ಯಾರು ಈ ಅರುಣ್‌ ಗೋಯೆಲ್?‌ ಚುನಾವಣೆಗೆ ಮುನ್ನವೇ ಆಯೋಗಕ್ಕೆ ರಾಜೀನಾಮೆ ನೀಡುವ ಅಗತ್ಯವೇನಿತ್ತು?
x

ಯಾರು ಈ ಅರುಣ್‌ ಗೋಯೆಲ್?‌ ಚುನಾವಣೆಗೆ ಮುನ್ನವೇ ಆಯೋಗಕ್ಕೆ ರಾಜೀನಾಮೆ ನೀಡುವ ಅಗತ್ಯವೇನಿತ್ತು?

ಗೋಯೆಲ್ ರಾಜೀನಾಮೆ 'ಮುಕ್ತ ಮತ್ತು ನ್ಯಾಯಸಮ್ಮತ' ಚುನಾವಣೆ ನಡೆಯುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.


ಚುನಾವಣಾ ಆಯುಕ್ತರಲ್ಲಿ ಒಬ್ಬರಾದ ಅರುಣ್ ಗೋಯೆಲ್ ಅವರು ಶನಿವಾರ ರಾಜೀನಾಮೆ ನೀಡಿದ್ದು, ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಲೋಕಸಭೆ ಚುನಾವಣೆ ದಿನಾಂಕಗಳನ್ನು ಘೋಷಿಸುವ ಕೆಲವೇ ದಿನಗಳ ಮೊದಲು ಹುದ್ದೆಯಿಂದ ಕೆಳಗಿಳಿದಿದ್ದು, ಕಾನೂನು ಸಚಿವಾಲಯದ ಅಧಿಸೂಚನೆ ಪ್ರಕಾರ, ರಾಷ್ಟ್ರಪತಿ ದ್ರೌಪದಿ ಮುರ್ಮು ತಕ್ಷಣ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ. ರಾಜೀನಾಮೆಗೆ ʻವೈಯಕ್ತಿಕ ಕಾರಣʼ ನೀಡಿದ್ದಾರೆ ಎನ್ನಲಾಗಿದೆ.

2027 ರವರೆಗೆ ಅವರ ಸೇವಾವಧಿಯನ್ನು ವಿಸ್ತರಿಸುವ ಸಾಧ್ಯತೆ ಇದ್ದಿತ್ತು. ಮುಂದಿನ ವರ್ಷ(2025) ಪ್ರಸ್ತುತ ಸಿಇಸಿ ರಾಜೀವ್ ಕುಮಾರ್ ಅವರ ಸೇವಾವಧಿ ಮುಗಿದ ಬಳಿಕ ಅವರು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಆಗುವವರಿದ್ದರು. ಆದರೆ, ಗೋಯೆಲ್‌ ನಿರ್ಗಮನದಿಂದ ಮುಖ್ಯ ಚುನಾವಣೆ ಆಯುಕ್ತ ರಾಜೀವ್‌ ಕುಮಾ ರ್, ಚುನಾವಣೆ ಆಯೋಗದಲ್ಲಿ ಉಳಿದ ಏಕೈಕ ಸದಸ್ಯರಾಗಿದ್ದಾರೆ. ಇನ್ನೊಬ್ಬರು ಆಯುಕ್ತ ಅನುಪ್ ಚಂದ್ರ ಪಾಂಡೆ ಫೆಬ್ರವರಿಯಲ್ಲಿ ನಿವೃತ್ತರಾಗಿದ್ದಾರೆ.

ಐಎಎಸ್‌ ಅಧಿಕಾರಿ: ಗೋಯೆಲ್, ಪಂಜಾಬ್ ಕೇಡರ್‌ನ 1985ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ಪಂಜಾಬ್‌ನ ಪಟಿಯಾಲಾದಲ್ಲಿ ಡಿಸೆಂಬರ್ 7, 1962 ರಂದು ಜನಿಸಿದ ಅವರು ಪಂಜಾಬ್ ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಪ್ರಥಮ ದರ್ಜೆಯಲ್ಲಿ ಮೊದಲಿಗರಾಗಿದ್ದರಿಂದ 'ಕುಲಪತಿಗಳ ಶ್ರೇಷ್ಠತಾ ಪದಕʼಕ್ಕೆ ಪಾತ್ರರಾಗಿದ್ದರು. ಆನಂತರ, ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲನಿಯದ ಚರ್ಚಿಲ್ ಕಾಲೇಜಿನಿಂದ ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಜಾನ್ ಎಫ್ .ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್‌ನಲ್ಲಿ ತರಬೇತಿ ಪಡೆದಿದ್ದಾರೆ.

37 ವರ್ಷಗಳಿಗೂ ಹೆಚ್ಚು ಕಾಲ ನಾಗರಿಕ ಸೇವೆಯ ಅಧಿಕಾರಿಯಾಗಿ ಕೆಲಸ ಮಾಡಿದ ಗೋಯೆಲ್, ಕೇಂದ್ರ ಭಾರಿ ಕೈಗಾರಿಕೆ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದಾಗ ಇ-ವಾಹನ ಚಳವಳಿಯನ್ನು ಮುನ್ನಡೆಸಿದರು ಮತ್ತು ಉತ್ಪಾದನೆಗೆ ಅನುಗುಣವಾದ ಲಾಭ (ಪಿಎಲ್ಐ) ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರು. 42,500 ಕೋಟಿ ರೂ. ಗುರಿಯಿದ್ದು, 67,690 ಕೋಟಿ ರೂ. ಹೂಡಿಕೆ ಬಂದಿತು.

ಪಂಜಾಬ್‌ನ ಲೂಧಿಯಾನಾ (1995-2000) ಮತ್ತು ಬಟಿಂಡಾ (1993-94) ಜಿಲ್ಲೆಗಳ ಚುನಾವಣಾ ಅಧಿಕಾರಿಯಾಗಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಮೇಲ್ವಿಚಾರಣೆ ಮಾಡಿದ್ದಾರೆ. ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ ಹಾಗೂ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ನವೆಂಬರ್ 18 ರಂದು ಭಾರಿ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿ ಸ್ಥಾನದಿಂದ ಸ್ವಯಂ ನಿವೃತ್ತಿ ಪಡೆದರು.

2002 ರಿಂದ ಚುನಾವಣಾ ಆಯುಕ್ತ: ಸ್ವಯಂ ನಿವೃತ್ತಿ ಪಡೆದ ಮಾರನೇ ದಿನ ಅವರನ್ನು ಚುನಾವಣೆ ಆಯೋಗಕ್ಕೆ ನೇಮಿಸಿದ್ದು, ವಿವಾದ ಸೃಷ್ಟಿಯಾಗಿತ್ತು. ನೇಮಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಆದರೆ, ನ್ಯಾಯಾಲಯ ಆಗಸ್ಟ್ 3, 2023 ರಂದು ಅರ್ಜಿ ವಜಾಗೊಳಿಸಿತು. ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗೆ ಕೆಲವು ದಿನಗಳ ಮೊದಲು ಅವರ ನೇಮಕ ನಡೆದಿತ್ತು.

ಗೋಯೆಲ್ ರಾಜೀನಾಮೆ 'ಮುಕ್ತ ಮತ್ತು ನ್ಯಾಯಸಮ್ಮತ' ಚುನಾವಣೆ ನಡೆಯುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದರೂ, ಸರ್ಕಾರ ನಡೆಸಿದ ಮನವೊಲಿಕೆ ಪ್ರಯತ್ನಗಳು ಫಲಿಸಿಲ್ಲ ಎಂದು ವರದಿಗಳು ಹೇಳಿವೆ.

ಮುಂದೆ ಏನು?: ಗೋಯೆಲ್ ಅವರ ನಿರ್ಗಮನದೊಂದಿಗೆ, ಚುನಾವಣೆ ಆಯೋಗದಲ್ಲಿ ಎರಡು ಹುದ್ದೆಗಳು ಖಾಲಿಯಾಗಿವೆ. ಚುನಾವಣಾ ಆಯುಕ್ತರ ನೇಮಕ ಕುರಿತ ನೂತನ ಶಾಸನದ ಪ್ರಕಾರ, ಕೇಂದ್ರ ಕಾನೂನು ಸಚಿವ ಮತ್ತು ಇಬ್ಬರು ಕಾರ್ಯದರ್ಶಿಗಳನ್ನು ಒಳಗೊಂಡ ಅನ್ವೇಷಣೆ ಸಮಿತಿ ಐವರು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ರಚಿಸಲಿದೆ. ಆನಂತರ ಪ್ರಧಾನಿ ನೇತೃತ್ವದ ಮತ್ತು ಪ್ರಧಾನಿಯಿಂದ ನಾಮನಿರ್ದೇಶನಗೊಳ್ಳುವ ಕೇಂದ್ರ ಸಂಪುಟ ದರ್ಜೆಯ ಸಚಿವ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಥವಾ ಹೆಚ್ಚು ಸಂಸದರಿರುವ ಪ್ರತಿ ಪಕ್ಷದ ನಾಯಕರ ಸಮಿತಿ ಆಯ್ಕೆ ಮಾಡುವ ವ್ಯಕ್ತಿಯನ್ನು ರಾಷ್ಟ್ರಪತಿ ಅವರು ಚುನಾವಣೆ ಆಯುಕ್ತರಾಗಿ ನೇಮಿಸುತ್ತಾರೆ.

Read More
Next Story