Ground Report Part-6| ಕಲ್ಲು ಗಣಿಗಾರಿಕೆ ಎಫೆಕ್ಟ್; ಬೆಂಗಳೂರು ದಕ್ಷಿಣದಲ್ಲಿ ನಿವೇಶನ ಖರೀದಿಗೆ ನಿರಾಸಕ್ತಿ
x

ಮಂಚನಬೆಲೆ ಸಮೀಪ ಬಡಾವಣೆ ನಿರ್ಮಿಸಿರುವುದು ಚಿತ್ರ: ಆರ್.ಡಿ.ರಘು

Ground Report Part-6| ಕಲ್ಲು ಗಣಿಗಾರಿಕೆ ಎಫೆಕ್ಟ್; ಬೆಂಗಳೂರು ದಕ್ಷಿಣದಲ್ಲಿ ನಿವೇಶನ ಖರೀದಿಗೆ ನಿರಾಸಕ್ತಿ

ನಿರಂತರ ಬಂಡೆ ಸ್ಫೋಟ, ಎಂ-ಸ್ಯಾಂಡ್, ಜಲ್ಲಿ ತುಂಬಿದ ಟಿಪ್ಪರ್ ಲಾರಿಗಳ ಸಂಚಾರ ಹಾಗೂ ಅದರಿಂದ ಮೇಲೇಳುವ ಧೂಳಿನಿಂದ ನಿವೇಶನ ಖರೀದಿಗೆ ಜನರು ಆಸಕ್ತಿ ತೋರುತ್ತಿಲ್ಲ‌‌ ಎಂಬ ಆರೋಪಗಳು ಕೇಳಿಬರುತ್ತಿವೆ.


Click the Play button to hear this message in audio format

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯು ರಿಯಲ್ ಎಸ್ಟೇಟ್ ಉದ್ಯಮದ ಮೇಲೂ ಪರಿಣಾಮ ಬೀರಿದೆ. ಹೋಬಳಿ ವ್ಯಾಪ್ತಿಯ ಮಾದಾಪಟ್ಟಣ, ಬ್ಯಾಲಾಳು, ಸೂಲಿವಾರ, ಚಿಕ್ಕನಹಳ್ಳಿ, ಕುರುಬರಹಳ್ಳಿ, ಚಂದ್ರಪ್ಪ ಸರ್ಕಲ್, ಮಂಚನಬೆಲೆ, ಹಾಗೂ ಹೆಜ್ಜಾಲ ಸಮೀಪದ ಚುಂಚನಗುಪ್ಪೆ ಸುತ್ತಮುತ್ತ ತಲೆ ಎತ್ತಿರುವ ಬಡಾವಣೆಗಳಲ್ಲಿ ಹಲವು ವರ್ಷಗಳಿಂದ ನಿವೇಶನಗಳು ಖಾಲಿ ಬಿದ್ದಿವೆ.

ಮಂಚನಬೆಲೆ ಜಲಾಶಯದ ಪರಿಸರದಲ್ಲಿ ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸಬೇಕೆಂಬ ಬಹುತೇಕರ ಕನಸಿಗೆ ಕಲ್ಲು ಗಣಿಗಾರಿಕೆ, ತಣ್ಣೀರು ಎರಚಿದೆ. ಡೆವಲಪರ್ಸ್ ಹಾಗೂ ಬಿಲ್ಡರ್ ಗಳು ನಿರ್ಮಿಸಿರುವ ಬಡಾವಣೆಗಳಲ್ಲಿ ನಿವೇಶನ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ.

ನಿರಂತರ ಬಂಡೆ ಸ್ಫೋಟ, ಎಂ-ಸ್ಯಾಂಡ್, ಜಲ್ಲಿ ತುಂಬಿದ ಟಿಪ್ಪರ್ ಲಾರಿಗಳ ಸಂಚಾರ ಹಾಗೂ ಅದರಿಂದ ಮೇಲೇಳುವ ಧೂಳಿನಿಂದ ನಿವೇಶನ ಖರೀದಿಗೆ ಜನರು ಆಸಕ್ತಿ ತೋರುತ್ತಿಲ್ಲ‌‌ ಎಂಬ ಆರೋಪಗಳು ಕೇಳಿಬರುತ್ತಿವೆ.

ಬಂಡೆಗಳ ಸ್ಫೋಟದಿಂದ ಗ್ರಾಮಗಳಲ್ಲಿನ ಮನೆಗಳು ಬಿರುಕು ಬಿಡುತ್ತಿವೆ. ಶಬ್ದ ಹಾಗೂ ವಾಯು ಮಾಲಿನ್ಯದಿಂದ ನೆಮ್ಮದಿ ಹಾಳಾಗಿದೆ. ಇದೆಲ್ಲವನ್ನು ತಿಳಿದೇ ಗ್ರಾಹಕರು ನಿವೇಶನ ಖರೀದಿಗೆ ಮನಸ್ಸು ಮಾಡುತ್ತಿಲ್ಲ ಎಂದು ಚಿಕ್ಕನಹಳ್ಳಿ ಗ್ರಾಮದ ಬಸವರಾಜು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಹೂಡಿಕೆಗೂ ಜನ ನಿರಾಸಕ್ತಿ

ಬೆಂಗಳೂರು ಹಾಗೂ ರಾಮನಗರ ನಡುವೆ ಇರುವ ತಾವರೆಕೆರೆ ಹೋಬಳಿಯಲ್ಲಿ ಸುಮಾರು ಎರಡು-ಮೂರು ದಶಕಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಮಾಗಡಿ- ಬೆಂಗಳೂರು ರಾಜ್ಯ ಹೆದ್ದಾರಿ ನಿರ್ಮಾಣದಿಂದ ಸಂಪರ್ಕ ವ್ಯವಸ್ಥೆ ಇದೆ. ಬಿಡದಿ, ಕೆಂಗೇರಿ ಭಾಗ ಶರವೇಗದಲ್ಲಿ ಬೆಳೆಯುತ್ತಿದ್ದು, ಅಲ್ಲಿಂದಲೂ ತಾವರೆಕೆರೆ ಹೋಬಳಿಯ ಹಳ್ಳಿಗಳಿಗೆ ಸುಲಭ ಸಂಪರ್ಕ ವ್ಯವಸ್ಥೆ ಇದೆ. ನಗರೀಕರಣವೂ ಆಗುತ್ತಿದೆ ಎಂಬ ಉದ್ದೇಶದಿಂದ ಡೆವಲಪರ್ ಗಳು ಭೂಮಿಯ ಮೇಲೆ ಹೂಡಿಕೆ ಮಾಡಿ,ಬಡಾವಣೆಗಳನ್ನು ನಿರ್ಮಿಸಿದ್ದಾರೆ. ಆದರೆ,ನಿವೇಶನಗಳ ಮೇಲೆ ಹೂಡಿಕೆ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಬ್ಯಾಲಾಳು ಸಮೀಪದ ಇಸ್ರೋದ ಐಡಿಎಸ್ ಎನ್ ಕೇಂದ್ರದ ಸಮೀಪವೇ ರೆಸಾರ್ಟ್ ಗಳಿವೆ. ರೈಲು ಸಂಪರ್ಕ ವ್ಯವಸ್ಥೆಯೂ ಇದೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯೂ ಪ್ರಗತಿಯಲ್ಲಿದೆ. ಇಷ್ಟಾದರೂ, ಜನರು ಮಾತ್ರ ಕಲ್ಲು ಗಣಿಗಾರಿಕೆಗೆ ಹೆದರಿ ಈ ಭಾಗದಲ್ಲಿ ನಿವೇಶನ ಖರೀದಿಸಲು ಇಚ್ಚಿಸುತ್ತಿಲ್ಲ ಎನ್ನಲಾಗಿದೆ.

"ತಾವರೆಕೆರೆ ಹೋಬಳಿಯಲ್ಲಿ ಕಲ್ಲು ಗಣಿಗಾರಿಕೆಯಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೊಂಚ ಹೊಡೆತ ಬಿದ್ದಿರುವುದು ನಿಜ. ಈ ಭಾಗದಲ್ಲಿ ನಿರ್ಮಿಸಿರುವ ಬಹುತೇಕ ಬಡಾವಣೆಗಳು ಖಾಲಿ ಬಿದ್ದಿರುವಂತೆ ಕಾಣುತ್ತಿವೆ. ಆದರೆ, ಜನರು ನಿವೇಶನ ಖರೀದಿಸಿ ಬಿಟ್ಟಿದ್ದಾರೆ. ಕಲ್ಲು ಗಣಿಗಾರಿಕೆಯ ದೂಳು ಹಾಗೂ ಟಿಪ್ಪರ್ ಗಳ ವಿಪರೀತ ಸಂಚಾರದ ಪರಿಣಾಮ ಮನೆಗಳನ್ನು ಕಟ್ಟಿಕೊಂಡಿಲ್ಲ. ಕಲ್ಲು ಗಣಿಗಾರಿಕೆಗೆ ಕಡಿವಾಣ ಬಿದ್ದರೆ ಶರವೇಗದಲ್ಲಿ ಹಳ್ಳಿಗಳು ಬೆಳೆಯಲಿವೆ" ಎಂದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ವಿ.ಪಿ. ಆರಾಧ್ಯ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

"ಮಂಚನಬೆಲೆ ಜಲಾಶಯದ ಸಮೀಪ ಇರುವ ಹಳ್ಳಿಗಳಲ್ಲಿ ಈ ಹಿಂದೆಯೇ ಡೆವಲಪರ್ ಗಳು ಬಡಾವಣೆ ನಿರ್ಮಿಸಿಕೊಂಡಿದ್ದಾರೆ. ನಗರ ಜೀವನದಿಂದ ರೋಸಿದ ಹಲವರು ಹಸಿರು ಶ್ವಾಸತಾಣದಂತಿರುವ ಮಂಚನಬೆಲೆ ಜಲಾಶಯದ ಸುತ್ತಮತ್ತ ಮನೆ ಕಟ್ಟಿಕೊಳ್ಳಲು ನಿವೇಶನ ಖರೀದಿಸಿದ್ದಾರೆ. ಆದರೆ, ಕಳೆದ 15-20 ವರ್ಷಗಳಿಂದ ಕಲ್ಲು ಗಣಿಗಾರಿಕೆ ವಿಪರೀತವಾಗಿದ್ದು, ಹೊಸಬರು ಯಾರೂ ಬರುತ್ತಿಲ್ಲ. ಹಾಗಾಗಿ, ಹೊಸ ಬಡಾವಣೆಗಳಲ್ಲಿ ನಿವೇಶನಗಳು ಮಾರಾಟವಾಗುತ್ತಿಲ್ಲ ಎಂಬುದು ಈ ಭಾಗದಲದಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ನೆಲಮಂಗಲ ನಿವಾಸಿ ಡಿ. ನಾರಾಯಣಸ್ವಾಮಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಟಿಪ್ಪರ್ ಲಾರಿಗಳ ಓಡಾಟ ಯತೇಚ್ಛವಾಗಿದ್ದು, ದೂಳಿನ ಸಮಸ್ಯೆ ಇದೆ. ಬಂಡೆ ಸ್ಫೋಟದಿಂದಾಗಿ ಭೂಮಿ ಕಂಪಿಸುತ್ತಿದ್ದು, ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿವೆ. ಇದು ಹೂಡಿಕೆದಾರರಲ್ಲಿ ಭಯ ಹುಟ್ಟಿಸಿದೆ. ಗಣಿಗಾರಿಕೆಯಿಂದ ಏಳುವ ಧೂಳು ಮತ್ತು ಶಬ್ದ ಮಾಲಿನ್ಯದಿಂದಾಗಿ ಜನರು ಈ ಭಾಗದಲ್ಲಿ ನಿವೇಶನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದ ಹಲವು ಕ್ವಾರಿಗಳು ಜನವಸತಿ ಪ್ರದೇಶಕ್ಕೆ ಹತ್ತಿರದಲ್ಲಿ ಇರುವುದರಿಂದ, ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿದೆ.

ತಾವರೆಕೆರೆ ಹೋಬಳಿಯಲ್ಲಿ ಸಾವಿರಾರು ಎಕರೆ ಗೋಮಾಳ ಭೂಮಿ ಒತ್ತುವರಿಯಾಗಿದೆ. ಬಹುತೇಕ ಬಡಾವಣೆಗಳು ಗೋಮಾಳ ಜಮೀನಿನಲ್ಲಿ ಇದೆಯೆಂಬ ಕಾರಣಕ್ಕೂ ನಿವೇಶನ ಖರೀದಿಸಲು ಜನ ಹಿಂದೇಟು ಹಾಕುತ್ತಿದ್ದಾರೆ. ಜಮೀನುಗಳ ಅಭಿವೃದ್ಧಿ ಮತ್ತು ಮಾರಾಟಕ್ಕೆ ಕಾನೂನು ತೊಡಕುಗಳು ಉಂಟಾಗಲಿವೆ ಎಂಬ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಕುಂಟಿತವಾಗಿದೆ ಎಂನ ಮಾತುಗಳು ಕೇಳಿ ಬರುತ್ತಿವೆ.

ಮಂಚನಬೆಲೆ ಅಭಿವೃದ್ಧಿಗೆ ಯೋಜನೆ

ಮಂಚನಬೆಲೆ ಬಳಿ 145 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸುತ್ತಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿ ಸುಮಾರು 72.3 ಎಕರೆ ವಿಸ್ತೀರ್ಣದಲ್ಲಿ ಪರಿಸರ-ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

ಈ ಜಾಗದಲ್ಲಿ ಪರಿಸರ ಸ್ನೇಹಿ ರೆಸಾರ್ಟ್, ಹೋಟೆಲ್, ಸಾಹಸಿ ಕೇಂದ್ರಗಳು ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಜತೆಗೆ ಅಭಿವೃದ್ಧಿಯೂ ಹೊಂದಲಿದೆ. ಬಿಡದಿ ಸಮೀಪ ಎಐ ನಗರ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂಬುದು ಗೊಲ್ಲಹಳ್ಳಿ ನಿವಾಸಿ ಶಶಿಕುಮಾರ್ ಅವರ ಒತ್ತಾಯವಾಗಿದೆ.

Read More
Next Story