ಹಿರಿಯ ಅಧಿಕಾರಿಗಳಿಂದ ಮಾನಸಿಕ ಹಿಂಸೆ: ಮಹಿಳಾ ಕೆಎಎಸ್ ಅಧಿಕಾರಿಯಿಂದ ಆಯೋಗಕ್ಕೆ ದೂರು
x

ಹಿರಿಯ ಅಧಿಕಾರಿಗಳಿಂದ ಮಾನಸಿಕ ಹಿಂಸೆ: ಮಹಿಳಾ ಕೆಎಎಸ್ ಅಧಿಕಾರಿಯಿಂದ ಆಯೋಗಕ್ಕೆ ದೂರು

ನನ್ನನ್ನು ಅಮಾನತು ಮಾಡಲು ಶಿಫಾರಸು ಮಾಡುವ ಮುನ್ನ, ಅವರು ಸರ್ಕಾರ ಅಥವಾ ಯಾವುದೇ ಮೇಲಧಿಕಾರಿಗಳಿಂದ ಅನುಮತಿ ಪಡೆದಿಲ್ಲ. ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು.


ಹಿರಿಯ ಅಧಿಕಾರಿಗಳು ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದು, ನನ್ನ ಕೆಲಸಕ್ಕೆ ಅಡಚಣೆ ಉಂಟುಮಾಡುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು," ಎಂದು ಕೋರಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕಿ ಹಾಗೂ ಕೆಎಎಸ್ ಅಧಿಕಾರಿ ಎಚ್. ಪುಷ್ಪಲತಾ ಅವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಐಸಿಡಿಎಸ್ ಜಂಟಿ ನಿರ್ದೇಶಕ ಬಿ.ಎಚ್. ನಿಶ್ಚಲ್ ಮತ್ತು ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಮಹೇಶ್ ಬಾಬು ಅವರು ತಮ್ಮ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ ಎಂದು ಪುಷ್ಪಲತಾ ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

"ನಾನು ಈ ಹಿಂದೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾಗ, ಹಿಂದಿನ ವರ್ಷಗಳಲ್ಲಿ ಬ್ಯಾಂಕ್‌ಗಳಲ್ಲಿ ಜಮೆಯಾಗಿದ್ದ ಹಣ ಮತ್ತು ಬಡ್ಡಿಯನ್ನು ಆರ್ಥಿಕ ಇಲಾಖೆಯ ನಿರ್ದೇಶನದಂತೆ ನಿಯಮಾನುಸಾರ ಸರ್ಕಾರಕ್ಕೆ ಮರುಪಾವತಿ ಮಾಡಿದ್ದೇನೆ. ಕಚೇರಿ ಸ್ಥಳಾಂತರದ ಬಗ್ಗೆಯೂ ಪತ್ರ ವ್ಯವಹಾರ ನಡೆಸಿ, ಮೇಲಧಿಕಾರಿಗಳಿಂದ ಅನುಮತಿ ಪಡೆದಿದ್ದೇನೆ. ಆದಾಗ್ಯೂ, ಇದನ್ನೇ ನೆಪವಾಗಿಟ್ಟುಕೊಂಡು ನಿಶ್ಚಲ್ ಮತ್ತು ಮಹೇಶ್ ಬಾಬು ಅವರು ಏಕ ಕಡತದ ಮೂಲಕ ನನ್ನನ್ನು ಅಮಾನತು ಮಾಡಲು ಶಿಫಾರಸು ಮಾಡಿದ್ದಾರೆ," ಎಂದು ಪುಷ್ಪಲತಾ ಆರೋಪಿಸಿದ್ದಾರೆ.

"ನನ್ನನ್ನು ಅಮಾನತು ಮಾಡಲು ಶಿಫಾರಸು ಮಾಡುವ ಮುನ್ನ, ಅವರು ಸರ್ಕಾರ ಅಥವಾ ಯಾವುದೇ ಮೇಲಧಿಕಾರಿಗಳಿಂದ ಅನುಮತಿ ಪಡೆದಿಲ್ಲ. ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು, ಮನಬಂದಂತೆ ಕ್ರಮ ಕೈಗೊಂಡು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದ್ದಾರೆ. ಮಹಿಳಾ ಅಧಿಕಾರಿಗೆ ಈ ರೀತಿ ಮಾನಸಿಕ ಹಿಂಸೆ ನೀಡುತ್ತಿರುವುದು ನನಗೆ ತೀವ್ರ ಘಾಸಿ ಉಂಟುಮಾಡಿದೆ. ಆದ್ದರಿಂದ, ಈ ಇಬ್ಬರು ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿಕೊಡಬೇಕು," ಎಂದು ಪುಷ್ಪಲತಾ ಅವರು ಮಹಿಳಾ ಆಯೋಗಕ್ಕೆ ಸಲ್ಲಿಸಿರುವ ಮನವಿಯಲ್ಲಿ ಕೋರಿದ್ದಾರೆ.

Read More
Next Story