ಪ್ರೊ. ಜಿ.ಎನ್. ಸಾಯಿಬಾಬಾ ಖುಲಾಸೆ
x

ಪ್ರೊ. ಜಿ.ಎನ್. ಸಾಯಿಬಾಬಾ ಖುಲಾಸೆ


ನಾಗಪುರ, ಮಾ.5- ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ದೆಹಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿದೆ ಮತ್ತು ಅವರಿಗೆ ನೀಡಲಾದ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್‌.ಎ. ಮೆನೆಜಸ್ ಅವರ ವಿಭಾಗೀಯ ಪೀಠವು ಇತರ ಐವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿರು ವುದರಿಂದ ಖುಲಾಸೆಗೊಳಿಸುತ್ತಿರುವುದಾಗಿ ಪೀಠ ಹೇಳಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಆರೋಪಿಗಳ ವಿರುದ್ಧ ಆರೋಪ ಹೊರಿಸಲು ಪ್ರಾಸಿಕ್ಯೂಷನ್ ಪಡೆದ ಮಂಜೂರನ್ನು ʻಶೂನ್ಯ ಮತ್ತು ಅನೂರ್ಜಿತʼ ಎಂದು ಪರಿಗಣಿಸಿದೆ.

ಮೇಲ್ಮನವಿ ಸಾಧ್ಯತೆ: ಹೈಕೋರ್ಟ್‌ ತನ್ನ ಆದೇಶವನ್ನು ತಡೆಹಿಡಿಯಬೇಕೆಂದು ವಕೀಲರು ಕೋರಲಿಲ್ಲವಾದರೂ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ. ಅಕ್ಟೋಬರ್ 14, 2022 ರಂದು ಹೈಕೋರ್ಟ್‌ನ ಮತ್ತೊಂದು ಪೀಠ ಸಾಯಿಬಾಬಾ ಅವರನ್ನು ದೋಷಮುಕ್ತಗೊಳಿಸಿತು. ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಅದೇ ದಿನ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.ಸುಪ್ರೀಂ ಕೋರ್ಟ್ ಆದೇಶವನ್ನು ತಡೆಹಿಡಿಯಿತು; ಆನಂತರ ಏಪ್ರಿಲ್ 2023 ರಲ್ಲಿ ಹೈ ಕೋರ್ಟ್‌ ಆದೇಶವನ್ನು ರದ್ದುಗೊಳಿಸಿತು. ಸಾಯಿಬಾಬಾ ಅವರು ಸಲ್ಲಿಸಿದ ಮೇಲ್ಮನವಿಯನ್ನು ಹೊಸದಾಗಿ ಆಲಿಸಲು ನಿರ್ದೇಶಿಸಿತು.

ನಾಗಪುರ ಜೈಲಿನಲ್ಲಿ ಸೆರೆ: ದೈಹಿಕ ಅಸಾಮರ್ಥ್ಯದಿಂದ ಗಾಲಿಕುರ್ಚಿಯನ್ನು ಆಧರಿಸಿರುವ ಸಾಯಿಬಾಬಾ (54), 2014 ರಲ್ಲಿ ಬಂಧಿಸಲ್ಪಟ್ಟು ನಾಗಪುರ ಕೇಂದ್ರ ಕಾರಾಗೃಹದಲ್ಲಿದ್ದಾರೆ. 2017ರಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ಸಾಯಿಬಾಬಾ, ಪತ್ರಕರ್ತ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು)ದ ವಿದ್ಯಾರ್ಥಿ ಸೇರಿದಂತೆ ಐವರನ್ನು ಮಾವೋವಾದಿ ಸಂಪರ್ಕ ಮತ್ತು ದೇಶದ ವಿರುದ್ಧ ಯುದ್ಧ ಸಾರಿದ ಆರೋಪಕ್ಕೆ ಶಿಕ್ಷೆ ವಿಧಿಸಿತು.

ಯುಎಪಿಎ ಮತ್ತು ಐಪಿಸಿ ವಿವಿಧ ವಿಭಾಗಗಳಡಿ ವಿಚಾರಣಾ ನ್ಯಾಯಾಲಯ ಅವರನ್ನು ದೋಷಿಗಳೆಂದು ಪರಿಗಣಿಸಿತ್ತು.

ಜಾಮೀನು ಬಾಂಡ್: ರಾಜ್ಯ‌ ಮೇಲ್ಮನವಿ ಸಲ್ಲಿಸುವವರೆಗೆ 50,000 ರೂ. ಜಾಮೀನು ಬಾಂಡ್‌ ಠೇವಣಿ ಪಡೆದು ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿದೆ. ಆರೋಪಿಗಳಲ್ಲಿ ಒಬ್ಬರಾದ ಪಾಂಡು ಪೋರಾ ನರೋಟೆ ಅವರು ಆಗಸ್ಟ್ 2022 ರಲ್ಲಿ ಮೃತಪಟ್ಟರು. ಮಹೇಶ್ ಟಿರ್ಕಿ, ಹೇಮ್ ಕೇಶವದತ್ತ ಮಿಶ್ರಾ, ಪ್ರಶಾಂತ್ ರಾಹಿ ಮತ್ತು ವಿಜಯ್ ನಾನ್ ಟಿರ್ಕಿ ಇತರ ಆರೋಪಿಗಳು.

Read More
Next Story