ಪೇಟಿಎಂನಿಂದ ಫಾಸ್ಟ್‌ಟ್ಯಾಗ್ ಖರೀದಿಸಬೇಡಿ:ಐಎಚ್‌ಎಂಸಿಎಲ್
ಪೇಟಿಎಂ ಪಾವತಿ ಬ್ಯಾಂಕ್ ಹೊರತುಪಡಿಸಿ, 32 ಅಧಿಕೃತ ಬ್ಯಾಂಕ್‌ಗಳಿಂದ ಫಾಸ್ಟ್‌ಟ್ಯಾಗ್ ಖರೀದಿಸಲು ಇಂಡಿಯನ್ ಹೈವೇಸ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಸಲಹೆ ನೀಡಿದೆ.
ಹೊಸದಿಲ್ಲಿ: ಹೆದ್ದಾರಿ ಬಳಕೆದಾರರು ಪೇಟಿಎಂ ಪಾವತಿ ಬ್ಯಾಂಕ್ ಹೊರತುಪಡಿಸಿ, 32 ಅಧಿಕೃತ ಬ್ಯಾಂಕ್‌ಗಳಿಂದ ಫಾಸ್ಟ್ ಟ್ಯಾಗ್ ಖರೀದಿಸಬೇಕೆಂದು ಇಂಡಿಯನ್ ಹೈವೇಸ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಸಲಹೆ ನೀಡಿದೆ.
32 ಅಧಿಕೃತ ಬ್ಯಾಂಕ್‌ಗಳಲ್ಲಿ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೆಸ್ ಬ್ಯಾಂಕ್ ಸೇರಿವೆ.
ದೇಶ 8 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್ ಬಳಕೆದಾರರನ್ನು ಹೊಂದಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿಎಲ್) ಶೇ.30 ಮಾರುಕಟ್ಟೆ ಪಾಲು ಹೊಂದಿದೆ ಎಂದು ಎನ್‌ಎಚ್‌ಎಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಫೆಬ್ರವರಿ 29 ರ ನಂತರ ಗ್ರಾಹಕರ ಖಾತೆಗಳು, ವ್ಯಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳು, ಇತರ ಸಾಧನಗಳಲ್ಲಿ ಠೇವಣಿ ಅಥವಾ ಟಾಪ್ಆಪ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುವಂತೆ ಜನವರಿ 31 ರಂದು ಪೇಟಿಎಂ ಪೇಮೆಂಟ್ ಬ್ಯಾಂಕಿಗೆ ನಿರ್ದೇಶನ ನೀಡಿದೆ. ಆದರೆ, ಉಳಿತಾಯ ಬ್ಯಾಂಕ್ ಖಾತೆಗಳು, ಚಾಲ್ತಿ ಖಾತೆಗಳು, ಪ್ರಿಪೇಯ್ಡ್ ಉಪಕರಣಗಳು,ಫಾಸ್ಟ್ ಟ್ಯಾಗ್‌ಗಳು ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳಂತೆ ಖಾತೆಗಳಿಂದ ಹಣ ಹಿಂಪಡೆಯಲು ಅಥವಾ ಬಳಸಿಕೊಳ್ಳಲು ಯಾವುದೇ ನಿರ್ಬಂಧಗಳಿರುವುದಿಲ್ಲ.
ಫಾಸ್ಟ್ ಟ್ಯಾಗ್ ಎನ್ನುವುದು ಎನ್‌ಎಚ್‌ಎಐಯಿಂದ ನಿರ್ವಹಿಸಲ್ಪಡುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ. ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳಿಂದ ನೇರವಾಗಿ ಟೋಲ್ ಶುಲ್ಕ ಪಾವತಿಸಲು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.