
3 ಕೋಟಿ ಮಹಿಳೆಯರನ್ನು ‘ಲಕ್ಪತಿ ದೀದಿ’ ಮಾಡುವ ಸಂಕಲ್ಪ: ಪ್ರಧಾನಿ
ರಾಯ್‌ಪುರ(ಛತ್ತೀಸ್‌ಗಢ) ಮಾ.10- ಮೂರು ಕೋಟಿ ಮಹಿಳೆಯರನ್ನು ʻಲಕ್ಷಪತಿ ದೀದಿʼ(1 ಲಕ್ಷ ರೂ. ಮಾಲೀಕರು) ಮಾಡುವುದು ಬಿಜೆಪಿ ಸಂಕಲ್ಪ. ಮಹಿಳಾ ಕಲ್ಯಾಣ ನಮ್ಮ ಆದ್ಯತೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.
ಛತ್ತೀಸ್‌ಗಢದ ರಾಯ್‌ಪುರದ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಹ್ತಾರಿ ವಂದನ್ ಯೋಜನೆಯನ್ನು ಆನ್ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ʻನಾರಿ ಶಕ್ತಿಯನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಮಹ್ತಾರಿ ವಂದನ್ ಯೋಜನೆಯನ್ನು ಅರ್ಪಿಸಲು ಅವಕಾಶ ಸಿಕ್ಕಿರುವುದು ಅದೃಷ್ಟದ ಸಂಗತಿ. ಈ ಯೋಜನೆಯಡಿ 70 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ತಿಂಗಳಿಗೆ 1,000 ರೂ. ನೀಡುವುದಾಗಿ ಭರವಸೆ ನೀಡಿದ್ದೆವು ಇಂದು ಅದನ್ನು ಈಡೇರಿಸಲಾಗಿದೆʼ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿದರು.
ʻಯೋಜನೆಯಡಿ ವಿವಾಹಿತ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 655 ಕೋಟಿ ರೂ. ಮೊದಲ ಕಂತನ್ನು ಭಾನುವಾರ ಜಮಾ ಮಾಡಲಾಗಿದೆʼ ಎಂದರು. ರಾಜ್ಯ ಸರ್ಕಾರದ ಪ್ರಕಾರ, 70.12 ಲಕ್ಷ ಫಲಾನುಭವಿಗಳು ಹಣ ಪಡೆದಿದ್ದಾರೆ.
ವಾರಾಣಸಿಯಲ್ಲಿ ಪ್ರಧಾನಿ: ʻನಾನು ಈ ಕಾರ್ಯಕ್ರಮಕ್ಕಾಗಿ ಬರಬೇಕಿತ್ತು. ಆದರೆ ಇತರ ಕೆಲವು ಪೂರ್ವ ನಿಶ್ಚಿತ ಕಾರ್ಯಕ್ರಮಗಳಿಂದಾಗಿ ಉತ್ತರ ಪ್ರದೇಶದಲ್ಲಿ ಇದ್ದೇನೆ. ಕಾಶಿಯಿಂದ ಮಾತನಾಡುತ್ತಿದ್ದೇನ. ದೇಶದ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆʼ ಎಂದು ಪ್ರಧಾನಿ ಹೇಳಿದರು.
ʻತಾಯಿ ಮತ್ತು ಸಹೋದರಿಯರು ಸಬಲೀಕರಣಗೊಂಡಾಗ, ಇಡೀ ಕುಟುಂಬ ಸಬಲೀಕರಣಗೊಳ್ಳುತ್ತದೆ. ಆದ್ದರಿಂದ, ಡಬಲ್ ಇಂಜಿನ್ ಸರ್ಕಾರದ ಆದ್ಯತೆ ತಾಯಂದಿರು ಮತ್ತು ಸಹೋದರಿಯರ ಕಲ್ಯಾಣ. ಇಂದು, ಕುಟುಂಬಗಳು ಮಹಿಳೆಯರ ಹೆಸರಿನಲ್ಲಿ ಪಕ್ಕಾ ಮನೆಗಳನ್ನು ಪಡೆಯುತ್ತಿವೆ. ಉಜ್ವಲಾ ಯೋಜನೆಯಡಿ ಕಡಿಮೆ ದರದಲ್ಲಿ ಅಡುಗೆ ಅನಿಲ ಸಿಲಿಂಡರ್ ಸಿಗುತ್ತಿದೆ. ಶೇ.50 ಕ್ಕಿಂತ ಹೆಚ್ಚು ಜನ್ ಧನ್ ಖಾತೆಗಳು ಮಹಿಳೆಯರ ಹೆಸರಿನಲ್ಲಿವೆ. ಶೇ.65ಕ್ಕೂ ಹೆಚ್ಚು ಮುದ್ರಾ ಸಾಲವನ್ನು ಮಹಿಳೆಯರು ಪಡೆದಿದ್ದಾರೆʼ ಎಂದರು.
ʻಕಳೆದ 10 ವರ್ಷಗಳಲ್ಲಿ ಸ್ವಸಹಾಯ ಗುಂಪುಗಳ ಮೂಲಕ 10 ಕೋಟಿಗೂ ಹೆಚ್ಚು ಮಹಿಳೆಯರ ಜೀವನವನ್ನು ಬದಲಾಯಿಸಿದೆ. ಒಂದು ಕೋಟಿಗೂ ಹೆಚ್ಚು ಮಹಿಳೆಯರನ್ನು ಲಕ್ಷಪತಿ ದೀದಿಯನ್ನಾಗಿ ಮಾಡಲಾಗಿದೆ. ಮೂರು ಕೋಟಿ ಸಹೋದರಿಯರನ್ನು ಲಕ್ಷಪತಿ ದೀದಿ ಮಾಡುವ ಗುರಿಯನ್ನು ಈಡೇರಿಸುತ್ತೇವೆʼ ಎಂದು ಹೇಳಿದರು.
ಡ್ರೋನ್ ನೋಟ: ʻನಮೋ ಡ್ರೋನ್ ದೀದಿ ಯೋಜನೆಯಡಿ ಡ್ರೋನ್‌ಗಳು ಮತ್ತು ಡ್ರೋನ್ ಪೈಲಟ್ ತರಬೇತಿಯನ್ನು ನೀಡಲಾಗುವುದು. ಕೃಷಿಗೆ ಬಾಡಿಗೆಗೆ ನೀಡಲು 15,000 ಆಯ್ದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುವ ಗುರಿಯನ್ನು ಹೊಂದಿದೆʼ ಎಂದರು.
ʻ18 ಲಕ್ಷ ಪಕ್ಕಾ ಮನೆಗಳನ್ನು ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದೆವು. ಸಾಯಿ ನೇತೃತ್ವದ ಸರ್ಕಾರ ಎರಡನೇ ದಿನದಲ್ಲಿ ಆ ಕೆಲಸವನ್ನು ಆರಂಭಿಸಿತು. ಭತ್ತದ ರೈತರಿಗೆ ಎರಡು ವರ್ಷಗಳ ಬಾಕಿ ಬೋನಸ್ (ಉತ್ಪನ್ನದ ಖರೀದಿ ವಿರುದ್ಧ) ನೀಡಲಾಗುವುದು ಎಂದಿದ್ದೆವು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಛತ್ತೀಸ್‌ಗಢ ಸರ್ಕಾರವು ರೈತರ ಖಾತೆಗಳಿಗೆ 3,716 ಕೋಟಿ ರೂ. ವರ್ಗಾಯಿಸಿದೆʼ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಉಪಸ್ಥಿತರಿದ್ದರು.