ಸಿಗಂದೂರು ಇನ್ನೂ ಹತ್ತಿರ; ಕೆಲವೇ ತಿಂಗಳಲ್ಲಿ ಕಳಸವಳ್ಳಿ-ಅಂಬಾರಗೊಡ್ಲು ಸೇತುವೆ ಪೂರ್ಣ
x
ಸಿಗಂಧೂರು ಸೇತುವೆ.

ಸಿಗಂದೂರು ಇನ್ನೂ ಹತ್ತಿರ; ಕೆಲವೇ ತಿಂಗಳಲ್ಲಿ ಕಳಸವಳ್ಳಿ-ಅಂಬಾರಗೊಡ್ಲು ಸೇತುವೆ ಪೂರ್ಣ

ನದಿಯ ಹಿನ್ನೀರಿನ ಆಳದಿಂದ ಎರಡು ಕಿಲೋ ಮೀಟರ್‌ಗೂ ಉದ್ದ ಸುದೀರ್ಘವಾಗಿರುವ ಈ ಸೇತುವೆ ನಿರ್ಮಾಣ ಸವಾಲಾಗಿತ್ತು. ಆದರೆ ವಿನೂತನ ತಂತ್ರಜ್ಞಾನದಲ್ಲಿ ಸೇತು ನಿರ್ಮಿಸಲಾಗಿದೆ ಎಂಬುದು ಮತ್ತೊಂದು ವಿಶೇಷ.


ಶ್ರೀ ಕ್ಷೇತ್ರ ಸಿಗಂದೂರಿಗೆ ಇನ್ನು ಮೂರ್ನಾಲ್ಕು ತಿಂಗಳಲ್ಲಿ ಪ್ರಯಾಣ ಸುಲಭವಾಗಲಿದೆ. ಬಹುನಿರೀಕ್ಷೆಯ ಕಳಸವಳ್ಳಿ-ಅಂಬಾರಗೊಡ್ಲು ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಸಿಗಂದೂರು ಸೇತುವೆ ಎಂದೇ ಜನರಿಂದ ಕರೆಸಿಕೊಂಡಿರುವ ಈ ಸೇತುವೆ ಆರು ದಶಕಗಳ ಕನಸು. ಶರಾವತಿ ಹಿನ್ನೀರಿನಲ್ಲಿ ಎದ್ದು ನಿಂತಿರುವ 2.24 ಕಿಲೋಮೀಟರ್‌ ಉದ್ದದ ಈ ಸೇತುವೆ ದೇಶದಲ್ಲಿಯೇ ಎರಡನೇ ಅತೀ ಉದ್ದನೆಯ ಸೇತುವೆ ಎಂದರೆ ನಿಮಗೆ ಅಚ್ಚರಿಯಾಗುತ್ತದೆ. ನದಿಯ ಹಿನ್ನೀರಿನ ಆಳದಿಂದ ಎರಡು ಕಿಲೋ ಮೀಟರ್‌ಗೂ ಉದ್ದ ಸುದೀರ್ಘವಾಗಿರುವ ಈ ಸೇತುವೆ ನಿರ್ಮಾಣ ಸವಾಲಾಗಿತ್ತು. ಆದರೆ ವಿನೂತನ ತಂತ್ರಜ್ಞಾನದಲ್ಲಿ ಸೇತು ನಿರ್ಮಿಸಲಾಗಿದೆ ಎಂಬುದು ಮತ್ತೊಂದು ವಿಶೇಷ.

ವಿಶೇಷ ತಂತ್ರಜ್ಞಾನ

ಸರಳವಾಗಿ ಕೇಬಲ್‌ ಸೇತುವೆ ಎಂದು ಇದನ್ನು ಹೇಳಲಾಗುತ್ತಿದೆಯಾದರೂ, ಇದರ ತಂತ್ರಜ್ಞಾನ ಮಾತ್ರ ಅದ್ಭುತವಾಗಿದೆ. Extra Dosed cable stay cum Balanced canti lever ತಂತ್ರಜ್ಞಾನದ ಈ ಸೇತುವೆ ಶೇ 70ರಷ್ಟು ಭಾರವನ್ನು ಕೇಬಲ್‌ಗಳೇ ಹೊರಲಿದ್ದು, ಕೇವಲ ಶೇ.30 ರಷ್ಟು ಭಾರವನ್ನು ಪಿಲ್ಲರ್‌ಗಳು ಹೊರಲಿವೆ. ಮಾಮೂಲಿ ಸೇತುವೆ ನಿರ್ಮಾಣ ಮಾಡಲು 2.24 ಕಿಲೋಮೀಟರ್‌ಗೆ ಕನಿಷ್ಟ 20 ಪಿಲ್ಲರ್‌ಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ. ಆದರೆ ಸಿಗಂದೂರು ಸೇತುವೆಯ ಹಿನ್ನೀರಿನಲ್ಲಿ ಕೇವಲ 12 ಪಿಲ್ಲರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಸೇತುವೆಯ 240 ಮೀಟರ್‌ ಸೇತುವೆ ಭಾರ ಕೇಬಲ್‌ ಮೇಲೆಯೇ ನಿಂತಿರುತ್ತದೆ.

ಇಚ್ಚಾಶಕ್ತಿಯಿಂದಾದ ಬೃಹತ್‌ ಕಾಮಗಾರಿ

ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಕಳಸವಳ್ಳಿಯಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂಬ ಚರ್ಚೆ ಬಹುಕಾಲದ್ದು, ಸಾಕಷ್ಟು ಬಾರಿ ಸರ್ವೆಗಳೂ ನಡೆದಿದ್ದವು. ಆಳ ನೀರಿನಲ್ಲಿ ಪಿಲ್ಲರ್‌ ಅಳವಡಿಕೆ ಕಷ್ಟ ಮತ್ತು ಬೃಹತ್‌ ಮೊತ್ತ ಬೇಕೆಂಬ ಕಾರಣಕ್ಕೆ ಹಿಂದೇಟು ಹಾಕಲಾಗಿತ್ತು. 2019ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರಯತ್ನದಿಂದಾಗಿ ಇದು ಸಾಧ್ಯವಾಯಿತೆಂದೇ ಹೇಳಬಹುದು. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಮನವೊಲಿಸಿ ಅವರಿಂದಲೇ ಗುದ್ದಲಿ ಪೂಜೆ ಮಾಡುವ ಮೂಲಕ ಯಡಿಯೂರಪ್ಪ ಅವರು ಯೋಜನೆಗೆ ಸುಮುಹೂರ್ತವಿಟ್ಟಿದ್ದರು. ಗ್ರಾಮ ಪಂಚಾಯಿತಿ ರಸ್ತೆಯನ್ನು ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ್ದರಿಂದ ಕೇಂದ್ರದ ಅನುದಾನ ತರುವುದು ಸರಾಗವಾಯಿತು. ಮಲೆನಾಡು ಮತ್ತು ಕರಾವಳಿಯನ್ನು ಬೆಸೆಯುವ ಈ ಸೇತುವೆ ಸಾಗರ-ಸಿಗಂದೂರು, ಕೊಲ್ಲೂರು- ಕುಂದಾಪುರ ಮೂಲಕ ಉಡುಪಿಗೆ ಸಂಪರ್ಕ ಕಲ್ಪಿಸುತ್ತದೆ.

450 ಕೋಟಿ ರೂ ಬಂಡವಾಳ

"ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಸೇತುವೆ 450 ಕೋಟಿ ರೂ. ಅನುದಾನದಲ್ಲಿ ಮೂರುವರೆ ವರ್ಷದಲ್ಲಿ ಸೇತುವೆ ಪೂರ್ಣಗೊಳ್ಳುತ್ತಿದೆ. ಈ ಸೇತುವೆ ನಿರ್ಮಾಣದಿಂದ ಶರಾವತಿ ಹಿನ್ನೀರಿನ ಜನರ ಕನಸು ನನಸಾಗಲಿದೆ. ನಾಡಿಗೆ ಬೆಳಕು ಕೊಡಲು ಕಟ್ಟಿದ ಲಿಂಗನಮಕ್ಕಿ ಅಣೆಕಟ್ಟೆಯಿಂದ ದ್ವೀಪ ಪ್ರದೇಶವಾಗಿ ಇಲ್ಲಿನ ಜನ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಅವರ ಕಷ್ಟ ನೀಗಿಸಲು ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಂಕಲ್ಪ ಮಾಡಿದ್ದರಿಂದ ಈ ಕೆಲಸವಾಗಿದೆ,ʼʼ ಎನ್ನುತ್ತಾರೆ ಸಂಸದ ಬಿ.ವೈ.ರಾಘವೇಂದ್ರ. ""ಈ ಭಾಗದ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಅಂದಿನ ಸಚಿವ ಹರತಾಳು ಹಾಲಪ್ಪ ಎಲ್ಲರ ಶ್ರಮವೂ ಈ ಸೇತುವೆ ನಿರ್ಮಾಣದಲ್ಲಿದೆ. ಕೇಂದ್ರ ಸರ್ಕಾರ ಮತ್ತು ಸಚಿವರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಈ ಕೆಲಸ ಮಾಡಿದ ತೃಪ್ತಿ ತಮಗಿದೆ,ʼʼ ಎಂಬದು ರಾಘವೇಂದ್ರ ಅವರ ಅಭಿಪ್ರಾಯ.

ಸಿಗಂದೂರು ಪ್ರವಾಸ ಸಲೀಸು

ಸೇತುವೆ ನಿರ್ಮಾಣದಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಿಗಂದೂರು ಕ್ಷೇತ್ರಕ್ಕೆ ಬರುವ ಪ್ರವಾಸಿಗರ ಪ್ರಯಾಣ ಸಲೀಸಾಗಲಿದೆ. ಲಾಂಚ್‌ ಮೂಲಕ ಸಾಗುವ ಪ್ರಯಾಣ ಒಂದು ರೋಮಾಂಚನಕಾರಿ ಅನುಭವ ನೀಡುತ್ತಿ ತ್ತಾದರೂ, ಪ್ರವಾಸಿಗರು ಹೆಚ್ಚಿದ್ದ ಸಂದರ್ಭ ಪ್ರಯಾಣ ಪ್ರಯಾಸವೇ ಆಗುತಿತ್ತು. ಸಿಗಂದೂರು ಕ್ಷೇತ್ರಕ್ಕೆ ಬರುವ ಭಕ್ತರಿಂದಾಗಿ ಸ್ಥಳೀಯ ನಿವಾಸಿಗಳಿಗೂ ತೊಂದರೆಯಾಗುತ್ತಿತ್ತು. ಸೇತುವೆ ನಿರ್ಮಾಣದಿಂದ ಎಲ್ಲವೂ ಸರಾಗವಾಗಲಿದೆ. ಪ್ರವಾಸಿಗರು ತಮ್ಮ ವಾಹನಗಳನ್ನು ನೇರವಾಗಿ ದೇವಸ್ಥಾನದ ಬಳಿಗೆ ಕೊಂಡೊಯ್ಯಬಹುದು. ಕರಾವಳಿ ಮತ್ತು ಮಲೆನಾಡಿನ ಸಂಪರ್ಕವೂ ಹತ್ತಿರವಾಗುವುದರಿಂದ ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ನಿರೀಕ್ಷಿಸಬಹುದು.

"ಸಿಗಂದೂರು ದೇವಿಯ ಕೃಪೆಯಿಂದ ಬಹುವರ್ಷಗಳ ಕನಸು ನನಸಾಗಲಿದೆ. ಸೇತುವೆ ಸಂಬಂಧಿತ ಹೋರಾಟಗಳಲ್ಲಿ ದೇವಸ್ಥಾನವೂ ಜನರೊಂದಿಗೆ ನಿಂತಿತ್ತು. ಈಗ ಸೇತುವೆ ಪೂರ್ಣಗೊಳ್ಳುತ್ತಿರುವುದು ಸಂತಸದ ಸಂಗತಿ,ʼʼ ಎನ್ನುತ್ತಾರೆ ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಎಚ್.ಆರ್‌.ರವಿಕುಮಾರ್‌.

"ಶರಾವತಿ ಮುಳುಗಡೆ ಸಂತ್ರಸ್ತನಾಗಿ ಈ ಸೇತುವೆಗಾಗಿನ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಶಾಸಕ ಮತ್ತು ಸಚಿವನಾಗಿ ಸೇತುವೆಗಾಗಿ ಕೆಲಸ ಮಾಡಿದ್ದೇನೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಇಚ್ಚಾಶಕ್ತಿ ಮತ್ತು ಸಂಸದ ರಾಘವೇಂದ್ರ ಅವರ ಛಲದಿಂದಾಗಿ ಸೇತುವೆ ನಿರ್ಮಾಣವಾಗಿದೆ.ಇದೊಂದು ಐತಿಹಾಸಿಕ ಯೋಜನೆಯಾಗಿದೆ,ʼʼ ಎನ್ನುತ್ತಾರೆ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ.

ʼʼಸೇತುವೆ ಮುಕ್ತಾಯದ ಹಂತಕ್ಕೆ ಬಂದಿರುವುದು ಸಂತೋಷದ ಸಂಗತಿ. ಸೇತುವೆ ನಿರ್ಮಾಣದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಈ ಭಾಗದ ಜನರು ಮತ್ತು ನಮ್ಮ ಹೋರಾಟದ ಪಾಲೂ ಇದೆ. ನಮ್ಮ ಅವಧಿಯಲ್ಲಿಯೇ ಬಹುನಿರೀಕ್ಷಿತ ಸೇತುವೆ ಲೋಕಾರ್ಪಣೆಯಾಗಲಿದೆ. ಯಾರು ಮಾಡಿದ್ದಾರೆ ಎನ್ನುವುದಕ್ಕಿಂತ ದಶಕಗಳ ಬವಣೆ ನೀಗುತ್ತಿದೆ ಎಂಬುದು ಖುಷಿಯ ವಿಚಾರ,ʼʼ ಎನ್ನುತ್ತಾರೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ.

ತಾಂತ್ರಿಕ ರೂವಾರಿ ಪೀರ್‌ ಪಾಷಾ

ಸಿಗಂದೂರು ಸೇತುವೆ ನಿರ್ಮಾಣದಲ್ಲಿ ಉಸ್ತುವಾರಿ ಎಂಜನಿಯರ್‌ ಆಗಿ ಕಾರ್ಯ ನಿರ್ವಹಿಸಿದವರು. ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಪೀರ್‌ ಪಾಷಾ ಅವರು. ಇಡೀ ಯೋಜನೆಯ ತಾಂತ್ರಿಕ ರೂವಾರಿಯಾದ ಪೀರ್‌ ಪಾಷಾ, ಸಂಸದ ಬಿ.ವೈ.ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಯೋಜನೆಯ ನೀಲ ನಕ್ಷೆ ರೂಪಿಸಿದ್ದಾರೆ. ಕೇಂದ್ರದಿಂದ ಎಲ್ಲಾ ಬಗೆಯ ತಾಂತ್ರಿಕ ಮಂಜೂರಾತಿಯಲ್ಲಿ ಇವರ ಪಾತ್ರವಿದೆ. ನಿವೃತ್ತಿಯ ನಂತರವೂ ಸೇತುವೆಯ ಉಸ್ತುವಾರಿಯನ್ನು ನೋಡಿಕೊಂಡು ಭೇಷ್‌ ಎನಿಸಿಕೊಂಡಿದ್ದಾರೆ. "ಸೇತುವೆ ಕಾಮಗಾರಿ ಶೇ.96ರಷ್ಟು ಮುಗಿದಿದೆ. ಇನ್ನೂ ಶೇ.4 ಭಾಗ ಮಾತ್ರ ಬಾಕಿಯಿದೆ. ಅದೂ ಶೀಘ್ರ ಮುಗಿಯಲಿದೆ. ಇಂತಹದೊಂದು ಜನೋಪಯೋಗಿ ಯೋಜನೆಗೆ ಕೆಲಸ ಮಾಡಿದ ಸಾರ್ಥಕತೆ ನನಗಿದೆ ಎನ್ನುತ್ತಾರೆ,'' ಎಂಜನಿಯರ್‌ ಪೀರ್‌ ಪಾಷಾ.

Read More
Next Story