ಕರಾವಳಿಯಲ್ಲಿ ಕಾರ್ಯಾಚರಿಸುತ್ತಿದೆ ಎಂಡಿಎಂಎ ಡ್ರಗ್‌ ಮಾಫಿಯಾ; ಜಾಲದ ಮೂಲ ಯಾವುದು?
x
MDMA Durg

ಕರಾವಳಿಯಲ್ಲಿ ಕಾರ್ಯಾಚರಿಸುತ್ತಿದೆ ಎಂಡಿಎಂಎ ಡ್ರಗ್‌ ಮಾಫಿಯಾ; ಜಾಲದ ಮೂಲ ಯಾವುದು?

ಸಣ್ಣ ಪುಟ್ಟ ಡ್ರಗ್‌ ದಂಧೆಗಳನ್ನು ನಡೆಯುತ್ತಿದ್ದ ಮಂಗಳೂರು ನಗರದಲ್ಲಿ ಈಗ ಮಾದಕ ದ್ರವ್ಯಗಳನ್ನು ತಯಾರಿಸುವ ಅಕ್ರಮ ವಹಿವಾಟುಗಳು ಹೆಚ್ಚಾಗಿವೆ.


ಮೀಥೈಲ್ ಎಂಡಿಯಾಕ್ಸಿ ಮೆಥಾಂಫೆಟಮೈನ್ (-Methyl enedioxy methamphetamine) ಅಂದರೆ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಆದರೆ ಎಂ.ಡಿ.ಎಂ.ಎ. ಎಂದು ಹೇಳಿದರೆ ಒಂದು ವರ್ಗದ ಮಂದಿಗೆ ಏನೆಂದು ಅರ್ಥವಾಗುತ್ತದೆ.ಅದುವೇ ಮನುಷ್ಯನ ಮೆದುಳಿನ ನರಮಂಡಲಗಳನ್ನು ಕೆರಳಿಸುವ ಮಾದಕ ದ್ರವ್ಯ.

ಈ ರಾಸಾಯನಿಕ ಈಗ ಮಾದಕ ದ್ರವ್ಯ ವ್ಯಸನಿಗಳಿಗೆ ಹಾಟ್ ಫೇವರೇಟ್. ಇದಕ್ಕಿಂತಲೂ ಅಪಾಯಕಾರಿ ಸಂಗತಿ ಏನೆಂದರೆ ಅಲ್ಪಸ್ವಲ್ಪ ಜ್ಞಾನ ಇರುವ ಮಂದಿ ಇದನ್ನು ಸಣ್ಣ ಲ್ಯಾಬ್‌ನಲ್ಲಿ ತಯಾರಿಸಲು ಆರಂಭಿಸಿಕೊಂಡಿದ್ದಾರೆ. ಇಂಥ ಡ್ರಗ್‌ ಜಾಲಗಳು ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡದ ಮಂಗಳೂರಿಗೆ ವಕ್ಕರಿಸಿಕೊಂಡುಬಿಟ್ಟಿದೆ. ತೆರೆಮರೆಯಲ್ಲಿರುವ ಕೆಲವು ಅಸಾಮಾನ್ಯ ಕಿಡಿಗೇಡಿಗಳು ಈ ಜಾಲದ ನೇತೃತ್ವ ವಹಿಸಿಕೊಂಡಿದ್ದು ಯುವ ಜನರನ್ನು ಅಮಲಿನಲ್ಲಿ ತೇಲುವಂತೆ ಮಾಡುತ್ತಿದ್ದಾರೆ.

ಎಂಡಿಎಂಎ ಡ್ರಗ್‌ ಜಾಲ ಮಂಗಳೂರು ಅಥವಾ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ದೇಶದ ಹಲವೆಡೆ ದೊಡ್ಡ ಮಟ್ಟದಲ್ಲಿ ಇಂಥ ಜಾಲಗಳನ್ನು ಪೊಲೀಸರು ಭೇದಿಸಿರುವ ಸುದ್ದಿಗಳು ಪ್ರಕಟಗೊಂಡಿವೆ. ಈ ಮಾದಕ ದ್ರವ್ಯ ಅಕ್ರಮಗಳ ಕುರಿತು ನೂರಾರು ಪೊಲೀಸ್‌ ಪ್ರಕರಣಗಳು ದಾಖಲಾಗಿವೆ. ಗಾಂಜಾ ಸಾಗಾಟ, ಬ್ರೌನ್ ಶುಗರ್‌ನಂಥ ವಸ್ತುಗಳನ್ನೇ ಮಾರಾಟ ಮಾಡುತಿದ್ದವರು ಈ ಮಾತ್ರೆಯನ್ನೇ ನೆಚ್ಚಿಕೊಂಡಿರುವುದು ಬಯಲಾಗಿದೆ. ತಂತ್ರಜ್ಞಾನದ ನೆರವು ಪಡೆದು ದಂಧೆಯನ್ನು ಹೈಟೆಕ್ ಮಾಡುತಿದ್ದಾರೆ. ಎಲ್ಲೋ ತಯಾರಿಸಿ ಇನ್ನೇಲ್ಲೊ ಮಾರಾಟ ಮಾಡುತ್ತಾರೆ. ಆದರೆ, ಮಂಗಳೂರಿನ ಪಾಲಿಗೆ ಇದು ಸ್ಥಳೀಯವಾಗಿಯೇ ತಯಾರಾಗುತ್ತಿರುವುದು ಅಪಾಯಕಾರಿ ಎನಿಸಿದೆ. ಕಿಕ್ ಕೊಡುವಂಥ ಔಷಧಗಳನ್ನು ತಯಾರಿಸುವ ಖತರ್ ನಾಕ್ ಐಡಿಯಾದವರು ನಮ್ಮಲ್ಲೂ ಇದ್ದಾರೆ ಎಂಬುದೇ ಆಘಾತಕಾರಿ. ಶೈಕ್ಷಣಿಕ ವೀಸಾ ಪಡೆದು ಭಾರತಕ್ಕೆ ಬರುವ ಆಫ್ರಿಕಾದ ಮೂಲದ ದೇಶವರೊಂದಿಗೆ ಸೇರಿಕೊಳ್ಳುವ ನಮ್ಮವರೂ ಇದನ್ನು ಆಕರ್ಷಣೀಯ ದಂಧೆಯಾಗಿ ಮಾರ್ಪಡಿಸಿರುವುದು ಕಳವಳಕಾರಿ ಅಂಶ.

ಎಂಡಿಎಂಎ ತಯಾರಿ ಸುಲಭವೇ?

ಆರೋಪಿಗಳ ಬಂಧನ ಸಂದರ್ಭ ಹೊರಡಿಸಲಾದ ಪತ್ರಿಕಾ ಪ್ರಕಟಣೆಗಳನ್ನು ಆಧರಿಸಿ ಹೇಳುವುದಾದರೆ, ಎಂಡಿಎಂಎ ತಯಾರಿಗೆ ಸಣ್ಣ ಘಟಕ ಸಾಕು. ಅವರು ಡ್ರಗ್‌ ಪೆಡ್ಲರ್‌ಗಳಿಗೆ ವರದಾನ. ಬೆಂಗಳೂರಿನಲ್ಲಿ 10 ಕೋಟಿ ರೂ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡ ಸಂದರ್ಭ ನೈಜೀರಿಯಾ ಪ್ರಜೆಯೊಬ್ಬ ಸಣ್ಣ ಲ್ಯಾಬ್‌ನಲ್ಲಿ ಅದನ್ನು ತಯಾರಿಸಿರುವುದನ್ನು ಒಪ್ಪಿಕೊಂಡಿದ್ದ. ಹೀಗಾಗಿ ಎಂಡಿಎಂಎಗಾಗಿ ಪೆಡ್ಲರ್‌ಗಳು ಹೊರಗೆಲ್ಲೂ ಹೋಗುವುದಿಲ್ಲ. ಇಲ್ಲೇ ತಯಾರಿಸಿಬಿಡುತ್ತಾರೆ. ಹೀಗಾಗಿಯೇ ಈ ಜಾಲ ದೊಡ್ದದಾಗಿ ಬೆಳೆದಿದೆ. ಕೆಲ ತಿಂಗಳ ಹಿಂದೆ ಪೊಲೀಸರು ನೋಯ್ಡಾದಲ್ಲಿ ರೇಡ್ ಮಾಡಿದಾಗ ದೊರಕಿದ 350 ಕೋಟಿ ರೂ ಮೌಲ್ಯದ ಎಂಡಿಎಂಎ ಪತ್ತೆಯಾಗಿರುವುದೇ ಇದಕ್ಕೆ ಸಾಕ್ಷಿ.

ಎಂಡಿಎಂಎ ನುಂಗಿದ ವ್ಯಕ್ತಿಯ ನರಮಂಡಲ ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ಮೆದುಳನ್ನು ಹುಚ್ಚುಗಟ್ಟಿಸುತ್ತದೆ. ಹೀಗಾಗಿ ಇದರ ಮೋಹಕ್ಕೆ ಬಿದ್ಧವರು ಹೊರಜಗತ್ತಿಗೆ ಕಾಣಿಸದೇ ಅಕ್ರಮದಲ್ಲಿ ಇಳಿದುಕೊಂಡಿದ್ದಾ. ಆದರೆ ವಾಹಕರು ಎನಿಸಿಕೊಂಡ ಪೆಡ್ಲರ್‌ಗಳು ಸಿಕ್ಕಿಬೀಳುತ್ತಾರೆ, ಡ್ರಗ್ಸ್ ಪಡೆದವರೂ ಸಿಕ್ಕಿಬೀಳುತ್ತಾರೆ. ಆದರೆ ಇದರ ಬೇರುಗಳು ಇನ್ನೊಂದೆಡೆ ಚಿಗುರೊಡೆಯುತ್ತವೆ. ಮಂಗಳೂರಿನ ವಿಚಾರದಲ್ಲೂ ಇದು ಆಘಾತಕಾರಿಯಾಗಿದೆ.

ಬೆನ್ನುಬಿದ್ದಿರುವ ಪೊಲೀಸರು



ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ನೇತೃತ್ವದಲ್ಲಿ ಪೊಲೀಸರ ವಿಶೇಷ ತಂಡ ಇದರ ಬೆನ್ನು ಬಿದ್ದಿದೆ. ತೀರಾ ಇತ್ತೀಚಿನ ಪ್ರಕರಣದಲ್ಲಿ ಅಕ್ಟೋಬರ್ 28ರಂದು ಮಾದಕ ವಸ್ತು ಕಳ್ಳಸಾಗಣೆ ಆರೋಪದ ಮೇಲೆ ನೈಜೀರಿಯಾ ಪ್ರಜೆ ಸೇರಿ ಆರು ಮಂದಿಯನ್ನು ಬಂಧಿಸಲಾತಗಿತ್ತು. ಅವರಿಂದ ಕೋಕೇನ್, ಎಂಡಿಎಂಎ ವಶಪಡಿಸಿಕೊಂಡಿದ್ದರು. ನವೆಂಬರ್ 1ರಂದು ಗಾಂಜಾ ಸಾಗಾಟದ ಪ್ರಕರಣವೊಂದನ್ನು ಪತ್ತೆಹಚ್ಚಲಾಗಿತ್ತು. ಆರೋಪಿ ವಿದ್ಯಾರ್ಥಿಗಳಿಗೆ ಇದನ್ನು ವಿತರಿಸುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಯಿತು. ಈ ಕುರಿತು ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್, ಬಂಧಿತರು ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ. ಅಡುಗೆ ಮತ್ತು ಪೇಂಟಿಂಗ್ ಸೇರಿದಂತೆ ಖಾಸಗಿ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿದ್ದವರು ಎಂದಿದ್ದಾರೆ. ಡ್ರಗ್ ಪ್ರಕರಣದಲ್ಲಿ ಎಂಡಿಎಂಎ ಉತ್ಪಾದನೆ, ಎಲ್ಲಿಂದ ಬರುತ್ತಿದೆ ಇತ್ಯಾದಿ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಪೆಡ್ಲರ್‌ಗಳ ಮೂಲ ಯಾವುದು ಎಂಬ ನಿಟ್ಟಿನಲ್ಲಿ ತನಿಖೆ ಸಾಗುತ್ತಿದೆ. ಶೀಘ್ರ ತನಿಖೆ ಫಲ ನೀಡಬಹುದು ಎಂದಷ್ಟೇ ಹೇಳಿದ್ದಾರೆ.




ನೈಜೀರಿಯಾ ಪೆಡ್ಲರ್‌ಗಳು, ಹೋಟೆಲ್ ಕಾರ್ಮಿಕರಂಥ ವಾಹಕರು!

ಎಂಡಿಎಂಎ ಸಾಗಾಟದ ಪ್ರಮುಖ ಪೆಡ್ಲರ್‌ಗಳು ನೈಜೀರಿಯಾದವರೇ ಆಗಿರುತ್ತಾರೆ ಎಂಬುದು ಗಮನಾರ್ಹ. ನೋಯ್ಡಾದಲ್ಲಿ ದೊಡ್ಡ ಪ್ರಮಾಣದ ರೇಡ್ ಆಗಿದ್ದಾಗ ದೊರಕಿದ 350 ಕೋಟಿ ರೂ ಎಂಡಿಎಂಎ ಪತ್ತೆ ಪ್ರಕರಣದಲ್ಲಿ ನಾಲ್ವರು ನೈಜೀರಿಯನ್ನರು ಬಂಧಿತರಾಗಿದ್ದರು.

2021ರ ಫೆಬ್ರವರಿ 22ರಂದು ಬೆಂಗಳೂರಿನ ಆರ್.ಟಿ.ನಗರದಲ್ಲಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿತ್ತು. ಆಗ 20 ಗ್ರಾಮ್ ಕೊಕೇನ್, 12 ಗ್ರಾಮ್ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. 2021ರ ಸೆ.30ರಂದು ನೈಜೀರಿಯಾದಲ್ಲಿ 20 ಸಿನಿಮಾಗಳಲ್ಲಿ ನಟಿಸಿದ್ದ ನಟ ಮೆಲ್ವಿನ್ ಸಹಿತ 8 ಲಕ್ಷ ರೂಗಳ ಮೌಲ್ಯದ ಡ್ರಗ್ಸ್ ಬೆಂಗಳೂರಲ್ಲಿ ವಶಪಡಿಸಿಕೊಳ್ಳಲಾಗಿತ್ತು.

2022ರ ಜನವರಿ 19ರಂದು ಬೆಂಗಳೂರಿನ ಎನ್.ಸಿ.ಬಿ. ಘಟಕಾಧಿಕಾರಿಗಳು ನೈಜೀರಿಯಾ ಪ್ರಜೆಯೊಬ್ಬನನ್ನು ಬಂಧಿಸಿ, 84 ಗ್ರಾಮ್ ಕೊಕೇನ್, 40 ಗ್ರಾಮ್ ಎಂಡಿಎಂಎ ವಶಪಡಿಸಿಕೊಂಡಿದ್ದರು. 2022ರ ಜೂನ್ 12ರಂದು ಬೆಂಗಳೂರಿನ ಬಂಜಾರ ಬಡಾವಣೆಯಲ್ಲಿ 32 ಗ್ರಾಂ ಎಂಡಿಎಂಎ ಹೊಂದಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದರು. 2023ರ ನವೆಂಬರ್ 10ರಂದು ಬೆಂಗಳೂರಿನ ಮನೆಯೊಂದರಲ್ಲಿ ಡ್ರಗ್ಸ್ ತಯಾರಿ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಬೆಂಜಮಿನ್ ಬಂಧಿಸಿ 10 ಕೋಟಿ ರೂ ಮೌಲ್ಯದ ಡ್ರಗ್ ವಶಪಡಿಸಿಕೊಂಡಿದ್ದರು. 2024ರ ಜುಲೈ 27ರಂದು ಬೆಂಗಳೂರಲ್ಲಿ ನೈಜೀರಿಯಾ ಪ್ರಜೆ ಸಹಿತ 6 ಕೋಟಿ ರೂ ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದರೆ , 2024 ಸೆ.14ರಂದು ಧಾರವಾಡದ ಮಾಳಮಡ್ಡಿಯಲ್ಲಿ ಡ್ರಗ್ಸ್ ದಂಧೆ ನಿರತ ನೈಜೀರಿಯಾ ಪ್ರಜೆಯನ್ನು ಬಂಧಿಸಲಾಗಿತ್ತು. 2024ರ ಅ.7ರಂದು ಮತ್ತೊಂದು ಪ್ರಕರಣದಲ್ಲಿ ಎಂಡಿಎಂಎ ಆರು ಕೋಟಿ ಮೌಲ್ಯದ ಡ್ರಗ್ಸ್ ಹೊಂದಿದ್ದ ನೈಜೀರಿಯಾ ಪ್ರಜೆಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ ಪ್ರಕರಣ ರಾಜ್ಯಾದ್ಯಂತ ಗಮನ ಸೆಳೆದಿತ್ತು. ಆದರೆ ಇವರು ಕೇವಲ ವಾಹಕರು. ಇವರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಬಂದವರು, ಬ್ಯುಸಿನೆಸ್ ವೀಸಾದಡಿ ಬಂದವರಿರುತ್ತಾರೆ. ಎಲ್ಲೋ ಉದ್ಯೋಗಕ್ಕೆಂದು ಬಂದವರೂ ಇರುತ್ತಾರೆ. ಇವರು ಸಣ್ಣಪುಟ್ಟ ಕೆಲಸ ಮಾಡುವವರನ್ನು ಟಾರ್ಗೆಟ್ ಮಾಡಿ ತಮ್ಮ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುತ್ತಾರೆ.

ಮೊನ್ನೆ ಮಂಗಳೂರಿನಲ್ಲಿ ಬಂಧಿತರಾದವರಾದರೂ ಯಾರು? ಹೋಟೆಲ್ ಕಾರ್ಮಿಕರು, ಸಣ್ಣ ಪುಟ್ಟ ಕೆಲಸಗಳನ್ನು ಮಾಡುವವರು ಇಲ್ಲಿದ್ದರು. ಅಂದರೆ ಸಣ್ಣಪುಟ್ಟ ಕೆಲಸ ಮಾಡುವವರು ದೊಡ್ಡ ಡ್ರಗ್ಸ್ ವ್ಯಾಪಾರಿಗಳ ಮಾರಾಟ ವ್ಯವಸ್ಥೆಯ ಟಾರ್ಗೆಟ್ ಆಗಿದ್ದಾರೆ.

ಮೂಲಕ್ಕೆ ಹೋಗದಿದ್ದರೆ, ಹೊಸಬೇರುಗಳು ಚಿಗುರಬಹುದು

ಡ್ರಗ್ಸ್ ಸೇವನೆ ನಿಯಂತ್ರಣ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯಕ್ರಮ ಹಲವು ವರ್ಷಗಳಿಂದ ಆಗುತ್ತಿದೆ. ಮಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ನಿಯಂತ್ರಣ ಮಾತ್ರ ಆಗುತ್ತಿಲ್ಲ. ಪ್ರಜ್ಞಾ ಸಲಹಾ ಕೇಂದ್ರ ಸಹಿತ ಮಂಗಳೂರಿನ ಕೆಲವೆಡೆ ಚಟವನ್ನೇ ನಿರ್ಮೂಲನ ಮಾಡುವ ಕಾರ್ಯಗಳೂ ಆಗುತ್ತಿವೆ. ಜನಜಾಗೃತಿ ವೇದಿಕೆಯೂ ಮದ್ಯವರ್ಜನ ಶಿಬಿರದ ಜೊತೆಗೆ ಇಂಥ ಮಾದಕದ್ರವ್ಯ ಸೇವನೆಯಲ್ಲಿರುವವರನ್ನು ಮೊದಲಿನಂತಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಣಿಪಾಲ ಸೇರಿದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಶಿಕ್ಷಿತರೂ ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದಾರಲ್ಲವೇ ಎಂಬ ಆತಂಕ ಬಹುದೊಡ್ಡ ವಿಚಾರ.

ಇದಕ್ಕೆ ದೊಡ್ಡ ಪ್ರಮಾಣದ ಜನಾಂದೋಲನ ಅಗತ್ಯ. ಪೊಲೀಸ್ ಇಲಾಖೆ ವರ್ಷಂಪ್ರತಿ ಕಾಲೇಜು ಕ್ಯಾಂಪಸ್ ನಲ್ಲಿ ಈ ಕುರಿತು ಪಾಠ ಮಾಡುತ್ತದೆ. ಆದರೆ ಅದು ಸಾಕಾಗುವುದಿಲ್ಲ. ಮಸೀದಿ, ಮಂದಿರ ಮತ್ತು ಚರ್ಚ್ ಗಳು ಇದರ ನೇತೃತ್ವ ವಹಿಸಬೇಕು. ಹಾಗೆ ನೋಡಿದರೆ, ಮಂಗಳೂರು ಕ್ರೈಸ್ತ ಸಂಘಟನೆಗಳು ಬಿಷಪ್ ಆಣತಿಯಂತೆ ಕಳೆದ ವರ್ಷ ಮಾದಕ ದ್ರವ್ಯಮುಕ್ತ ಕಾರ್ಯಕ್ರಮಗಳನ್ನು ಮಾಡಿದ್ದರು. ಇದಕ್ಕೆ ಉತ್ತಮ ಸ್ಪಂದನೆ ದೊರಕಿತ್ತು ಎನ್ನುತ್ತಾರೆ ಈ ಕುರಿತು ಕೆಲಸ ಮಾಡುತ್ತಿರುವ ಆಲ್ವಿನ್.

ಸೋಶಿಯಲ್ ಮೀಡಿಯಾ ಮೂಲಕ ಮನೆಮನೆಗೆ ಡ್ರಗ್ಸ್ ಪೂರೈಸುವ ಜಾಲ, ಹೊರಗೆ ಯಾವ್ಯಾವುದೋ ರೂಪದಲ್ಲಿ ದೊರಕುವ ಮಾದಕ ದ್ರವ್ಯಗಳಿಂದ ಮಕ್ಕಳನ್ನು ಕಾಪಾಡುವ ಸವಾಲಿನ ಮಧ್ಯೆ, ಇದರ ಹಿಂದಿರುವ ಕರಾಳ ದಂಧೆಯನ್ನು ಬುಡಮೇಲು ಮಾಡುವುದು ಪೊಲೀಸರಿಗೆ ದೊಡ್ಡ ಸವಾಲು.

Read More
Next Story