Child dies after house wall collapses, family escapes with a narrow escape
x

ಸಾಂದರ್ಭಿಕ ಚಿತ್ರ.

Rain Disaster | ಮಳೆ ದುರಂತ: ಮನೆ ಗೋಡೆ ಕುಸಿದು ಮೂರು ವರ್ಷದ ಬಾಲಕಿ ಸಾವು

Rain Disaster |ರಾತ್ರಿಯೆಲ್ಲ ಜಿಟಿಜಿಟಿ ಮಳೆ ಸುರಿಯುತ್ತಲೇ ಇದ್ದ ಪರಿಣಾಮ ಮನೆಯ ಮಣ್ಣಿನಗೋಡೆ ಕುಸಿದು ಬಿದ್ದಿದ್ದು, ಪೋಷಕರ ಜತೆ ಮಲಗಿದ್ದ ಮಗು ಸ್ಥಳದಲ್ಲೇ ಮೃತಪಟ್ಟಿದೆ.


ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆಯ ಮಣ್ಣಿನ ಗೋಡೆ ಕುಸಿದು ಮೂರು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಕೃತಿಕಾ ನಾಗೇಶ್ ಪೂಜಾರಿ ಮೃತ ದುರ್ದೈವಿ. ಆಕೆ, ಇಬ್ಬರು ಹೆಣ್ಣು ಮಕ್ಕಳಲ್ಲಿ ಎರಡನೆಯವಳು.

ದುರಂತ ಸಂಭವಿಸಿದಾಗ ಕೃತಿಕಾ ತನ್ನ ತಂದೆ-ತಾಯಿ ಮತ್ತು ಐದು ವರ್ಷದ ಅಕ್ಕನೊಂದಿಗೆ ಗೋಡೆ ಪಕ್ಕದಲ್ಲೇ ಮಲಗಿದ್ದಳು. ರಾತ್ರಿಯಿಡೀ ಸುರಿದ ಜಿಟಿಜಿಟಿ ಮಳೆಯಿಂದಾಗಿ ಮನೆಯ ಮಣ್ಣಿನ ಗೋಡೆ ಏಕಾಏಕಿ ಕುಸಿದು ಕೃತಿಕಾ ಮೇಲೆ ಕಲ್ಲುಮಣ್ಣು ಬಿದ್ದಿದೆ. ಪರಿಣಾಮ ಆಕೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ. ಎಚ್ಚರಗೊಂಡ ಪೋಷಕರು ಅವಶೇಷಗಳಡಿ ಸಿಲುಕಿದ್ದ ಹಿರಿಯ ಪುತ್ರಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೋಕಾಕ್ ತಹಶೀಲ್ದಾರ್ ಮತ್ತು ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ಪರಿಹಾರಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಮಳೆ ಸಂಬಂಧಿತ ಅವಘಡಗಳು ಹೆಚ್ಚಳ

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು, ಮಳೆ ಸಂಬಂಧಿತ ಅವಘಡಗಳು ಸಂಭವಿಸುತ್ತಲೇ ಇವೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಹಾ ಮಳೆಗೆ ರಾಜ್ಯದಲ್ಲಿ ಕನಿಷ್ಠ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಬಾಗಲಕೋಟೆ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕಟಾವಿಗೆ ಬಂದಿದ್ದ ಭತ್ತದ ಫಸಲು ಮಳೆಯಿಂದಾಗಿ ಜಲಾವೃತವಾಗಿದೆ.

ಮಳೆ ಬೀಳುವ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆಯು ಸಾರ್ವಜನಿಕರಿಗೆ ನಿರ್ದೇಶನಗಳನ್ನು ನೀಡುತ್ತಿದೆ.

Read More
Next Story