![Namma Metro Fare Hike| ಮೆಟ್ರೋ ದರ ಕಡಿತಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ Namma Metro Fare Hike| ಮೆಟ್ರೋ ದರ ಕಡಿತಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ](https://karnataka.thefederal.com/h-upload/2025/02/11/512040-metro78-1.webp)
Namma Metro Fare Hike| ಮೆಟ್ರೋ ದರ ಕಡಿತಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ
Metro Fare Hike| ಬಿಎಂಆರ್‌ಸಿಎಲ್ ಟಿಕೆಟ್ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಮೆಟ್ರೋನಲ್ಲಿ ಪ್ರಯಾಣಿಸುವವರ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿದೆ.
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಾಗಿದ್ದು, ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮೆಟ್ರೋ ಪ್ರಯಾಣ ದರ ಏರಿಕೆಯಿಂದಾಗಿ ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವಂತೆ ಮತ್ತು ಅಸಹಜವಾಗಿ ದರ ಏರಿಕೆಯಾಗಿರುವಲ್ಲಿ ದರಗಳನ್ನು ಕಡಿಮೆ ಮಾಡುವಂತೆ ಗುರುವಾರ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ.
ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ ಎಂದು ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಬಿಎಂಆರ್‌ಸಿಎಲ್ ಪ್ರಯಾಣ ದರ ಪರಿಷ್ಕರಿಸಿದೆ. ಆದರೆ, ಏಕಾಏಕಿ ಶೇ 50 ರಷ್ಟು ಪ್ರಯಾಣ ದರ ಏರಿಕೆ ಮಾಡಿರುವುದು ಪ್ರಯಾಣಿಕರನ್ನು ಏದುಸಿರು ಬಿಡುವಂತೆ ಮಾಡಿದೆ. ಪ್ರಸ್ತುತ, ಮೆಟ್ರೊ ದರಗಳು ಕನಿಷ್ಠ 10ರೂ. ನಿಂದ ಹಿಡಿದು ಗರಿಷ್ಠ 90 ರೂ. ರವರೆಗೆ ಇದೆ. ಕೆಲ ಮಾರ್ಗಗಳಲ್ಲಿ ಗರಿಷ್ಠ ಪ್ರಯಾಣದ ದರ ಶೇ 51ರಷ್ಟು ಏರಿಕೆಯಾಗಿದೆ. ಫೆಬ್ರವರಿ 9 ರಿಂದ ಹೊಸ ಪರಿಷ್ಕರಣೆ ದರಗಳು ಜಾರಿಗೆ ಬಂದಿವೆ.
ಬಿಎಂಆರ್‌ಸಿಎಲ್ ಟಿಕೆಟ್ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಮೆಟ್ರೋನಲ್ಲಿ ಪ್ರಯಾಣಿಸುವವರ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿದೆ. ಪ್ರತಿದಿನ ಮೆಟ್ರೋದಲ್ಲಿ 8 ರಿಂದ 9 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದರೆ ಇದೀಗ ದರ ಏರಿಕೆಯಾದ ಮೇಲೆ ಪ್ರಯಾಣಿಕರ ಸಂಖ್ಯೆ 35% ರಿಂದ 40% ರಷ್ಟು ಕಡಿಮೆಯಾಗಿದೆ. ಸೋಮವಾರದಿಂದ ಮೆಟ್ರೋ ಪ್ರಯಾಣಿಕರು ಮೆಟ್ರೋ ಬಿಟ್ಟು ತಮ್ಮ ಸ್ವಂತ ಕಾರು, ಬೈಕ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ನಾಲ್ಕು ದಿನದಿಂದ ಬೆಂಗಳೂರು ನಗರದಲ್ಲಿ ವಿಪರೀತವಾಗಿ ಟ್ರಾಫಿಕ್ ಸಮಸ್ಯೆ ಸಹ ಹೆಚ್ಚಾಗಿದೆ.