪಘಾತಗಳು ಸಾಮಾನ್ಯವಾಗಿದೆ. ಜನವ ರಿ 20 ರಂದು ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಶಾಲಾ ವಸತಿ ನಿಲಯದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 13 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇವರೆಲ್ಲರೂ ಮೂರನೇ ತರಗತಿಯ ವಿದ್ಯಾರ್ಥಿಗಳು. 2023ರ ನವೆಂಬರ್‌ನಲ್ಲಿ ಶಾಂಕ್ಸಿ ಪ್ರಾಂತ್ಯದ ಲುಲಿಯಾಂಗ್ ನಗರದಲ್ಲಿನ ಬೆಂಕಿಗೆ ಜನರು ಬಲಿಯಾಗಿದ್ದರು. 2023ರ ಏಪ್ರಿಲ್‌ನಲ್ಲಿ ಬೀಜಿಂಗ್‌ನಲ್ಲಿನ ಆಸ್ಪತ್ರೆಯ ಬೆಂಕಿಯು ಕನಿಷ್ಠ 29 ಜನರನ್ನು ಬಲಿ ತೆಗೆದುಕೊಂಡಿತು.

Read More
Next Story