Bengaluru water crisis ಬೆಂಗಳೂರು ನೀರಿನ ಸಮಸ್ಯೆ: ಅಡಕತ್ತರಿಯಲ್ಲಿ "ಐಟಿ - ಬಿಟಿ"

ಬೆಂಗಳೂರಿನ ಈ ಮೂರು ವಲಯದಲ್ಲೇ ನೀರಿಲ್ಲ | ಮುಂದಿನ ದಿನಗಳಲ್ಲಿ ಮತ್ತಷ್ಟು ನೀರಿನ ಸಮಸ್ಯೆ: ಎಚ್ಚರಿಕೆ


Bengaluru water crisis ಬೆಂಗಳೂರು ನೀರಿನ ಸಮಸ್ಯೆ: ಅಡಕತ್ತರಿಯಲ್ಲಿ ಐಟಿ - ಬಿಟಿ
x
ಬೆಂಗಳೂರು ನೀರಿನ ಸಮಸ್ಯೆ

ಬೆಂಗಳೂರಿನಲ್ಲಿ ನೀರಿನ (Bengaluru water crisis ) ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಲ್ಲೇ ಇದೆ. ನೀರಿನ ಸಮಸ್ಯೆ ಕ್ರಮೇಣ ನಗರದ ಐಟಿ, ಬಿಟಿ ಕಂಪನಿಗಳು ಹಾಗೂ ಬ್ರ್ಯಾಂಡ್ ಬೆಂಗಳೂರಿಗೂ ಮುಟ್ಟಿದೆ. ಕಳೆದ ಎರಡರಿಂದ ಮೂರು ದಶಕದ ಅವಧಿಯಿಂದಲೂ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇದೆ. ಆದರೆ, ಈ ಬಾರಿ ಕಾಣಿಸುತ್ತಿರುವ ನೀರಿನ ಸಮಸ್ಯೆಯು ಬೆಂಗಳೂರಿಗೆ ಕಪ್ಪು ಚುಕ್ಕಿಯಾಗುತ್ತಿದೆ.

ಐಟಿ ಕೇಂದ್ರೀಕೃತ ಭಾಗದಲ್ಲೇ ನೀರಿನ ಸಮಸ್ಯೆ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವ 35 ವಾರ್ಡ್‌ಗಳನ್ನು ಗುರುತಿಸಲಾಗಿದೆ ಇದಲ್ಲದೇ ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿ ಕೇಂದ್ರೀಕೃತವಾಗಿರುವ ವೈಟ್‌ಫೀಲ್ಡ್‌, ಬನ್ನೇರುಘಟ್ಟ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ, ಔಟರ್‌ರಿಂಗ್‌ ರಸ್ತೆ , ಮಹದೇವಪುರ, ವೈಟ್‌ಫೀಲ್ಡ್, ಮಾರತ್ತಹಳ್ಳಿ, ಕೆ.ಆರ್.ಪುರ ಹಾಗೂ ರಾಜರಾಜೇಶ್ವರಿ ನಗರದಲ್ಲೂ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಇದೇ ತಿಂಗಳ ಮೊದಲ ದಿನ ಬಾಂಬ್‌ ಸ್ಫೋಟವಾಗಿತ್ತು. ಐಟಿ ಕಂಪನಿಗಳು ಕೇಂದ್ರೀಕೃತವಾಗಿರು ಭಾಗದಲ್ಲೇ ನೀರಿನ ಸಮಸ್ಯೆ ಹೆಚ್ಚಳವಾಗುತ್ತಿರುವುದು ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆ ಹಾಗೂ ಐಟಿ ರಾಜಧಾನಿ ಎನ್ನುವ ಖ್ಯಾತಿಯ ಮೇಲೆ ಆತಂಕದ ಕಾರ್ಮೋಡ ಸೃಷ್ಟಿಸಿದೆ. ಅಲ್ಲದೇ ಕಂಪನಿಗಳ ನಿರ್ವಹಣೆಗೂ ತೊಡಕಾಗುತ್ತಿದೆ.

ನೀರಿನ ಸಮಸ್ಯೆ ತೀವ್ರವಾಗಿರುವ ವಲಯ ಮತ್ತು ವಾರ್ಡ್‌ಗಳ ವಿವರ

ಬೆಂಗಳೂರಿನಲ್ಲಿ ಮುಖ್ಯವಾಗಿ ಮೂರು ವಲಯಗಳಲ್ಲಿ ಹೆಚ್ಚಾಗಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಒಟ್ಟು ಎಂಟು ವಲಯಗಳಿದ್ದು, ಅದರಲ್ಲಿ ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.

ರಾಜರಾಜೇಶ್ವರಿ ನಗರ ವಲಯ: ರಾಜರಾಜೇಶ್ವರಿ ನಗರದ ಹಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ. ಈ ವಲಯದಲ್ಲಿ ನೀರಿನ ಸಮಸ್ಯೆ ಇರುವ ವಾರ್ಡ್‌ಗಳು ದೊಡ್ಡಬಿದರಕಲ್ಲು, ಲಿಂಗಧೀರನಹಳ್ಳಿ, ಹೇರೋಹಳ್ಳಿ, ಉಳ್ಳಾಲ, ಹೆಮ್ಮಿಗೆಪುರ.

ಬೊಮ್ಮನಹಳ್ಳಿ ವಲಯ: ಬೊಮ್ಮನಹಳ್ಳಿಯ 10ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಹಾಗೂ ಈ ವಾರ್ಡ್‌ ವ್ಯಾಪ್ತಿಯ ಹಲವು ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ. ಬೊಮ್ಮನಹಳ್ಳಿ ವಲಯದಲ್ಲಿ ನೀರಿನ ಸಮಸ್ಯೆ ಇರುವ ವಾರ್ಡ್‌ಗಳ ವಿವರ ಈ ರೀತಿ ಇದೆ. ಉತ್ತರಹಳ್ಳಿ, ಸುಬ್ರಮಣ್ಯಪುರ, ವಸಂತಪುರ, ಕೋಣನಕುಂಟೆ, ಅಂಜನಾಪುರ, ಗೊಟ್ಟಿಗೆರೆ,ಕಾಳೇನ ಅಗ್ರಹಾರ ಬೇಗೂರು,ನಾಗನಾಥಪುರ,ಕೂಡ್ಲುದಲ್ಲಿ ನೀರಿನ ಸಮಸ್ಯೆ ಇದೆ.

ಮಹದೇವಪುರ ವಲಯ: ಮಹದೇವಪುರ ವಲಯ ವ್ಯಾಪ್ತಿಯ ಚಳ್ಕೆರೆ, ಹೊರಮಾವು, ಕಲ್ಕೆರೆ,ಕಾಡುಗೋಡಿ,ಹೂಡಿ, ಬೈರತಿ,ಎಇಸಿಎಸ್ ಲೇಔಟ್,ವೈಟ್‌ಫೀಲ್ಡ್‌, ವರ್ತೂರು, ಮುನ್ನೆಕೊಳಾಲ, ಮಾರತ್ತಹಳ್ಳಿ, ಬೆಳ್ಳಂದೂರು, ಕಮ್ಮಗೊಂಡನಹಳ್ಳಿ, ಚಿಕ್ಕಸಂದ್ರ, ಮಲ್ಲಸಂದ್ರ,ಕೆಂಪೇಗೌಡ, ಅಟ್ಟೂರು, ಕೋಗಿಲು,ಥಣಿಸಂದ್ರ ಹಾಗೂ ಅಮೃತಹಳ್ಳಿ ಭಾಗದಲ್ಲಿ ನೀರಿನ ಸಮಸ್ಯೆ ಇದೆ.

ಸಹಾಯವಾಣಿಗೆ ಕರೆ ಮಾಡಬಹುದು

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇರುವ 35 ವಾರ್ಡ್‌ಗಳ ಸಮಸ್ಯೆ ಪರಿಹಾರಕ್ಕೆಂದೇ ಬಿಬಿಎಂಪಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಂಡಿದೆ. ನೀರಿನ ಸಮಸ್ಯೆ ಪರಿಹಾರಕ್ಕೆಂದು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದು, ಅದರ ಸಹಾಯವಾಣಿ ಸಂಖ್ಯೆ 1533 ಆಗಿದೆ. 35 (110 ಹಳ್ಳಿಗಳ ವ್ಯಾಪ್ತಿ) ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಇದ್ದರೆ, ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಅದೇ ರೀತಿ ಇನ್ನುಳಿದ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡರೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯವಾಣಿ ಸಂಖ್ಯೆ 1916ಕ್ಕೆ ಕರೆ ಮಾಡಬಹುದಾಗಿದೆ. ಪಾಲಿಕೆಯು 35 ವಾರ್ಡ್‌ ಗಳಿಗೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದೆ.

ನೀರಿನ ಸಮಸ್ಯೆ ಇರುವ ವಾರ್ಡ್‌ಗಳಲ್ಲಿ ನೋಡಲ್ ಅಧಿಕಾರಿ

ಬೆಂಗಳೂರಿನ 35 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಳವಾಗಿದ್ದು, ಈ ಭಾಗದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ. ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಹೆಚ್ಚಳವಾಗಿದೆ. ಅಲ್ಲದೇ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಇನ್ನು ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ಮೇಲುಸ್ತುವಾರಿದಾರರನ್ನಾಗಿ (ನೋಡಲ್ ಅಧಿಕಾರಿ)ಧರಣೇಂದ್ರ ಕುಮಾರ್, ಕಾರ್ಯಪಾಲಕ ಎಂಜಿನಿಯರ್ (ದಾಸರಹಳ್ಳಿ) ನೇಮಿಸಲಾಗಿದೆ.

ಬೆಂಗಳೂರು ನೀರಿನ ಸಮಸ್ಯೆ ಇದು ಪ್ರಾರಂಭವಷ್ಟೇ: ಡಾ.ಕ್ಷಿತಿಜ್‌

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಈಗ ಪ್ರಾರಂಭವಷ್ಟೇ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಳವಾಗಲಿದೆ ಎನ್ನುತ್ತಾರೆ ಜಲತಜ್ಞ ಹಾಗೂ ಫ್ರೋಫೆಸರ್‌ (ಹವಾಮಾನ ನೀತಿ) ಡಾ.ಕ್ಷಿತಿಜ್‌ ಅರಸ್‌ ಅವರು.

ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಡಾ. ಕ್ಷಿತಿಜ್‌ ಅವರು, ಬೆಂಗಳೂರಿಗೆ ಕಾವೇರಿ ನೀರು ಎರಡನೇ ಆಯ್ಕೆಯಾಗಬೇಕಾಗಿತ್ತು.ಆದರೆ, ಕಾವೇರಿ ನೀರನ್ನೇ ಪ್ರಧಾನವಾಗಿ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಮಳೆ ನೀರನ್ನು ಸಂಗ್ರಹಿಸಿಕೊಳ್ಳಲು ಆದ್ಯತೆ ನೀಡುತ್ತಿಲ್ಲ. ವಿಶ್ವದ ಹಲವು ಪ್ರಮುಖ ನಗರಗಳು ನೀರಿನ ಸಮಸ್ಯೆಯಿಂದಲೇ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಇತಿಹಾಸ ನಮಗೆ ಎಚ್ಚರಿಕೆಯ ಗಂಟೆಯಾಗಬೇಕು. ನಗರಗಳ ನೀರಿನ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ನೀರಿನ ಸಮಸ್ಯೆಯನ್ನು ನಿರ್ಲಕ್ಷಿಸುವುದು ಹಾಗೂ ನಗರದ ಅಸ್ತಿತ್ವ ಒಂದಕ್ಕೊಂದು ಸಂಬಂಧವಿದೆ. ಕಳೆದ ಎರಡು ದಶಕಗಳಿಂದಲೂ ನೀರಿನ ಸಮಸ್ಯೆ ಪರಿಹಾರಕ್ಕೆ ಗಡುವು ಹಾಕಿಕೊಳ್ಳಲಾಗುತ್ತಿದೆ. ಆದರೆ, ಕಾರ್ಯರೂಪಕ್ಕೆ ಮಾತ್ರ ಬರುತ್ತಿಲ್ಲ. ಬೆಂಗಳೂರಿನಲ್ಲಿ ದೊಡ್ಡ ಮೇಲ್ಸೇತುವೆ ಕಟ್ಟುತ್ತೇವೆ, ಮೆಟ್ರೋ ಸಂಚಾರ ಅಭಿವೃದ್ಧಿ ಮಾಡುತ್ತೇವೆ. ಆದರೆ, ಬೆಂಗಳೂರಿನಲ್ಲಿ ಬೀಳುವ ನೀರನ್ನು ಮಾತ್ರ ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನೀರು ಸಂಗ್ರಹಿಸದೆ ಇರುವುದು ಇಚ್ಛಾಶಕ್ತಿಯ ಕೊರತೆಯಲ್ಲದೆ ಮತ್ತೇನೂ ಅಲ್ಲ ಎಂದು ಹೇಳಿದರು.

ಬಿಬಿಎಂಪಿಯಿಂದ ತುರ್ತು ಕ್ರಮ

ಬೆಂಗಳೂರಿನಲ್ಲಿ ಎದುರಾಗಿರುವ ನೀರಿನ ಸಮಸ್ಯೆ ಪರಿಹಾರಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ)ವತಿಯಿಂದ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿಯ ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ.ಕೆ ಹರೀಶ್ ಕುಮಾರ್‌ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇರುವ 110 ಹಳ್ಳಿಗಳಲ್ಲಿ ನೀರಿನ ಮೇಲುಸ್ತುವಾರಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಪ್ರದೇಶಗಳಲ್ಲಿ ತುರ್ತು ಹಾಗೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ ಎಂದು ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದ್ದಾರೆ.

Next Story