ಯಡಿಯೂರಪ್ಪರಂತೆ ಜೈಲಿಗೆ ಹೋಗಲಾರೆ: ಬಿಡದಿ ಟೌನ್‌ಶಿಪ್ ಡಿನೋಟಿಫೈ ಮಾಡಲು ಡಿಕೆಶಿ ನಿರಾಕರಣೆ
x

ಯಡಿಯೂರಪ್ಪರಂತೆ ಜೈಲಿಗೆ ಹೋಗಲಾರೆ: ಬಿಡದಿ ಟೌನ್‌ಶಿಪ್ ಡಿನೋಟಿಫೈ ಮಾಡಲು ಡಿಕೆಶಿ ನಿರಾಕರಣೆ

ರಾಮನಗರ ಜಿಲ್ಲಾಧಿಕಾರಿ ಕಚೇರಿ ಬಳಿ ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನುದ್ದೇಶಿಸಿ ಮಾತನಾಡಿದ ಡಿಸಿಎಂ ತಮ್ಮ ಸ್ಪಷ್ಟನೆ ನೀಡಿದರು.


"ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ತೀರ್ಮಾನಿಸಿದ್ದು ಎಚ್.ಡಿ. ಕುಮಾರಸ್ವಾಮಿ ಅವರು. ಈಗ ನಾನು ಅದನ್ನು ಡಿನೋಟಿಫೈ ಮಾಡಿ, ಯಡಿಯೂರಪ್ಪ ಅವರಂತೆ ಜೈಲಿಗೆ ಹೋಗಲು ಸಿದ್ಧನಿಲ್ಲ. ಕಾನೂನು ಚೌಕಟ್ಟಿನಲ್ಲಿ ರೈತರಿಗೆ ನೆರವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ," ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.

ಗುರುವಾರ ರಾಮನಗರ ಜಿಲ್ಲಾಧಿಕಾರಿ ಕಚೇರಿ ಬಳಿ ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಟೌನ್‌ಶಿಪ್ ಯೋಜನೆಯ ವಾಸ್ತವತೆ ಮತ್ತು ಸರ್ಕಾರದ ನಿಲುವನ್ನು ತೆರೆದಿಟ್ಟರು.

ಕುಮಾರಸ್ವಾಮಿ ಕುಟುಂಬವೇ ಪರಿಹಾರಕ್ಕೆ ಅರ್ಜಿ ಹಾಕಿದೆ

"ನಾನು ನಿಮ್ಮ ಜಿಲ್ಲೆಯವನೇ. ಬಿಡದಿ ಕೈಗಾರಿಕಾ ಪ್ರದೇಶವಾದಾಗ 16,000 ಎಕರೆ ಭೂಮಿ ಹೋಯಿತು, ನನ್ನದೂ 12 ಎಕರೆ ಜಮೀನು ಹೋಯಿತು. ಆಗ 8 ಲಕ್ಷಕ್ಕಿಂತ ಹೆಚ್ಚು ಪರಿಹಾರ ಸಿಗಲಿಲ್ಲ. ಈಗ ನಿಮಗೆ ಉತ್ತಮ ಪರಿಹಾರ ನೀಡಲು ಸುಮಾರು 10,000 ಕೋಟಿ ರೂಪಾಯಿ ಸಾಲ ಮಾಡುವ ಬಗ್ಗೆ ಚರ್ಚೆಯಾಗಿದೆ. ಆದರೆ, ಕುಮಾರಸ್ವಾಮಿ ಅವರ ಧರ್ಮಪತ್ನಿ, ಮಗ ಸೇರಿದಂತೆ ಶೇ. 70ರಷ್ಟು ಮಂದಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ, ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಕೇವಲ ಶೇ. 30ರಷ್ಟು ಮಂದಿ ಮಾತ್ರ ವಿರೋಧಿಸುತ್ತಿದ್ದಾರೆ. ಈ ಹಂತದಲ್ಲಿ ನಾನು ಕಾನೂನು ಮೀರಿ ಭೂಮಿಯನ್ನು ಕೈಬಿಡಲು ಸಾಧ್ಯವಿಲ್ಲ," ಎಂದು ಡಿಕೆಶಿ ಹೇಳಿದರು.

"ಕೇವಲ ಬಿಡದಿಗೆ ವಿಶೇಷ ತೀರ್ಮಾನ ತೆಗೆದುಕೊಂಡರೆ, ಅದು ರಾಜ್ಯದ ಎಲ್ಲಾ ಭೂಸ್ವಾಧೀನ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ. ಡಿನೋಟಿಫಿಕೇಷನ್ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟ ಅಭಿಪ್ರಾಯ ಬಂದಿದೆ," ಎಂದು ಅವರು ತಿಳಿಸಿದರು.

ಶಾಸಕ ಬಾಲಕೃಷ್ಣ ಪರ ಡಿಕೆಶಿ ಬ್ಯಾಟಿಂಗ್

ಸ್ಥಳೀಯ ಶಾಸಕ ಬಾಲಕೃಷ್ಣ ರೈತರ ಪರವಾಗಿಲ್ಲ ಎಂಬ ಪ್ರತಿಭಟನಾಕಾರರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, "ಬಾಲಕೃಷ್ಣ ನಿಮ್ಮ ಪರವಾಗಿ ಎಷ್ಟು ಹೋರಾಡಿದ್ದಾರೆ ಎಂಬುದು ನನಗೆ ಗೊತ್ತು. ಹಿಂದೆ ಭೂಸ್ವಾಧೀನಕ್ಕೆ ಸಹಿ ಹಾಕಿದವರು, ಎಕರೆಗೆ 1 ಕೋಟಿ ರೂಪಾಯಿ ಪರಿಹಾರ ನಿಗದಿ ಮಾಡಿದ ಬಿಜೆಪಿ ಸರ್ಕಾರ ನಿಮ್ಮ ಪರವೇ? ಅವರ್ಯಾರೂ ನಿಮ್ಮ ಪರವಿಲ್ಲ. ಬಾಲಕೃಷ್ಣರಷ್ಟು ಹೋರಾಟ ಬೇರೆ ಯಾರೂ ಮಾಡಿಲ್ಲ," ಎಂದು ಶಾಸಕರನ್ನು ಸಮರ್ಥಿಸಿಕೊಂಡರು.

ಆಗ ವಿರೋಧಿಸದವರು ಈಗೇಕೆ ವಿರೋಧಿಸುತ್ತಿದ್ದೀರಿ?

"ಡಿಎಲ್‌ಎಫ್ ಕಂಪನಿ ಟೌನ್‌ಶಿಪ್ ಮಾಡಲು ಮುಂದೆ ಬಂದು, ನಂತರ ವೃಷಭಾವತಿ ನೀರು ಸೇರಿದಂತೆ ಇತರ ಕಾರಣಗಳಿಂದ ಯೋಜನೆ ಕೈಬಿಟ್ಟಿತು. ಆಗ 9,600 ಎಕರೆಯಲ್ಲಿ 912 ಎಕರೆಯನ್ನು ಕೈಗಾರಿಕೆಗೆ ನೀಡಲಾಯಿತು, ಎಕರೆಗೆ 1 ಕೋಟಿ ರೂಪಾಯಿಗೂ ಹೆಚ್ಚು ಪರಿಹಾರ ನಿಗದಿಪಡಿಸಲಾಯಿತು. ಆಗ ಯಾರೂ ವಿರೋಧ ಮಾಡಲಿಲ್ಲ. ಈಗೇಕೆ ವಿರೋಧ?" ಎಂದು ಪ್ರಶ್ನಿಸಿದರು.

ಪೆರಿಫೆರಲ್ ರಿಂಗ್ ರಸ್ತೆಗೆ ನ್ಯಾಯಾಲಯದ ಆದೇಶ ಮೀರಿ 27,000 ಕೋಟಿ ರೂಪಾಯಿ ಸಾಲ ಮಾಡಿ ಪರಿಹಾರ ನೀಡಲಾಗುತ್ತಿದೆ ಎಂದು ಉದಾಹರಣೆ ನೀಡಿದ ಅವರು, "ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆಗಳ ಬಗ್ಗೆಯೂ ನಾವು ಯೋಚಿಸುತ್ತಿದ್ದೇವೆ. ಎಲ್ಲಾ ಕಡೆ ಒಂದೇ ನ್ಯಾಯ ಪಾಲಿಸಬೇಕಾಗುತ್ತದೆ," ಎಂದು ಸ್ಪಷ್ಟಪಡಿಸಿದರು.

"ಕುಮಾರಸ್ವಾಮಿ ಅವರು ಭೂಸ್ವಾಧೀನ ಕೈಬಿಡುವುದಾಗಿ ಹೇಳಿದ್ದು ಸುಳ್ಳು. ಈಗ ಅವರು ದೊಡ್ಡ ಸ್ಥಾನದಲ್ಲಿದ್ದಾರೆ, ಅವರಿಂದಲೇ ಭೂಸ್ವಾಧೀನವನ್ನು ಬಿಡಿಸಿಕೊಳ್ಳಿ," ಎಂದು ರೈತರಿಗೆ ತಿರುಗೇಟು ನೀಡಿದರು. "ನಾನು ಹೊಸದಾಗಿ ಭೂಸ್ವಾಧೀನ ಮಾಡುತ್ತಿಲ್ಲ, ಕಾನೂನಿನ ಪ್ರಕಾರವೇ ಮುಂದುವರಿಯಬೇಕಾಗುತ್ತದೆ," ಎಂದು ಡಿಸಿಎಂ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

Read More
Next Story