ತಮಿಳುನಾಡಿನಲ್ಲಿ ಗ್ಯಾಸ್ ಕಟರ್ ಗ್ಯಾಂಗ್ ಮೇಲೆ ಪೊಲೀಸ್ ಎನ್ಕೌಂಟರ್; ಆರೋಪಿಗಳು ಕರ್ನಾಟಕ ಪ್ರಕರಣಗಳಲ್ಲೂ ಭಾಗಿ
ಹರಿಯಾಣದ ಗ್ಯಾಸ್ ಕಟರ್ ಗ್ಯಾಂಗ್ ಕಳೆದ ಆರು ತಿಂಗಳಲ್ಲಿ ಆರು ರಾಜ್ಯಗಳಲ್ಲಿ ಎಟಿಎಂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದೆ. ತಮಿಳುನಾಡಿನ ಹೊಸೂರಿನಲ್ಲಿ ಎರಡು , ಕರ್ನಾಟಕದ ಬೆಂಗಳೂರು ಮತ್ತು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ತಲಾ ಒಂದು ದರೋಡೆ ಪ್ರಕರಣ ವರದಿಯಾಗಿದೆ.
ತಮಿಳುನಾಡಿನಲ್ಲಿ ನಡೆದ ಸಿನಿಮೀಯ ಶೈಲಿಯ ಪೊಲೀಸ್ ಎನ್‌ಕೌಂಟರ್ ವೇಳೆ ಒಬ್ಬ ಎಟಿಎಂ ದರೋಡೆಕೋರ ಹತನಾಗಿ,, ಆರು ಮಂದಿಯನ್ನು ತಮಿಳುನಾಡು ಪೊಲೀಸರು ಬಂಧಿಸುತ್ತಿದ್ದಂತೆ ಆರು ರಾಜ್ಯಗಳ ಪೊಲೀಸ್ ತನಿಖಾ ತಂಡಗಳು ನಾಮಕ್ಕಲ್‌ಗೆ ತೆರಳಿವೆ.
ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಕೇರಳ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಪೊಲೀಸ್ ಅಧಿಕಾರಿಗಳು ತಮ್ಮ ರಾಜ್ಯಗಳಲ್ಲಿ ನಡೆದಿರುವ ಎಟಿಎಂ ದರೋಡೆ ಪ್ರಕರಣಗಳ ತನಿಖೆಗಾಗಿ ತಮಿಳುನಾಡಿಗೆ ಆಗಮಿಸಿದ್ದಾರೆ.
ಹರಿಯಾಣದ ಕಟರ್ ಗ್ಯಾಂಗ್ ಅನ್ನು ಆರು ರಾಜ್ಯಗಳ ಪೊಲೀಸರ ತಂಡ ತಮಿಳುನಾಡಿನಲ್ಲಿ ಬಂಧಿಸಿದೆ. ಹರಿಯಾಣದ ಗ್ಯಾಸ್ ಕಟರ್ ಗ್ಯಾಂಗ್ ಎಂದೇ ಕುಖ್ಯಾತಿ ಪಡೆದಿರುವ ದರೋಡೆಕೋರರ ತಂಡ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಎಟಿಎಂ ದರೋಡೆ ಮಾಡುತ್ತಿತ್ತು ಎಂದು ಆರೋಪಿಗಳ ವಿಚಾರಣೆಯಿಂದ ತಿಳಿದುಬಂದಿದೆ. ಬಂಧಿತರ ಪೈಕಿ ಹರಿಯಾಣದ ಪಲ್ವಾಲ್ನ ಎಚ್ ಜುಮಾದಿನ್ (40) ಎನ್ಕೌಂಟರ್ನಲ್ಲಿ ಮೃತಪಟ್ಟರೆ ಅಜರ್ ಅಲಿ (30) ಅವರ ಕಾಲಿಗೆ ಗುಂಡೇಟಿನಿಂದ ಗಾಯವಾಗಿದೆ. ಮೊಹಮ್ಮದ್ ಇಕ್ರಮ್ (42), ಮುಬಾರಕ್ (18), ಸಬ್ಬೀರ್ ಖಾನ್ (26), ಶೌಕೀನ್ (21), ಮತ್ತು ಇರ್ಫಾನ್ (32) ಉಳಿದ ಶಂಕಿತರು .
ತರಬೇತಿ ಪಡೆದಿದ್ದ ತಂಡ
ಹರಿಯಾಣ ಮೂಲದ ಬಂಧಿತ ದರೋಡೆಕೋರರು ಎಟಿಎಂ ಯಂತ್ರದಲ್ಲಿ ನಗದು ಟ್ರೇಗಳಿಗೆ ಹಾನಿಯಾಗದಂತೆ ಗ್ಯಾಸ್ ಕಟರ್ ಬಳಸಿ ದರೋಡೆ ಮಾಡುವ ಬಗ್ಗೆ ತರಬೇತಿ ಪಡೆದಿದ್ದರು. 70 ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದರು, ಎಂದು ಮೂಲಗಳು ತಿಳಿಸಿವೆ. ಇನ್ನು ಬಂಧಿತರಲ್ಲಿ ಕೆಲವರು ಎಟಿಎಂ ವಿನ್ಯಾಸ ಮಾಡುವ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಎಸ್‌ಬಿಎಂ ಬ್ಯಾಂಕಿನ ಎಟಿಎಂ ಯಂತ್ರಗಳನ್ನು ಗುರಿ ಮಾಡಿಕೊಂಡು ದರೋಡೆ ಮಾಡುತ್ತಿದ್ದರು. ಕೃತ್ಯಕ್ಕೂ ಮುನ್ನ ಸಿಸಿಟಿವಿ ಕ್ಯಾಮೆರಾದ ಲೆನ್ಸ್ಗಳಿಗೆ ಬಣ್ಣ ಸಿಂಪಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳದ ತ್ರಿಶ್ಯೂರ್‌ನಲ್ಲಿ ಈಚೆಗೆ ಮೂರು ಎಟಿಎಂಗಳನ್ನು ದರೋಡೆ ಮಾಡಿ ಕೊಚ್ಚಿ-ಸೇಲಂ ಹೆದ್ದಾರಿಯಲ್ಲಿ ತಮಿಳುನಾಡಿನತ್ತ ಪರಾರಿಯಾಗುತ್ತಿದ್ದ ಗ್ಯಾಂಗಿನ ಕುರಿತು ಕೇರಳ ಪೊಲೀಸರು, ತಮಿಳುನಾಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಗಳು ತೆರಳುತ್ತಿದ್ದ ಟ್ರಕ್ ಅನ್ನು ಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿದ್ದರು. ನಾಲ್ಕೈದು ಕಿ.ಮೀ. ಚೇಸಿಂಗ್ ಬಳಿಕ ದರೋಡೆಕೋರರು ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದರು. ಆಗ ನಡೆದ ಎನ್ನ್ಕೌಂಟರ್‌ನಲ್ಲಿ ಒಬ್ಬ ದರೋಡೆಕೋರ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಗಾಯಗೊಂಡಿದ್ದ. ಉಳಿದವರನ್ನು ಬಂಧಿಸಲಾಗಿತ್ತು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ಕಂಟೈನರ್ ಟ್ರಕ್ ಹಾಗೂ 65 ಲಕ್ಷ ರೂ, ನಗದನ್ನು ವಶಪಡಿಸಿಕೊಂಡಿದ್ದರು.
ಆರು ರಾಜ್ಯಗಳಲ್ಲಿ ಎಟಿಎಂ ದರೋಡೆ
ಹರಿಯಾಣದ ಗ್ಯಾಸ್ ಕಟರ್ ಗ್ಯಾಂಗ್ ಕಳೆದ ಆರು ತಿಂಗಳಲ್ಲಿ ಆರು ರಾಜ್ಯಗಳಲ್ಲಿ ಎಟಿಎಂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದೆ. 2024 ಜುಲೈ ತಿಂಗಳಲ್ಲಿ ತಮಿಳುನಾಡಿನ ಹೊಸೂರಿನಲ್ಲಿ ಎರಡು , ಕರ್ನಾಟಕದ ಬೆಂಗಳೂರು ಮತ್ತು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ತಲಾ ಒಂದು ದರೋಡೆ ಪ್ರಕರಣ ವರದಿಯಾಗಿದೆ. ಈ ನಾಲ್ಕು ಪ್ರಕರಣಗಳಲ್ಲಿ ಪೊಲೀಸರಿಗೆ ದೊರೆತ ಬೆರಳಚ್ಚನ್ನು ಆರೋಪಿಗಳ ಬೆರಳಚ್ಚಿನೊಂದಿಗೆ ತಾಳೆ ಮಾಡುತ್ತಿದ್ದೇವೆ ಎಂದು. ಅಧಿಕಾರಿಯೊಬ್ಬರು ʼದ ಫೆಡರಲ್ʼ ಗೆ ತಿಳಿಸಿದರು.
ಆರು ತಿಂಗಳಲ್ಲಿ ದಕ್ಷಿಣ ಭಾರತದಾದ್ಯಂತ ಕನಿಷ್ಠ 15 ಎಟಿಎಂ ದರೋಡೆ ಪ್ರಕರಣಗಳಿಗೆ ಗ್ಯಾಂಗ್ ನಂಟು ಹೊಂದಿರಬಹುದು ಎಂದು ಸೇಲಂ ಡಿಐಜಿ ಇ.ಎಸ್ ಉಮಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ