ಮಂತ್ರಾಲಯಕ್ಕೆ ಭೇಟಿದ್ದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ನೀರುಪಾಲು
x

ಮಂತ್ರಾಲಯಕ್ಕೆ ಭೇಟಿದ್ದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ನೀರುಪಾಲು

ನದಿಯಲ್ಲಿ ನೀರಿನ ರಭಸ ಅಧಿಕವಾಗಿದ್ದರೂ, ಬೇಡವೆಂದು ಹೇಳಿದರೂ ಯುವಕರು ಈಜಲು ಹೋಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.


ರಾಯಚೂರು ಜಿಲ್ಲೆಯ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾಗವಲ್ ಗ್ರಾಮದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿರುವುದು ವರದಿಯಾಗಿದೆ. ನಾಪತ್ತೆಯಾದವರನ್ನು ಅಜಿತ್ (20), ಸಚಿನ್ (20) ಹಾಗೂ ಪ್ರಮೋದ್ (19) ಎಂದು ಗುರುತಿಸಲಾಗಿದೆ.

ಪದವಿ ವಿದ್ಯಾರ್ಥಿಗಳಾದ ಈ ಮೂವರು ಯುವಕರು ತಮ್ಮ ಸ್ನೇಹಿತರ ತಂಡದೊಂದಿಗೆ ಶನಿವಾರ ಮಂತ್ರಾಲಯಕ್ಕೆ ತೆರಳಿದ್ದರು. ತುಂಗಭದ್ರಾ ನದಿಯ ಬಳಿ ಐವರು ಸ್ನೇಹಿತರು ಸ್ನಾನ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ನದಿಯಲ್ಲಿ ನೀರಿನ ರಭಸ ಹೆಚ್ಚಾಗಿದ್ದರಿಂದ ಮೂವರು ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನದಿಗೆ ಹೆಚ್ಚಿನ ನೀರು ಹರಿಬಿಟ್ಟಿರುವುದು ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

ನದಿಯಲ್ಲಿ ನೀರಿನ ರಭಸ ಅಧಿಕವಾಗಿದ್ದರೂ, ಬೇಡವೆಂದು ಹೇಳಿದರೂ ಯುವಕರು ಈಜಲು ಹೋಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಘಟನೆ ನಡೆದ ಕೂಡಲೇ ಮಂತ್ರಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಮತ್ತು ಈಜುಗಾರರ ತಂಡವು ಯುವಕರ ಶೋಧ ಕಾರ್ಯವನ್ನು ಆರಂಭಿಸಿದೆ. ರಾತ್ರಿಯಾಗಿದ್ದರಿಂದ ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಭಾನುವಾರ ಬೆಳಗ್ಗೆ ಪುನರಾರಂಭಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read More
Next Story