ರಾಮೇಶ್ವರಂ ಕೆಫೆ ಸ್ಫೋಟ- ಮುಖ್ಯ ಸುಳಿವು ಲಭ್ಯ: ಗೃಹ ಸಚಿವ
x

ರಾಮೇಶ್ವರಂ ಕೆಫೆ ಸ್ಫೋಟ- ಮುಖ್ಯ ಸುಳಿವು ಲಭ್ಯ: ಗೃಹ ಸಚಿವ

ಶಂಕಿ ಸ್ಪೋಟದ ಬಳಿಕ ವಸ್ತ್ರ ಬದಲಿಸಿ, ಬಸ್‌ ನಲ್ಲಿ ಪ್ರಯಾಣ ಮಾಡಿದ್ದಾನೆ


ಬೆಂಗಳೂರು, ಮಾ 7 (ಪಿಟಿಐ) : ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಸಂಭವಿಸಿದ ಸ್ಫೋಟದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಉತ್ತಮ ಸುಳಿವು ಲಭ್ಯವಾಗಿದ್ದು, ಪ್ರಮುಖ ಆರೋಪಿ ಘಟನೆ ಸಂಭವಿಸಿದ ಬಳಿಕ ತನ್ನ ಬಟ್ಟೆಯನ್ನು ಬದಲಿಸಿ, ಬಸ್‌ ನಲ್ಲಿ ಪ್ರಯಾಣ ಮಾಡಿದ್ದಾನೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಗುರುವಾರ ಹೇಳಿದ್ದಾರೆ.

ಸ್ಫೋಟದ ನಂತರ ಶಂಕಿತ ವ್ಯಕ್ತಿ ಬಸ್‌ನಲ್ಲಿ ತುಮಕೂರು ಕಡೆಗೆ ಪ್ರಯಾಣಿಸಿದ್ದಾನೆ. ಅಧಿಕಾರಿಗಳು ಸುಳಿವು ಆಧರಿಸಿ ಬಳ್ಳಾರಿಯವರೆಗೆ ಆತನ ಚಲನವಲನವನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.

ಪೂರ್ವ ಬೆಂಗಳೂರಿನ ಬ್ರೂಕ್‌ಫೀಲ್ಡ್ ಪ್ರದೇಶದ ಕೆಫೆಯಲ್ಲಿ ಮಾರ್ಚ್ 1ರಂದು ಸಂಭವಿಸಿದ ಸ್ಫೋಟದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸುತ್ತಿದ್ದು, ಬೆಂಗಳೂರು ಪೊಲೀಸ್ ಕೇಂದ್ರ ಅಪರಾಧ ವಿಭಾಗ ಅಗತ್ಯ ನೆರವು ನೀಡುತ್ತಿದೆ.

ʻಶಂಕಿತ ವ್ಯಕ್ತಿ ಯಾವ ದಿಕ್ಕಿನಲ್ಲಿ ಹೋಗಿದ್ದಾನೆ ಮತ್ತು ಬಟ್ಟೆಗಳನ್ನು ಬದಲಾಯಿಸಿದ್ದಾನೆ ಎಂಬ ಪ್ರಮುಖ ಸುಳಿವು ಸಿಕ್ಕಿದೆ. ಕೆಲವು ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ. ಕಳೆದೆರಡು ದಿನದಲ್ಲಿ ನಮಗೆ ಉತ್ತಮ ಸುಳಿವು ಸಿಕ್ಕಿದ್ದು, ಆದಷ್ಟು ಬೇಗ ಆತನನ್ನು ಬಂಧಿಸಲಾಗುತ್ತದೆʼ ಎಂದು ಸುದ್ದಿಗಾರರಿಗೆ ತಿಳಿಸಿದರು.

ʻಅಧಿಕಾರಿಗಳು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅವರಿಗೆ ಕೆಲವು ಸುಳಿವುಗಳು ಸಿಕ್ಕಿವೆʼ ಎಂದು ಹೇಳಿದರು. ಶಂಕಿತ ಬೆನ್ನುಚೀಲ, ಪೂರ್ಣ ತೋಳಿನ ಅಂಗಿ, ಟೋಪಿ, ಮುಖವಾಡ ಮತ್ತು ಕನ್ನಡಕ ಧರಿಸಿ, ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವ ಹೊಸ ವೀಡಿಯೊ ಲಭ್ಯವಾಗಿದೆ. ಬಸ್ಸಿನಲ್ಲಿದ್ದ ಕ್ಯಾಮೆರಾ ಗಮನಿಸಿದ ಶಂಕಿತ, ಅದು ತನ್ನನ್ನು ಚಿತ್ರೀಕರಿಸದ ಕಡೆಗೆ ತೆರಳಿದ್ದಾನೆ ಎಂದು ಕಂಡು ಬರುತ್ತದೆ.

ಅಲ್ಲದೆ, ಶಂಕಿತ ಟಿ ಶರ್ಟ್ ಧರಿಸಿ, ಮುಖವಾಡ, ಟೋಪಿ ಮತ್ತು ಕನ್ನಡಕ ಇಲ್ಲದೆ ಬಸ್‌ನಲ್ಲಿ ಕುಳಿತಿರುವ ದೃಢೀಕರಿಸದ ಛಾಯಾಚಿತ್ರಗಳು ಕೂಡ ಕಂಡುಬಂದಿವೆ. ಬಾಂಬ್ ದಾಳಿ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ನಗದು ಬಹುಮಾನವನ್ನು ಎನ್‌ಐಎ ಘೋಷಿಸಿದೆ.

Read More
Next Story