ಚಾಮರಾಜನಗರ ಆಕ್ಸಿಜನ್ ದುರಂತ: ಜಾನ್ ಮೈಕಲ್ ಡಿಕುನ್ನಾ ವರದಿ ಸಿಎಂಗೆ ಸಲ್ಲಿಕೆ
x

ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.‌ಕುನ್ನಾ ಅವರು ತಾವು ಸಿದ್ಧಪಡಿಸಿದ ವರದಿಯನ್ನು ಸಿಎಂಗೆ ಸೋಮವಾರ ಸಲ್ಲಿಸಿದರು.  

ಚಾಮರಾಜನಗರ ಆಕ್ಸಿಜನ್ ದುರಂತ: ಜಾನ್ ಮೈಕಲ್ ಡಿ'ಕುನ್ನಾ ವರದಿ ಸಿಎಂಗೆ ಸಲ್ಲಿಕೆ

ಚಾಮರಾಜನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ ಒಟ್ಟು 24 ಸೋಂಕಿತರು (ಸರ್ಕಾರಿ ಲೆಕ್ಕದ ಪ್ರಕಾರ) ದಾರುಣವಾಗಿ ಮೃತಪಟ್ಟಿದ್ದ ಘಟನೆ ಕುರಿತ ಸತ್ಯಶೋಧನಾ ವರದಿ ಇದಾಗಿದೆ.


Click the Play button to hear this message in audio format

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ, ಮನಕಲಕುವ ಚಾಮರಾಜನಗರ ಆಕ್ಸಿಜನ್ ದುರಂತದ ತನಿಖೆ ನಡೆಸುತ್ತಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ'ಕುನ್ನಾ ಅವರ ನೇತೃತ್ವದ ಏಕಸದಸ್ಯ ಆಯೋಗವು ತನ್ನ ಅಂತಿಮ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಈ ವರದಿಯು ಅಂದಿನ ಕರಾಳ ರಾತ್ರಿಯ ಸತ್ಯಾಸತ್ಯತೆಯನ್ನು ಹೊರಗೆಡವುವ ಜೊತೆಗೆ, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಭವಿಷ್ಯ ನಿರ್ಧರಿಸುವ ಸಾಧ್ಯತೆಯಿದೆ.

2021ರ ಮೇ 2 ರ ರಾತ್ರಿ ಮತ್ತು ಮೇ 3 ರ ಮುಂಜಾನೆ. ಕೋವಿಡ್ ಎರಡನೇ ಅಲೆಯ ಭೀಕರತೆಯಲ್ಲಿದ್ದ ಕರ್ನಾಟಕಕ್ಕೆ ಚಾಮರಾಜನಗರದಿಂದ ಸಿಡಿಲಿನಂತಹ ಸುದ್ದಿಯೊಂದು ಅಪ್ಪಳಿಸಿತ್ತು. ಚಾಮರಾಜನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ ಒಟ್ಟು 24 ಸೋಂಕಿತರು (ಸರ್ಕಾರಿ ಲೆಕ್ಕದ ಪ್ರಕಾರ) ದಾರುಣವಾಗಿ ಮೃತಪಟ್ಟಿದ್ದರು. ಆದರೆ, ಹೈಕೋರ್ಟ್ ನೇಮಿಸಿದ್ದ ಸಮಿತಿಯು ನಂತರದ ದಿನಗಳಲ್ಲಿ 36 ಜನರು ಮೃತಪಟ್ಟಿದ್ದಾರೆ ಎಂದು ವರದಿ ನೀಡಿತ್ತು. ಮೈಸೂರಿನಿಂದ ಬರಬೇಕಿದ್ದ ಆಕ್ಸಿಜನ್ ಸಿಲಿಂಡರ್‌ಗಳು ಸಕಾಲದಲ್ಲಿ ತಲುಪದ ಕಾರಣ ಈ ದುರಂತ ಸಂಭವಿಸಿತ್ತು ಎಂಬ ಆರೋಪ ಕೇಳಿಬಂದಿತ್ತು.

ಡಿ'ಕುನ್ನಾ ಆಯೋಗ ರಚನೆ ಯಾಕೆ?

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಘಟನೆಯ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ್ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು. ಆದರೆ, ಆ ಸಮಿತಿಯ ವರದಿಯು ಅಧಿಕಾರಿಗಳನ್ನು ರಕ್ಷಿಸುವಂತಿದೆ ಮತ್ತು ನೈಜ ಸಂಗತಿಗಳನ್ನು ಮರೆಮಾಚಿದೆ ಎಂದು ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಈ ಪ್ರಕರಣದ ಮರು ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ'ಕುನ್ನಾ ಅವರ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಲಾಯಿತು. ಕೋವಿಡ್ ಅಕ್ರಮಗಳ ತನಿಖೆಯ ಜೊತೆಗೆ, ಚಾಮರಾಜನಗರದ ಆಕ್ಸಿಜನ್ ದುರಂತದ ತನಿಖೆಯ ಜವಾಬ್ದಾರಿಯನ್ನೂ ಇವರಿಗೆ ನೀಡಲಾಗಿತ್ತು.

ವರದಿಯಲ್ಲಿ ಏನಿರಬಹುದು?

ನ್ಯಾಯಮೂರ್ತಿ ಡಿ'ಕುನ್ನಾ ಅವರು ಸಲ್ಲಿಸಿರುವ ಈ ಅಂತಿಮ ವರದಿಯು ಅತ್ಯಂತ ಮಹತ್ವದ್ದಾಗಿದೆ. ಇದರಲ್ಲಿ ಪ್ರಮುಖವಾಗಿ ಈ ಕೆಳಗಿನ ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ ಎನ್ನಲಾಗಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಡಳಿತಗಳ ನಡುವಿನ ಸಮನ್ವಯದ ಕೊರತೆ ಮತ್ತು ಅಂದಿನ ಜಿಲ್ಲಾಧಿಕಾರಿಗಳ ಪಾತ್ರದ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಿರುವ ಸಾಧ್ಯತೆಯಿದೆ. ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಸಂಖ್ಯೆ ಎಷ್ಟೆಂಬುದರ ಬಗ್ಗೆ ಅಂತಿಮ ಸ್ಪಷ್ಟನೆ ಸಿಗಲಿದೆ. ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಲು ಕಾರಣರಾದ ನಿರ್ದಿಷ್ಟ ಅಧಿಕಾರಿಗಳು ಮತ್ತು ಇಲಾಖೆಗಳ ಮೇಲೆ ಕ್ರಮ ಕೈಗೊಳ್ಳಲು ಶಿಫಾರಸು.

Read More
Next Story