ವಿಜಯಪುರ ಜಿಲ್ಲಾಧ್ಯಕ್ಷರ ಆಯ್ಕೆ | ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿರುವ ಯತ್ನಾಳ್‌‌ ಹೊರಗಿಟ್ಟು ಪ್ರಕ್ರಿಯೆ
x
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ ಜಿಲ್ಲಾಧ್ಯಕ್ಷರ ಆಯ್ಕೆ | ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿರುವ ಯತ್ನಾಳ್‌‌ ಹೊರಗಿಟ್ಟು ಪ್ರಕ್ರಿಯೆ

ಒಂದು ಕಡೆ ಯತ್ನಾಳ್‌ ಅವರು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯ ಕುರಿತು ಭಿನ್ನಮತೀಯ ನಾಯಕರ ಸಭೆ ನಡೆಸುತ್ತಿರುವಾಗಲೇ ಅತ್ತ ಅವರ ತವರು ಜಿಲ್ಲೆ ವಿಜಯಪುರದಲ್ಲಿ ಪಕ್ಷದ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಕುರಿತ ಕೋರ್‌ ಕಮಿಟಿ ಸಭೆ ನಡೆದಿದೆ.


ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಬಹಿರಂಗ ಸಮರ ಸಾರಿರುವ ರೆಬೆಲ್‌ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಆದರೆ, ತಮ್ಮದೇ ತವರು ಜಿಲ್ಲೆಯ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲೇ ಯತ್ನಾಳರ ಮಾತಿಗೆ ಕವಡೆ ಕಿಮ್ಮತ್ತಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಪಕ್ಷದ ಹಿರಿಯ ನಾಯಕ ಯತ್ನಾಳ್‌ ಅವರನ್ನೇ ಹೊರಗಿಟ್ಟು ಜಿಲ್ಲಾಧ್ಯಕ್ಷರ ಆಯ್ಕೆಯ ಕೋರ್‌ ಕಮಿಟಿ ಸಭೆ ನಡೆದಿದೆ.

ಬೆಂಗಳೂರಿನಲ್ಲಿ ಗುರುವಾರ ಒಂದು ಕಡೆ ಯತ್ನಾಳ್‌ ಅವರು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯ ಕುರಿತು ಭಿನ್ನಮತೀಯ ನಾಯಕರ ಸಭೆ ನಡೆಸುತ್ತಿರುವಾಗಲೇ ಅತ್ತ ಅವರ ತವರು ಜಿಲ್ಲೆ ವಿಜಯಪುರದಲ್ಲಿ ಪಕ್ಷದ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಕುರಿತ ಕೋರ್‌ ಕಮಿಟಿ ಸಭೆ ನಡೆದಿದೆ. ಬಿಜೆಪಿಯ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಯತ್ನಾಳ್‌ ಅವರನ್ನು ಹೊರಗಿಟ್ಟೇ ಈ ಸಭೆ ನಡೆದಿದೆ ಎಂಬುದು ಗುಟ್ಟೇನಲ್ಲ.

ರಾಜಧಾನಿ ಸಭೆಗೆ ವಿಜಯಪುರದಲ್ಲಿ ತಿರುಗೇಟು

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಸಭೆಯು ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರ ಬೆಂಗಳೂರಿನ ನಿವಾಸದಲ್ಲಿ ಗುರುವಾರ ನಡೆದಿದೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಕೆಳಗಿಳಿಸಬೇಕು ಎಂಬ ವಿಷಯವನ್ನೇ ಮುಂದಿಟ್ಟುಕೊಂಡು ಯತ್ನಾಳ್ ರಾಜಧಾನಿಯಲ್ಲಿ ಆಪ್ತರ ಸಭೆ ನಡೆಸುತ್ತಿರುವಾಗಲೇ ಅತ್ತ, ವಿಜಯಪುರ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಬಿಜೆಪಿ ಚಾಲನೆ ನೀಡಿದೆ.

ಆ ಮೂಲಕ, ಒಂದು ಕಡೆ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಗೆ ಯತ್ನಾಳ್ ಅವರು ಬಣ ಕಟ್ಟಿಕೊಂಡು ಪ್ರಯತ್ನ ಮಾಡುತ್ತಿದ್ದರೆ, ಮತ್ತೊಂದು ಕಡೆ ಅವರದೇ ವಿಜಯಪುರ ಜಿಲ್ಲಾ ಅಧ್ಯಕ್ಷರ ಆಯ್ಕೆಯ ವಿಷಯದಲ್ಲೂ ಅವರನ್ನು ಪರಿಗಣಿಸದೇ ನಿರ್ಲಕ್ಷಿಸುವ ಮೂಲಕ ರಾಜ್ಯಾಧ್ಯಕ್ಷರು ತಿರುಗೇಟು ನೀಡಿದ್ದಾರೆ.


ವಿಜಯಪುರದಲ್ಲಿ ಬಿಜೆಪಿ ಮಹತ್ವದ ಸಭೆ

ವಿಜಯಪುರ ಜಿಲ್ಲಾ ಅಧ್ಯಕ್ಷರ ಆಯ್ಕೆ ಚುನಾವಣಾ ಉಸ್ತುವಾರಿಯಾಗಿರುವ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರವೇ ಜಿಲ್ಲಾಧ್ಯಕ್ಷರ ಆಯ್ಕೆಯ ಮಹತ್ವದ ಸಭೆ ನಡೆದಿದೆ.

ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಜುಗೌಡ ಪಾಟೀಲ, ರಮೇಶ ಭೂಸನೂರ, ಬಿಜೆಪಿ ಹಾಲಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಸೇರಿದಂತೆ ಜಿಲ್ಲಾ ಕೋರ್ ಕಮಿಟಿ ಸದಸ್ಯರು ಭಾಗಿಯಾಗಿದ್ದರು.

ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಒಟ್ಟು 8 ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆ. ಅವರೆಲ್ಲರ ಮಾಹಿತಿಯನ್ನು ರಾಜ್ಯ ಬಿಜೆಪಿಗೆ ಕಳುಹಿಸಲು ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.


ಜಿಲ್ಲಾಧ್ಯಕ್ಷರ ಆಯ್ಕೆಗೆ ಒಮ್ಮತದ ನಿರ್ಧಾರ

ಸಭೆಯ ಬಳಿಕ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಚುನಾವಣಾ ಉಸ್ತುವಾರಿ ಶಂಕರ ಪಾಟೀಲ್ ಮುನೇನಕೊಪ್ಪ, 'ಬಿಜೆಪಿ ಇಡೀ ದೇಶಾದ್ಯಂತ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುತ್ತಿದೆ. ಅದೇ ರೀತಿ ರಾಜ್ಯದಲ್ಲಿಯೂ ಅನೇಕ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ವಿಜಯಪುರ ಜಿಲ್ಲಾ ಅಧ್ಯಕ್ಷರ ಆಯ್ಕೆ ಪೆಂಡಿಂಗ್ ಇತ್ತು. ಹೀಗಾಗಿ ಇವತ್ತು ಜಿಲ್ಲಾ ಕೋರ್ ಕಮಿಟಿಯ 17 ಸದಸ್ಯರೊಂದಿಗೆ ಜಿಲ್ಲಾಧ್ಯಕ್ಷರ ಆಯ್ಕೆ ಕುರಿತು ಸಭೆ ಮಾಡಿದ್ದೇವೆ' ಎಂದಿದ್ದಾರೆ.

ಜೊತೆಗೆ, 'ಒಮ್ಮತದ ನಿರ್ಣಯ ಮಾಡಿದ್ದೇವೆ. ಜೊತೆಗೆ 8 ಅಭ್ಯರ್ಥಿಗಳು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳೆಂದು ಅರ್ಜಿ ಕೊಟ್ಟಿದ್ದಾರೆ. 8 ಅಭ್ಯರ್ಥಿಗಳ ಹಾಲಿ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಕಳಿಸಿಕೊಡಲಿದ್ದಾರೆ. ಸಮನ್ವಯತೆಯಿಂದ ವಿಜಯಪುರ ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಮಾಡಬೇಕು ಎಂಬುದು ಎಲ್ಲರ ತೀರ್ಮಾನವಾಗಿದೆ. ಅದರಂತೆ 8 ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಬಿಜೆಪಿಗೆ ಕಳುಹಿಸಲಾಗುತ್ತದೆ' ಎಂದಿದ್ದಾರೆ.

ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ

ಬಿಜೆಪಿ ಹಾಲಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ್ (ಕುಚಬಾಳ), ಭೀಮಾಶಂಕರ ಹದನೂರ, ಸುರೇಶ್ ಬಿರಾದಾರ, ಗುರುಲಿಂಗಪ್ಪ ಅಂಗಡಿ, ಮಲ್ಲಿಕಾರ್ಜುನ್ ಜೋಗುರ, ವಿವೇಕಾನಂದ ಡಬ್ಬಿ, ಮಾಲೂಗೌಡ ಪಾಟೀಲ್ ಹಾಗೂ ಬಸವರಾಜ ಬೈಚಬಾಳ ಅವರುಗಳು ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.


ಯಾವುದೇ ಗೊಂದಲ ಇಲ್ಲ ಎಂದ ಜಿಲ್ಲಾಧ್ಯಕ್ಷ

ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆ ಕುರಿತ ಕೋರ್‌ ಕಮಿಟಿ ಸಭೆಯ ಬಗ್ಗೆ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ವಿಜಯಪುರ ಬಿಜೆಪಿ ಹಾಲಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ್ (ಕುಚಬಾಳ), 'ಕೋರ್ ಕಮಿಟಿ ಸಭೆ ಮಾಡಿದ್ದೇವೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ಸೇರಿದಂತೆ ಒಟ್ಟು 8 ಆಕಾಂಕ್ಷಿಗಳಿದ್ದೇವೆ. ಪಟ್ಟಿಯನ್ನು ರಾಜ್ಯ ಸಮಿತಿಗೆ ಕಳುಹಿಸಿದ್ದೇವೆ. ಸಮನ್ವಯತೆಯಿಂದ ಜಿಲ್ಲಾಧ್ಯಕ್ಷ ಆಯ್ಕೆ ಆಗಲಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಜಿಲ್ಲೆಯ ಬಿಜೆಪಿ ನಾಯಕರು ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದರು' ಎಂದಿದ್ದಾರೆ.

ಆ ಮೂಲಕ ಜಿಲ್ಲೆಯ ಹಿರಿಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಜಿಲ್ಲಾ ಬಿಜೆಪಿ ಲೆಕ್ಕಕ್ಕೇ ಇಟ್ಟಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಒಟ್ಟಾರೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಬದಲಾವಣೆಗೆ ಯತ್ನಾಳ್ ಬಣ ತೀವ್ರ ಪ್ರಯತ್ನ ನಡೆಸಿದೆ. ಇದೇ ವೇಳೆ, ಯತ್ನಾಳ್‌ ಅವರ ಗಮನಕ್ಕೇ ಬರದಂತೆ ಅವರ ತವರು ಜಿಲ್ಲೆಯ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುರು ಮಾಡುವ ಮೂಲಕ ವಿಜಯೇಂದ್ರ ಅವರು ಯತ್ನಾಳ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಈ ದಾಳಕ್ಕೆ ಯತ್ನಾಳ್ ಬಣ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

Read More
Next Story