ಏರ್ ಇಂಡಿಯಾ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ನಿಂದ 2,300 ಕೋಟಿ ರೂ. ಹೂಡಿಕೆ
ಬೆಂಗಳೂರು, ಫೆ 19- ಟಾಟಾ ಗ್ರೂಪ್ ಕಂಪನಿಗಳಾದ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ರಾಜ್ಯದಲ್ಲಿ 2,300 ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಲವರು ಯೋಜನೆಗಳ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಈ ಯೋಜನೆಗಳು 1,650 ಜನರಿಗೆ ಉದ್ಯೋಗ ಒದಗಿಸುವ ನಿರೀಕ್ಷೆಯಿದೆ. ಎಂ.ಬಿ. ಪಾಟೀಲ್ ಮಾತನಾಡಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ಫ್ರೇಮ್ ನಿರ್ವಹಣೆ, ದುರಸ್ತಿ ಮತ್ತು ಓವರ್‌ಹಾಲ್ (ಎಂಆರ್‌ಒ) ಸೌಲಭ್ಯವನ್ನು ಸ್ಥಾಪಿಸಲು ಏರ್ ಇಂಡಿಯಾ ಯೋಜಿಸಿದೆ. 1,300 ಕೋಟಿ ರೂ. ಹೂಡಿಕೆ ಯೋಜನೆಯಾಗಿದ್ದು, 1,200 ಜನರಿಗೆ ಉದ್ಯೋಗ ನೀಡುವ ಸಾಧ್ಯತೆಯಿದೆ. ಇದು ದೇಶದ ಇಂಥ ಮೊದಲ ಸೌಲಭ್ಯ ಎಂದು ಹೇಳಿದರು.
ಏರ್ ಇಂಡಿಯಾ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಾಯುಯಾನ ಕೇಂದ್ರವನ್ನು ಸಹ ಸ್ಥಾಪಿಸಲಿದೆ. ಇದು ಬೆಂಗಳೂರಿನ ಮೂಲಕ ಆರ್ಥಿಕ ಚಟುವಟಿಕೆ ಮತ್ತು ವಿಮಾನ ಸಂಚಾರವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.ಟಿಎಎಸ್ಎಲ್ 1,030 ಕೋಟಿ ರೂ.ಹೂಡಿಕೆಯೊಂದಿಗೆ ಮೂರು ಯೋಜನೆಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ .ಇವು 450 ಜನರಿಗೆ ನೇರ ಉದ್ಯೋಗ ಸೃಷ್ಟಿಸುತ್ತವೆ ಎಂದು ಸಂಸ್ಥೆ ಹೇಳಿದೆ.
ʻಈ ಎಲ್ಲ ಯೋಜನೆಗಳು ದೇಶದಲ್ಲೇ ಮೊದಲನೆಯವು ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೋಲಾರದಲ್ಲಿ ನೆಲೆಗೊಂಡಿವೆ. ರಾಜ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆʼ ಎಂದು ತಿಳಿದುಬಂದಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (ಎನ್‌ಸಿಎಇಆರ್) ಅಧ್ಯಯನದ ಪ್ರಕಾರ, ಹಬ್ ರಚನೆಯಿಂದ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು ಎಂಟು ಎಂಪಿಪಿಎ (ವರ್ಷಕ್ಕೆ ದಶಲಕ್ಷ ಪ್ರಯಾಣಿಕರು)ಗೆ ಹೆಚ್ಚಿಸುತ್ತದೆ, ಇದರಿಂದ 25,000 ರಿಂದ 26,000 ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶ ಲಭ್ಯವಾಗಲಿದೆ.