ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಕುದುರೆ ವ್ಯಾಪಾರ: ಸುಪ್ರೀಂ ಕೋರ್ಟ್‌
x

ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಕುದುರೆ ವ್ಯಾಪಾರ: ಸುಪ್ರೀಂ ಕೋರ್ಟ್‌


ಚಂಡೀಗಢದ ಮೇಯರ್ ಚುನಾವಣೆಯಲ್ಲಿ ʻಕುದುರೆ ವ್ಯಾಪಾರ ನಡೆದಿದೆʼ ಎಂದಿರುವ ಸುಪ್ರೀಂ ಕೋರ್ಟ್, ಮತಪತ್ರಗಳನ್ನು ಮತ್ತು ಎಣಿಕೆಯ ದಿನದ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ಅನ್ನು ಮಂಗಳವಾರ ಪರಿಶೀಲಿಸುವುದಾಗಿ ಹೇಳಿದೆ. ದಾಖಲೆಗಳನ್ನು ಸುರಕ್ಷಿತವಾಗಿ ದೆಹಲಿಗೆ ತರಲು ನ್ಯಾಯಾಂಗ ಅಧಿಕಾರಿಯನ್ನು ನಿಯೋಜಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿದೆ.

ಇದಕ್ಕೂ ಮುನ್ನ ಮೇಯರ್ ಚುನಾವಣೆಯನ್ನು ನಡೆಸಿದ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರನ್ನು ತರಾಟೆಗೆ ತೆಗೆದುಕೊಂಡ ಕೋ ರ್ಟ್, ಅವರು ಮತಪತ್ರಗಳನ್ನು ವಿರೂಪಗೊಳಿಸಿರುವುದು ಸ್ಪಷ್ಟವಾಗಿದೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿತು. ಅವರ ಕ್ರಮ ಪ್ರಜಾಪ್ರಭುತ್ವದ ʻಕೊಲೆʼ ಮತ್ತು ʻಅಪಹಾಸ್ಯʼ ಎಂದು ಖಂಡಿಸಿತು.

ಕುದುರೆ ವ್ಯಾಪಾರ: ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಚಂಡೀಗಢ ಆಡಳಿತಕ್ಕೆ ನಿರ್ದೇಶನ ನೀಡಿದ್ದು, ಅಧಿಕಾರಿ ಮತ್ತು ದಾಖಲೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೈಕೋರ್ಟ್ ನೇಮಿಸುವ ನ್ಯಾಯಾಂಗ ಅಧಿಕಾರಿಗೆ ಭದ್ರತೆಯನ್ನು ಒದಗಿಸುವಂತೆ ಸೂಚಿಸಿದೆ. ʻನಾವೇ ಮಧ್ಯಾಹ್ನ 2 ಗಂಟೆಗೆ ದಾಖಲೆಗಳನ್ನು ಪರಿಶೀಲಿಸುತ್ತೇವೆʼ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ. ಮೇಯರ್ ಚುನಾವಣೆಯ ಪ್ರಕರಣವನ್ನು ಮಂಗಳವಾರದ ಬದಲು ಬೇರೆ ದಿನ ವಿಚಾರಣೆ ನಡೆಸಬೇಕು ಎಂದು ಮನವಿಯನ್ನುಸಿಜೆ ತಳ್ಳಿ ಹಾಕಿದರು.

ಮಸಿಹ್ ಎಸ್‌ಸಿ ಪೀಠದ ಮುಂದೆ ಹಾಜರು:

ಸುಪ್ರೀಂ ಕೋರ್ಟ್‌ನ ನಿರ್ದೇಶನದ ಅನುಸಾರವಾಗಿ ಮಸಿಹ್ ಪೀಠದ ಮುಂದೆ ಹಾಜರಾದರು ಮತ್ತು ಮತಪತ್ರಗಳನ್ನು ತಿದ್ದಿದ ಆರೋಪದ ಕುರಿತು ನ್ಯಾಯಾಧೀಶರು ಅವರನ್ನು ಪ್ರಶ್ನಿಸಿದರು. ಪ್ರಶ್ನೆಗಳಿಗೆ ಉತ್ತರಿಸಿದ ಮಸಿಹ್, ʻವಿರೂಪಗೊಂಡ ಎಂಟು ಮತಪತ್ರಗಳ ಮೇಲೆ ಎಕ್ಸ್‌ ಗುರುತು ಹಾಕಿದ್ದೇನೆ. ಆಮ್ ಆದ್ಮಿ ಪಕ್ಷದ ಕೌನ್ಸಿಲರ್‌ಗಳು ಗದ್ದಲ ಸೃಷ್ಟಿಸಿ ಮತಪತ್ರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಇದರಿಂದ ಮತ ಎಣಿಕೆ ಕೇಂದ್ರದಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ನೋಡುತ್ತಿದ್ದೆʼ ಎಂದರು. ಅವರನ್ನು ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ನೀವು ಮತಪತ್ರಗಳನ್ನು ವಿರೂಪಗೊಳಿಸಿರುವುದು ಸ್ಪಷ್ಟವಾಗಿದೆ ಎಂದಿತು.

ಎಎಪಿ ಮನವಿ: ಎಎಪಿ ವಕೀಲರಲ್ಲಿ ಒಬ್ಬರಾದ ಕುಲದೀಪ್ ಕುಮಾರ್ ಅವರು ಚಂಡೀಗಢದಲ್ಲಿ ಮೇಯರ್ ಚುನಾವಣೆಯನ್ನು ಮತ್ತೆ ನಡೆಸಬೇಕೆಂಬ ಮನವಿಯನ್ನು ನಿರಾಕರಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜನವರಿ 30 ರಂದು ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.ಪಕ್ಷದ ಮನೋಜ್ ಸೋಂಕರ್ ಅವರು ಮೇಯರ್ ಸ್ಥಾನಕ್ಕೆ ಎಎಪಿಯ ಕುಲದೀಪ್ ಕುಮಾರ್ ಅವರನ್ನು 12-6 ಮತಗಳಿಂದ ಸೋಲಿಸಿ, ಆಯ್ಕೆಯಾದರು. ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು.

ಮತಪತ್ರ ತಿರುಚಲಾಗಿದೆ: ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಸಭಾಧ್ಯಕ್ಷರು ಮತ ಚಲಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೊಸ ಮೇಯರ್ ಮನೋಜ್ ಸೋಂಕರ್ ಅವರು ನಿನ್ನೆ ತಮ್ಮ ಸ್ಥಾನಕ್ಕೆ ʻನೈತಿಕತೆʼ ಯನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದಾರೆ. ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಒಂದು ದಿನ ಮೊದಲು ಅವರು ರಾಜೀನಾಮೆ ನೀಡಿದ್ದಾರೆ. ಚುನಾವಣೆ ಬಗ್ಗೆ ಪ್ರತಿಕೂಲ ತೀರ್ಪು ಬರಬಹುದು ಎಂದು ಸೋಂಕರ್ ರಾಜೀನಾಮೆ ನೀಡಿದರು ಎಂಬ ಟೀಕೆ ವ್ಯಕ್ತವಾಗಿತ್ತು.

ಮೇಯರ್ ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಕಾಂಗ್ರೆಸ್ ಮತ್ತು ಎಎಪಿ ಸೋಂಕರ್ ಅವರನ್ನು ಪದಚ್ಯುತಗೊಳಿಸಲು ಯತ್ನಿಸುತ್ತಿವೆ. ಚುನಾವಣಾಧಿಕಾರಿ ಮಸಿಹ್ ಅವರು ಕಾಂಗ್ರೆಸ್-ಎಎಪಿ ಮೈತ್ರಿಕೂಟದ ಎಂಟು ಮತಗಳನ್ನು ಅಮಾನ್ಯಗೊಳಿಸಿದ್ದರಿಂದ ಸೋಂಕರ್ ಗೆದ್ದಿದ್ದಾರೆ ಎಂದು ಅದು ಆರೋಪಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ʻಪ್ರಜಾಪ್ರಭುತ್ವವನ್ನು ಈ ರೀತಿ ಹತ್ಯೆ ಮಾಡಲು ನಾವು ಬಿಡುವುದಿಲ್ಲʼ ಎಂದು ಹೇಳಿದ್ದರು.ಮಸಿಹ್ ಮತಪತ್ರಗಳ ಮೇಲೆ ಗೀಚಿದ ವಿಡಿಯೋ ಬಹಿರಂಗಗೊಂಡಿದ್ದು, ಸುಪ್ರೀಂ ಕೋರ್ಟ್ ಮಸಿಹ್‌ ಅವರಿಗೆ ಸೋಮವಾರ ಹಾಜರಾಗಲು ಸೂಚಿಸಿತ್ತು.

Read More
Next Story