
ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ | 48 ಆರೋಪಿಗಳಿಗೆ ಜಾಮೀನು ಮಂಜೂರು
ಸೆ.19ರಂದು ದಾವಣಗೆರೆಯ ಅರಳಿಮರ ಸರ್ಕಲ್ ಬಳಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಪ್ರಕರಣ ಸಂಬಂಧ ಹಿಂದೂ-ಮುಸ್ಲಿಂ ಸೇರಿ 48 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು
ದಾವಣಗೆರೆಯಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.
ಸೆ.19ರಂದು ದಾವಣಗೆರೆಯ ಅರಳಿಮರ ಸರ್ಕಲ್ ಬಳಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಪ್ರಕರಣ ಸಂಬಂಧ ಹಿಂದೂ-ಮುಸ್ಲಿಂ ಸೇರಿ 48 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬುಧವಾರ (ಅ. 16) ಎಲ್ಲ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಗಲಭೆಗೆ ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಸತೀಶ್ ಪೂಜಾರಿಗೂ ಜಾಮೀನು ನೀಡಿದೆ. ಆರೋಪಿ ಬಿಡುಗಡೆಯಾಗಿ ಹೊರಬರುತ್ತಿದ್ದಂತೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಸತೀಶ್ ಪೂಜಾರಿ ಮನೆಯ ಸಮೀಪದ ಬಡಾವಣೆಯ ಹಿಂದೂ ಯುವಕರು ಜೈಕಾರ ಹಾಕಿ, ಬರ ಮಾಡಿಕೊಂಡರು. ಇನ್ನು ಕುಟುಂಬಸ್ಥರು ಸತೀಶ್ ಪೂಜಾರಿಗೆ ಆರತಿ ಎತ್ತಿ ತಿಲಕವಿಟ್ಟು ಮನೆಗೆ ಕರೆದುಕೊಂಡರು.
ಸೆ.19ರಂದು ನಗರದ ಅರಳಿ ಮರ ಸರ್ಕಲ್ ನಲ್ಲಿ ಮೆರವಣಿಗೆ ಸಾಗಿದ ನಂತರ ಅಜಾದ್ ನಗರ ಮುಖ್ಯ ರಸ್ತೆಯಿಂದ ಮೊದಲು ಕಲ್ಲು ತೂರಿದ್ದು ಇಬ್ಬರು ಪೊಲೀಸರು ಗಾಯಗೊಂಡಿದ್ದರು. ಕೂಡಲೇ ಮುಸ್ಲಿಂ ಮುಖಂಡರು ಪರಿಸ್ಥಿತಿ ನಿಯಂತ್ರಿಸಿದ್ದರು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ಮೂರು ಕಡೆಗಳಿಂದ ಕಲ್ಲು ತೂರಾಟ ನಡೆಸಲಾಗಿತ್ತು. ಪೊಲೀಸರು ಇಡೀ ನಗರದಲ್ಲಿ ಪಥ ಸಂಚಲನ ನಡೆಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 6 ಪ್ರಕರಣ ದಾಖಲು ಮಾಡಿಕೊಂಡು ಹಿಂದೂ -ಮುಸ್ಲಿಂ ಸಮುದಾಯದ ಒಟ್ಟು 48 ಮಂದಿಯನ್ನು ಬಂಧಿಸಲಾಗಿತ್ತು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕಲ್ಲುತೂರಾಟ ಪ್ರಕರಣ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ ಮಾಡಿದ್ದನ್ನು ಖಂಡಿಸಿ ಹಿಂದೂ ಮುಖಂಡರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಂಚಾಲಕ ಸತೀಶ್ ಪೂಜಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮುಸ್ಲಿಂ ಮುಖಂಡನೊಬ್ಬ ತಾಕತ್ ಇದ್ದರೆ ಬೇತೂರು ರಸ್ತೆಗೆ ಬಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಅದರಂತೆ ಮೆರವಣಿಗೆಯಲ್ಲಿ ಸತೀಶ್ ಪೂಜಾರಿ ಭಾಗವಹಿಸಿದ್ದರು. ಮೆರವಣಿಗೆ ಸಾಗುವ ಅರಳಿಮರ ಸರ್ಕಲ್ ಬಳಿ ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದ್ದರು. ಗಣೇಶನ ಮೆರವಣಿಗೆ ಹೋಗುತ್ತಿದ್ದಾಗ ಇಸ್ಲಾಂ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಈ ವೇಳೆ ಕಲ್ಲು ತೂರಾಟ ನಡೆದಿತ್ತು.