
ಶಿಕ್ಷಣ ಇಲಾಖೆ ಸಭೆ: ಹಾಜರಾಗದ ವಿಸಿಗಳ ವೇತನ ತಡೆ
ಪಟ್ನಾ, ಮಾ.1- ಬಿಹಾರ ಸರ್ಕಾರವು ಪರಿಶೀಲನಾ ಸಭೆಗೆ ಗೈರುಹಾಜರಾಗದ ಒಂದು ವಿಶ್ವವಿದ್ಯಾನಿಲಯ ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ ಮತ್ತು ಉಪಕುಲಪತಿಗಳ ವೇತನವನ್ನು ತಡೆಹಿಡಿದಿದೆ.
ಕಾಮೇಶ್ವರ್ ಸಿಂಗ್ ದರ್ಭಾಂಗ ಸಂಸ್ಕೃತ ವಿಶ್ವವಿದ್ಯಾನಿಲಯ ಹೊರತುಪಡಿಸಿ, ಎಲ್ಲಾ ವಿಸಿಗಳಿಗೆ ಇಲಾಖೆ ಪತ್ರ ಬರೆದಿದ್ದು, ಪರೀಕ್ಷೆಗಳ ಸ್ಥಿತಿಗತಿ ಮತ್ತು ಇತರ ವಿಷಯಗಳ ಕುರಿತು ಚರ್ಚಿಸಲು ಅವರು ಏಕೆ ಸಭೆಗೆ ಹಾಜರಾಗಲಿಲ್ಲ ಎಂದು ಸ್ಪಷ್ಟೀಕರಣವನ್ನು ಕೋರಿದೆ.
ʻವಿಸಿಗಳಿಂದ ಎರಡು ದಿನಗಳಲ್ಲಿ ತೃಪ್ತಿದಾಯಕ ಉತ್ತರ ಬಾರದಿದ್ದರೆ, ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ. ವಿಸಿಗಳ ವೇತನ ತಡೆಹಿಡಿದಿದ್ದು, ಮುಂದಿನ ಆದೇಶದವರೆಗೆ ವಿಶ್ವವಿದ್ಯಾನಿಲಯಗಳ ಖಾತೆಗಳನ್ನುಸ್ಥಗಿತಗೊಳಿಸುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ, ʼಎಂದು ಪತ್ರದಲ್ಲಿ ತಿಳಿಸಲಾಗಿದೆ.
ಶಿಕ್ಷಣ ಕಾರ್ಯದರ್ಶಿ ಬೈದ್ಯನಾಥ್ ಯಾದವ್ ಅವರ ಪತ್ರವನ್ನು ಮಗಧ ಮತ್ತು ಕಾಮೇಶ್ವರ್ ಸಿಂಗ್ ದರ್ಭಾಂಗ ಸಂಸ್ಕೃತ ವಿಶ್ವವಿದ್ಯಾನಿಲಯ ಹೊರತುಪಡಿಸಿ ಬೇರೆ ವಿಶ್ವವಿದ್ಯಾನಿಲಯಗಳ ಪರೀಕ್ಷಾ ನಿಯಂತ್ರಕರಿಗೂ ಕಳುಹಿಸಲಾಗಿದೆ.
ಬಿಹಾರ ಶಿಕ್ಷಣ ಸಚಿವ ವಿಜಯ್ ಕುಮಾರ್ ಚೌಧರಿ ಅವರು ಪ್ರತಿಕ್ರಿಯಿಸಿಲ್ಲ.
ಕಳೆದ ಆಗಸ್ಟ್‌ನಲ್ಲಿ ಮುಜಾಫರ್‌ಪುರದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾನಿಲಯದ ವಿಸಿ ಮತ್ತು ಅಪರ ವಿಸಿ ಅವರ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳನ್ನು ಪರಿಶೀಲಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ಪರಿಶೀಲನಾ ಸಭೆಗೆ ಹಾಜರಾಗಿಲ್ಲ ಎಂಬ ಆರೋಪದ ಮೇಲೆ ಅವರ ವೇತನ ತಡೆಹಿಡಿಯಲಾಗಿತ್ತು.