ದೇಶವನ್ನು 3 ನೇ ಅತಿ ದೊಡ್ಡ ಆರ್ಥಿಕತೆ ಮಾಡುವ ಗುರಿ: ಮೋದಿ
ಭೋಪಾಲ್, ಫೆ.29- ದೇಶವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಗುರಿಯೊಂದಿಗೆ ಬಿಜೆಪಿ ಲೋಕಸಭೆ ಚುನಾವಣೆಯನ್ನು ಎದುರು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ 17,551 ಕೋಟಿ ರೂ.ಗಿಂತ ಹೆಚ್ಚು ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, 'ವಿಕಸಿತ್ ಭಾರತ್, ವಿಕಸಿತ್ ಮಧ್ಯಪ್ರದೇಶ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಈ ಬಾರಿ 400 ಸೀಟುಗಳ ಗುರಿಯನ್ರುನು ದಾಟಲಿದೆ. ಕಳೆದ 10 ವರ್ಷಗಳಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿದೇಶದ ವಿಶ್ವಾಸಾರ್ಹತೆ ಹೆಚ್ಚಿದೆ. ದೇಶದಲ್ಲಿ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ಸಹಾಯ ಮಾಡಿದೆ ಮತ್ತು ಪ್ರಪಂಚದಾದ್ಯಂತದ ರಾಷ್ಟ್ರಗಳು ನವದೆಹಲಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಉತ್ಸುಕವಾಗಿವೆ ಎಂದು ಹೇಳಿದರು.
ವಿಡಿಯೋ ಲಿಂಕ್ ಮೂಲಕ ನೀರಾವರಿ, ವಿದ್ಯುತ್, ರಸ್ತೆ, ರೈಲು, ನೀರು ಸರಬರಾಜು, ಕಲ್ಲಿದ್ದಲು, ಕೈಗಾರಿಕೆ ಮತ್ತಿತರ ಹಲವು ಯೋಜನೆಗಳಿಗೆ ಅಡಿಪಾಯ ಹಾಕಿದರು ಅಥವಾ ರಾಷ್ಟ್ರಕ್ಕೆ ಸಮರ್ಪಿಸಿದರು.
ʻಕಳೆದ 10 ವರ್ಷಗಳಲ್ಲಿ ದೇಶದ ವಿಶ್ವಾಸಾರ್ಹತೆ ಹಲವಾರು ಪಟ್ಟು ಹೆಚ್ಚಾಗಿದೆ. ದೇಶಗಳು ಭಾರತದೊಂದಿಗೆ ಸ್ನೇಹ ಹೊಂದಲು ಬಯಸುತ್ತವೆ. ವಿದೇಶಕ್ಕೆ ಹೋಗುವ ಭಾರತೀಯರು ಬಹಳಷ್ಟು ಗೌರವ ಪಡೆಯುತ್ತಾರೆ. ಇದರಿಂದ ಹೂಡಿಕೆ ವಿಷಯದಲ್ಲಿ ದೇಶಕ್ಕೆ ನೇರ ಪ್ರಯೋಜನ ನೀಡುತ್ತದೆ. ವಿದೇಶಗಳಿಂದ ಬಂದವರು ಸ್ವಾಭಾವಿಕವಾಗಿ ಮಧ್ಯಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಏಕೆಂದರೆ, ಅದು ವಿಶಿಷ್ಟ ರಾಜ್ಯʼ ಎಂದು ಹೇಳಿದರು.
ಎರಡು ಡಜನ್‌ಗಿಂತ ಹೆಚ್ಚು ಪಕ್ಷಗಳಿರುವ ಬಿಜೆಪಿ ನೇತೃತ್ವದ ಎನ್‌ಡಿಎ, ಚುನಾವಣೆಯಲ್ಲಿ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. 1984ರಲ್ಲಿ ರಾಜೀವ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಗಳಿಸಿದಷ್ಟು ಸ್ಥಾನ ಗಳಿಸುತ್ತೇವೆ. ಮಧ್ಯಪ್ರದೇಶದಲ್ಲಿರುವ ʻಡಬಲ್ ಇಂಜಿನ್ʼ ಸರ್ಕಾರ ʻಡಬಲ್ ಸ್ಪೀಡ್ʼ ನಿಂದ ಕೆಲಸ ಮಾಡುತ್ತಿದೆʼ ಎಂದು ಹೇಳಿದರು.
ಉಜ್ಜಯಿನಿ ನಗರದಲ್ಲಿ ಭಾರತೀಯ 'ಪಂಚಾಂಗ' ಅಥವಾ ಸಮಯದ ಲೆಕ್ಕಾಚಾರ ವ್ಯವಸ್ಥೆಯನ್ನು ಆಧರಿಸಿದ ವಿಶ್ವದ ಮೊದಲ 'ವಿಕ್ರಮಾದಿತ್ಯ ವೇದಿಕ್ ಗಡಿಯಾರ'ವನ್ನು ಉದ್ಘಾಟಿಸಿದರು.
'ಸೈಬರ್ ತೆಹಸಿಲ್' ಯೋಜನೆಗೆ ಚಾಲನೆ ನೀಡಿದರು. ಇದರ ಅಡಿಯಲ್ಲಿ ರಾಜ್ಯದ ಎಲ್ಲಾ 55 ಜಿಲ್ಲೆಗಳಿಗೆ ಒಂದು ಕಂದಾಯ ನ್ಯಾಯಾಲಯವನ್ನು ಸ್ಥಾಪಿಸಲಾಗುವುದು. ಪ್ರಮಾಣೀಕೃತ ಅಂತಿಮ ಆದೇಶಗಳನ್ನು ಇಮೇಲ್/ವಾಟ್ಸ್ ಆಪ್ ಮೂಲಕ ಅರ್ಜಿದಾರರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.