SSLC exam | ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಈ ಬಾರಿ ಗ್ರೇಸ್‌ ಅಂಕ ಇಲ್ಲ
x

ಮಾರ್ಚ್‌  ೨೧ರಿಂದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಗಳು ಆರಂಭಗೊಳ್ಳಲಿವೆ. 

SSLC exam | ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಈ ಬಾರಿ ಗ್ರೇಸ್‌ ಅಂಕ ಇಲ್ಲ

ಈ ಬಾರಿ ಹಿಂದಿನ ನಿಯಮದಂತೆ ಶೇ.35 ಅಂಕಗಳನ್ನು ಕಡ್ಡಾಯಗೊಳಿಸಲಾಗಿದೆ. ಥಿಯರಿಯಲ್ಲಿ ಪ್ರಥಮ ಭಾಷೆಯಲ್ಲಿ 35 ಅಂಕ ಮತ್ತು ಇತರೆ ವಿಷಯಗಳಲ್ಲಿ ಕನಿಷ್ಠ 28 ಅಂಕಗಳನ್ನು ಗಳಿಸಬೇಕು. ಆಂತರಿಕ ಅಂಕಗಳನ್ನು ಸೇರಿಸಿ ಒಟ್ಟು ಶೇ.35 ಅಂಕ ಪಡೆದರೆ ಉತ್ತೀರ್ಣರಾಗಲು ಅರ್ಹರಾಗುತ್ತಾರೆ.


2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1 ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಈ ಕುರಿತು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಪ್ರಸಕ್ತ ಸಾಲಿನಲ್ಲಿ 15,881 ಶಾಲೆಗಳ 8,42,817 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 38,091 ಪುನರಾವರ್ತಿತ ಮತ್ತು 15,539 ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು 8,96,447 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಈ ಪೈಕಿ 3,35,468 ಬಾಲಕರು, 3,78,389 ಬಾಲಕಿಯರು ಮತ್ತು 5 ತೃತೀಯ ಲಿಂಗಿಯರು ಇದ್ದಾರೆ. ರಾಜ್ಯದ 2,818 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಭದ್ರತೆಗೆ 2,818 ಸ್ಥಳೀಯ ದಳ, ಜಿಲ್ಲಾ ಮಟ್ಟದಲ್ಲಿ 410 ಮತ್ತು ತಾಲ್ಲೂಕು ಹಂತದಲ್ಲಿ 1,662 ವಿಚಕ್ಷಣ ದಳಗಳನ್ನು ನಿಯೋಜಿಸಲಾಗಿದೆ.

ಪ್ರಶ್ನೆಪತ್ರಿಕೆ ವಿತರಣೆಗೆ 1,117 ಮಾರ್ಗಗಳನ್ನು ನಿಗದಿಪಡಿಸಲಾಗಿದೆ. ಮೌಲ್ಯನಿರ್ಣಯಕ್ಕಾಗಿ 65 ಸಾವಿರ ಮೌಲ್ಯಮಾಪಕರು ಈಗಾಗಲೇ ನೋಂದಣಿಯಾಗಿದ್ದಾರೆ ಎಂದು ಮಂಡಳಿ ಅಧ್ಯಕ್ಷ ಬಸವ ರಾಜೇಂದ್ರ ತಿಳಿಸಿದ್ದಾರೆ.

ಕಳೆದ ಸಾಲಿನಲ್ಲಿ 8,69,968 ವಿದ್ಯಾರ್ಥಿಗಳು ನೋಂದಣಿಯಾಗಿದ್ದರೆ, ಈ ಬಾರಿ 26,479 ಮಂದಿ ಹೆಚ್ಚುವರಿಯಾಗಿ ಒಟ್ಟು 8,96,447 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ.

ಬಿಗಿ ಭದ್ರತೆಯಲ್ಲಿ ಪರೀಕ್ಷೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ವೆಬ್ ಕಾಸ್ಟಿಂಗ್ ವ್ಯವಸ್ಥೆ ಮೂಲಕ ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಲಿದ್ದಾರೆ. ಪರೀಕ್ಷಾ ಸಮಯದಲ್ಲಿ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ವಲಯವನ್ನಾಗಿ ಪರಿಗಣಿಸಲಾಗಿದ್ದು, ಝೆರಾಕ್ಸ್‌, ಸೈಬರ್ ಮತ್ತು ಕಂಪ್ಯೂಟರ್ ಕೇಂದ್ರಗಳನ್ನು ಮುಚ್ಚಲಾಗುತ್ತದೆ.

ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಅಕ್ರಮಗಳಿಗೆ ಉತ್ತೇಜನ ನೀಡುವವರ ವಿರುದ್ಧ ಶಿಕ್ಷಣ ಕಾಯ್ದೆಯನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಉತ್ತೀರ್ಣಕ್ಕೆ ಕನಿಷ್ಠ ಶೇ.35 ಅಂಕ ಕಡ್ಡಾಯ

ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಲು ಕನಿಷ್ಠ ಶೇ.35 ಅಂಕಗಳನ್ನು ಪಡೆಯಬೇಕು. ಕಳೆದ ವರ್ಷ ವೆಬ್ ಕಾಸ್ಟಿಂಗ್ ಪರಿಣಾಮ ಫಲಿತಾಂಶ ಕುಸಿತವಾದ ಕಾರಣ, ಕನಿಷ್ಠ ಉತ್ತೀರ್ಣ ಅಂಕ ಶೇ.35ರಿಂದ ಶೇ.25ಕ್ಕೆ ಇಳಿಸಲಾಗಿತ್ತು. ಆದರೆ ಈ ಬಾರಿ ಹಿಂದಿನ ನಿಯಮದಂತೆ ಶೇ.35 ಅಂಕಗಳನ್ನು ಕಡ್ಡಾಯಗೊಳಿಸಲಾಗಿದೆ. ಥಿಯರಿಯಲ್ಲಿ ಪ್ರಥಮ ಭಾಷೆಯಲ್ಲಿ 35 ಅಂಕ ಮತ್ತು ಇತರೆ ವಿಷಯಗಳಲ್ಲಿ ಕನಿಷ್ಠ 28 ಅಂಕಗಳನ್ನು ಗಳಿಸಬೇಕು. ಆಂತರಿಕ ಅಂಕಗಳನ್ನು ಸೇರಿಸಿ ಒಟ್ಟು ಶೇ.35 ಅಂಕ ಪಡೆದರೆ ಉತ್ತೀರ್ಣರಾಗಲು ಅರ್ಹರಾಗುತ್ತಾರೆ.

Read More
Next Story