ಬಿಸಿಸಿಐ ಒಪ್ಪಂದ ಪಟ್ಟಿ ಪ್ರಕಟ: : ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಹೊರಗೆ
x
ಶ್ರೇಯಸ್‌ ಐಯ್ಯರ್

ಬಿಸಿಸಿಐ ಒಪ್ಪಂದ ಪಟ್ಟಿ ಪ್ರಕಟ: : ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಹೊರಗೆ


ಮುಂಬೈ, ಫೆ.28- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತೀಯ ಪುರುಷರ ತಂಡದ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ರಣಜಿ ಟ್ರೋಫಿಯಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು 30 ಮಂದಿಯ ಪಟ್ಟಿಯಿಂದ ಕೈಬಿಡಲಾಗಿದೆ.

ಅಕ್ಟೋಬರ್ 1, 2023 ರಿಂದ ಸೆಪ್ಟೆಂಬರ್ 30, 2024ರ ಪಟ್ಟಿಯಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ (ಗ್ರೇಡ್ ಎ+) ಇದ್ದು, ಗ್ರೇಡ್ ಎ, ಗ್ರೇಡ್ ಬಿ, ಗ್ರೇಡ್ ಸಿ, ಮತ್ತು ವೇಗದ ಬೌಲಿಂಗ್ ಒಪ್ಪಂದ ಮಾಡಿಕೊಳ್ಳಲಾಗಿದೆ.

ಅಯ್ಯರ್, ಕಿಶನ್ ಹೊರಗೆ: ʻಈ ಸುತ್ತಿನ ಶಿಫಾರಸುಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಪರಿಗಣಿಸಿಲ್ಲʼ ಎಂದು ಬಿಸಿಸಿಐ ಹೇಳಿದೆ. ಅಯ್ಯರ್ ಈ ಹಿಂದೆ ಗ್ರೇಡ್ ಬಿ, ಮತ್ತು ಕಿಶನ್ ಸಿ ಗ್ರೇಡ್‌ನಲ್ಲಿದ್ದರು. ಈ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ ಆಡದೆ ಇದ್ದುದರಿಂದ ಅವರಿಗೆ ಕೊಕ್‌ ನೀಡಲಾಗಿದೆ. 2023ರ ನವೆಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆದ ಟಿ20 ಸರಣಿಯಲ್ಲಿ ಇಶಾನ್ ಆಡಿದ್ದರು. ನಂತರ ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲಿ ವಿರಾಮ ತೆಗೆದುಕೊಂಡಿದ್ದರು. ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗೆ ಅವರನ್ನು ಪರಿಗಣಿಸಿರಲಿಲ್ಲ. ಅವರು ಜಾರ್ಖಂಡ್ ಪರ ಆಡುತ್ತಿದ್ದಾರೆ.

ಹಾಲಿ ಸರಣಿಯಲ್ಲಿ ಎರಡು ಪಂದ್ಯಗಳ ನಂತರ ಅಯ್ಯರ್ ಅವರನ್ನು ಕೈಬಿಡಲಾಯಿತು. ಬೆನ್ನುನೋವಿನಿಂದ ಅವರು ಮುಂಬೈನ ರಣಜಿ ಟ್ರೋಫಿ ಪಂದ್ಯ ಗಳಿಂದ ಹೊರಗುಳಿದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಅವರನ್ನು ಸಮರ್ಥರಿದ್ದಾರೆ ಎಂದು ಘೋಷಿಸಿತ್ತು. ಮುಂಬೈ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಿದ್ದಂತೆ, ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು.

ಗ್ರೇಡ್‌ ನೀಡಿಕೆ: ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ 2 ಟೆಸ್ಟ್ ಪಂದ್ಯ ಆಡಿದ್ದು, ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದರೆ ಗ್ರೇಡ್ ಸಿ ಗೆ ಸೇರ್ಪಡೆಗೊಳ್ಳುತ್ತಾರೆ. ಆಯ್ಕೆ ಸಮಿತಿಯು ಆಕಾಶ್ ದೀಪ್, ವಿಜಯ್ ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ ಅವರಿಗೆ ವೇಗದ ಬೌಲಿಂಗ್ ಗುತ್ತಿಗೆ ಶಿಫಾರಸು ಮಾಡಿದೆ.

ಕೆ.ಎಲ್. ರಾಹುಲ್, ಶುಭಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಬಿ ಗ್ರೇಡ್‌ನಿಂದ ಎ ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ. ರಿಷಬ್ ಪಂತ್ ಮತ್ತು ಆಲ್ ರೌಂಡರ್ ಅಕ್ಷರ್ ಪಟೇಲ್ ಗ್ರೇಡ್ ಎ ನಿಂದ ಗ್ರೇಡ್ ಬಿಗೆ ಹಿಂಬಡ್ತಿ ಪಡೆದಿದ್ದಾರೆ. ಯಶಸ್ವಿ ಜೈಸ್ವಾಲ್ ಗ್ರೇಡ್ ಬಿ ಗುತ್ತಿಗೆ ಗಳಿಸಿದ್ದಾರೆ. ಚೇತೇಶ್ವರ ಪೂಜಾರ, ಉಮೇಶ್ ಯಾದವ್, ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಮತ್ತು ಶಿಖರ್ ಧವನ್ ಅವರನ್ನು ಕೈ ಬಿಡಲಾಗಿದೆ.

ಗ್ರೇಡ್ ಎ+ (4 ಆಟಗಾರರು) - 7 ಕೋಟಿ ರೂ.: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.

ಗ್ರೇಡ್ (6ಆಟಗಾರರು) - 5 ಕೋಟಿ ರೂ.: ಆರ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.

ಗ್ರೇಡ್ ಬಿ (5ಆಟಗಾರರು) - 3 ಕೋಟಿ ರೂ: ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.

ಗ್ರೇಡ್ ಸಿ (15ಆಟಗಾರರು) - 1 ಕೋಟಿ ರೂ: ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.

Read More
Next Story