ಭಾರತದ ಪೊಲೀಸ್‌ ಕಸ್ಟಡಿಯಲ್ಲೇ 275 ಅತ್ಯಾಚಾರ !
x
ಪೊಲೀಸ್‌ ಕಸ್ಟಡಿ

ಭಾರತದ ಪೊಲೀಸ್‌ ಕಸ್ಟಡಿಯಲ್ಲೇ 275 ಅತ್ಯಾಚಾರ !

2017ರಿಂದ 2022ರವರೆಗೆ 270ಕ್ಕೂ ಹೆಚ್ಚು ಅತ್ಯಾಚಾರ | ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ


ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನೀಡಿರುವ ಅಂಕಿ- ಅಂಶಗಳು ಭಾರೀ ಆಘಾತಕ್ಕೆ ಕಾರಣವಾಗಿದೆ.

ಮತ್ತೊಂದು ಆತಂಕಕಾರಿ ಅಂಶವೆಂದರೆ 2017ರಿಂದ 2022ರವರೆಗೆ 270ಕ್ಕೂ ಹೆಚ್ಚು ಅತ್ಯಾಚಾರಗಳು ಪೊಲೀಸ್‌ ಕಸ್ಟಡಿಯಲ್ಲಿಯೇ ಸಂಭವಿಸಿವೆ.

ಈ ಆಘಾತಕಾರಿ ಬೆಳವಣಿಗೆಗೆ ಕಾನೂನು ಸುವ್ಯವಸ್ಥೆಯಲ್ಲಿ ಸಂವೇದನಶೀಲತೆ ಇಲ್ಲದಿರುವುದು ಹಾಗೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದೇ ಇರುವುದೇ ಕಾರಣ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆಯರು ಆರೋಪಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ದ ಅಂಕಿ ಅಂಶಗಳ ಪ್ರಕಾರ, ಈ ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿ, ಸಹಾಯಕರು, ಸಶಸ್ತ್ರಪಡೆ ಸಿಬ್ಬಂದಿ, ಜೈಲು, ರಿಮಾಂಡ್ಯ್‌ ಹೋಮ್‌ ಹಾಗೂ ಆಸ್ಪತ್ರೆಗಳ ಸಿಬ್ಬಂದಿ ಸೇರಿದ್ದಾರೆ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಇನ್ನು ಇದರಲ್ಲಿ ಸಣ್ಣ ಸಮಾಧಾನಕರ ಅಂಶವೆಂದರೆ, ಇತ್ತೀಚಿನ ವರ್ಷಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಕೆಯಾಗುತ್ತಿದೆ ಎನ್ನುತ್ತದೆ ಎನ್‌ಸಿಆರ್‌ಬಿ. 2022ರಲ್ಲಿ ಪೊಲೀಸ್‌ ಕಸ್ಟಡಿಯಲ್ಲಿ 24 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

2021ರಲ್ಲಿ 26, 2020ರಲ್ಲಿ 29, 2019ರಲ್ಲಿ 47, 2018ರಲ್ಲಿ 60 ಮತ್ತು 2017ರಲ್ಲಿ 89 ಪ್ರಕರಣಗಳು ದಾಖಲಾಗಿರುವುದು ವರದಿ ಆಗಿದೆ.

ಕಸ್ಟಡಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (2) ಅಡಿಯಲ್ಲಿ ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿ, ಜೈಲರ್‌ಗಳ ಪಾತ್ರವೂ ಇರುವುದು ಆಘಾತಕ್ಕೆ ಕಾರಣವಾಗಿದೆ.

ಮಹಿಳೆಯರನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವವರೇ ಅತ್ಯಾಚಾರ ಎಸಗುತ್ತಿರುವುದು ದಿಗ್ಭ್ರಮೆ ಮೂಡಿಸಿದೆ. ಈ ಪ್ರಕರಣಗಳಲ್ಲಿ ಪೊಲೀಸ್‌ ವ್ಯವಸ್ಥೆಯು ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ತಮ್ಮ ಅಧಿಕಾರವನ್ನು ಬಳಸಿಕೊಂಡಿದೆ.

2017ರಿಂದ ದಾಖಲಾದ 275 ಕಸ್ಟಡಿ ಅತ್ಯಾಚಾರ ಪ್ರಕರಣಗಳಲ್ಲಿ, ಉತ್ತರ ಪ್ರದೇಶದಲ್ಲೇ 92 ಪ್ರಕರಣಗಳು ಅತೀ ಹೆಚ್ಚು ದಾಖಲಾಗಿವೆ. ಮಧ್ಯಪ್ರದೇಶ 43 ಪ್ರಕರಣಗಳು ದಾಖಲಾಗಿದ್ದು ಎರಡನೇ ಸ್ಥಾನದಲ್ಲಿ ಇದೆ.

Read More
Next Story