![RBI TO CUT REPO RATE| 5 ವರ್ಷಗಳಲ್ಲೇ ಮೊದಲ ಬಾರಿಗೆ ರೆಪೋ ದರ ಶೇ.0.25 ಇಳಿಕೆ: ಆರ್‌ಬಿಐ ಘೋಷಣೆ RBI TO CUT REPO RATE| 5 ವರ್ಷಗಳಲ್ಲೇ ಮೊದಲ ಬಾರಿಗೆ ರೆಪೋ ದರ ಶೇ.0.25 ಇಳಿಕೆ: ಆರ್‌ಬಿಐ ಘೋಷಣೆ](https://karnataka.thefederal.com/h-upload/2025/02/07/511108-rbi.webp)
RBI TO CUT REPO RATE| 5 ವರ್ಷಗಳಲ್ಲೇ ಮೊದಲ ಬಾರಿಗೆ ರೆಪೋ ದರ ಶೇ.0.25 ಇಳಿಕೆ: ಆರ್‌ಬಿಐ ಘೋಷಣೆ
RBI TO CUT REPO RATE| ರೆಪೋ ದರವನ್ನು 25 ಮೂಲ ಅಂಶಗಳಷ್ಟು ಕಡಿತಗೊಳಿಸಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ
ದೇಶದ ಆರ್ಥಿಕತೆಗೆ ಬಲ ನೀಡುವಂತೆ ಸರಿಸುಮಾರು 5 ವರ್ಷಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ರೆಪೋ ದರವನ್ನು ಇಳಿಕೆ ಮಾಡಿದೆ. ಕಳೆದ 3 ದಿನಗಳ ಕಾಲ ನಡೆದ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್(ಶೇ.0.25) ಕಡಿತಗೊಳಿಸಿದೆ. ಹೀಗಾಗಿ, ಶೇ.6.50ರಷ್ಟಿದ್ದ ರೆಪೋ ದರ ಈಗ ಶೇ.6.25ಕ್ಕೆ ಇಳಿದಿದೆ. ಆರ್‌ಬಿಐನ ಈ ಕ್ರಮದಿಂದಾಗಿ, ಗೃಹ, ವಾಹನ ಸೇರಿದಂತೆ ವಿವಿಧ ರೀತಿಯ ಸಾಲಗಳ ಕಂತು ಇಳಿಕೆಯಾಗಲಿದ್ದು, ಸಾಲ ಪಡೆದಿರುವವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಶುಕ್ರವಾರ ಬೆಳಗ್ಗೆ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಿಸರ್ವ್ ಬ್ಯಾಂಕ್ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ರೆಪೋ ದರ ಪರಿಷ್ಕರಣೆ ಕುರಿತು ಮಾಹಿತಿ ನೀಡಿದರು. ಜಾಗತಿಕ ಆರ್ಥಿಕತೆಯು ಐತಿಹಾಸಿಕ ಸರಾಸರಿಗಿಂತಲೂ ಕೆಳಮಟ್ಟದಲ್ಲಿ ಬೆಳೆಯುತ್ತಿದೆ. ಹೀಗಿದ್ದರೂ ಭಾರತದ ಆರ್ಥಿಕತೆ ಬಲಿಷ್ಠವಾಗಿದೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸಾಲದ ಮೇಲಿನ ಬಡ್ಡಿ ದರ ಪರಿಷ್ಕರಣೆ ಮಾಡಲು ನಿರ್ಧರಿಸಿದ್ದೇವೆ. ರೆಪೋ ದರವನ್ನು 25 ಮೂಲ ಅಂಶಗಳಷ್ಟು ಕಡಿತಗೊಳಿಸಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ರೆಪೋ ದರ ಇಳಿಕೆಯಿಂದಾಗಿ ಗೃಹ ಸಾಲ, ವಾಹನ ಸಾಲ ಸೇರಿ ಹಲವು ಸಾಲಗಳ ಮೇಲಿನ ಬಡ್ಡಿದರವನ್ನು ಬ್ಯಾಂಕುಗಳು ಕಡಿಮೆ ಮಾಡಲಿವೆ.
ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ(ಎಂಪಿಸಿ) ಸಮಿತಿಯು ಮೂವರು ಆರ್‌ಬಿಐ ಸದಸ್ಯರು ಮತ್ತು ಮೂವರು ಬಾಹ್ಯ ಸದಸ್ಯರನ್ನು ಹೊಂದಿದೆ. ಈ ಸಮಿತಿಯು 2020ರ ಮೇ ತಿಂಗಳಲ್ಲಿ ರೆಪೋ ದರವನ್ನು ಕಡಿತಗೊಳಿಸಿತ್ತು. ಅದಾದ ಬಳಿಕ ನಡೆದ 11 ಸಭೆಗಳಲ್ಲೂ ರೆಪೋ ದರದಲ್ಲಿ ಬದಲಾವಣೆ ತರದೇ, ಯಥಾಸ್ಥಿತಿ ಕಾಯ್ದುಕೊಂಡಿತ್ತು. ಈಗ ಸುಮಾರು 5 ವರ್ಷಗಳ ನಂತರ ರೆಪೋ ದರ ಇಳಿದಂತಾಗಿದೆ. ಡಿಸೆಂಬರ್ ನಲ್ಲಿ ನಡೆದ ಸಮಿತಿಯ ಸಭೆಯಲ್ಲಿ ರೆಪೋ ದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರಕ್ಕೆ 5-1ರ ಮತ ಬಿದ್ದಿತ್ತು.
ಇನ್ನೊಂದೆಡೆ, ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಕಳೆದ ಒಂದು ವರ್ಷದಲ್ಲೇ ಮೂರು ಬಾರಿ ರೆಪೋದರವನ್ನು ಇಳಿಕೆ ಮಾಡಿದೆ. ಇದರಿಂದಾಗಿ ಭಾರತದಲ್ಲೂ ಕಳೆದ ವರ್ಷ ದರ ಇಳಿಕೆಯ ನಿರೀಕ್ಷೆ ಇತ್ತು. ಆದರೆ, ಜಿಡಿಪಿ ಬೆಳವಣಿಗೆ ಕುಂಠಿತ, ಹಣದುಬ್ಬರ ಹೆಚ್ಚಳದ ಹಿನ್ನೆಲೆಯಲ್ಲಿ ಆರ್‌ಬಿಐ ಕಾದು ನೋಡುವ ತಂತ್ರ ಅನುಸರಿಸಿತ್ತು. ಈಗ ರೆಪೊ ದರವನ್ನು ಕಡಿತಗೊಳಿಸಿ ಜನರಿಗೆ ಸಿಹಿ ಸುದ್ದಿ ನೀಡಿದೆ.
ಏನಿದು ರೆಪೊ ದರ?
ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ನಿಗದಿಪಡಿಸುವ ಬಡ್ಡಿ ದರವನ್ನು ರೆಪೋ ದರ ಎನ್ನುತ್ತೇವೆ. ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದರೆ, ಬ್ಯಾಂಕುಗಳು ಜನರಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನೂ ಹೆಚ್ಚಳ ಮಾಡುತ್ತವೆ. ಹಾಗೆಯೇ, ರೆಪೋ ದರ ಇಳಿಕೆಯಾದರೆ ಜನರಿಗೆ ವಿಧಿಸುವ ಬಡ್ಡಿದರವನ್ನು ಬ್ಯಾಂಕುಗಳು ತಗ್ಗಿಸುತ್ತವೆ. ಇದರಿಂದ ಜನರ ಗೃಹಸಾಲ, ವಾಹನ ಸಾಲದ ಮೇಲಿನ ಇಎಂಐ ಹೊರೆಯ ಭಾರ ಕಡಿಮೆಯಾಗುತ್ತದೆ.