Bengaluru Metro Fare Hike| ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ; ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ  ಚರ್ಚೆ, ಆಕ್ರೋಶ
x
ನಮ್ಮ ಮೆಟ್ರೋ

Bengaluru Metro Fare Hike| ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ; ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಚರ್ಚೆ, ಆಕ್ರೋಶ

Bengaluru Metro Fare Hike| ದೇಶದ ಎಲ್ಲಾ ಮೆಟ್ರೋಗಳಲ್ಲಿ ಬೆಂಗಳೂರು ಮೆಟ್ರೋ ಪ್ರಯಾಣ ದರ ಅತ್ಯಧಿಕವಾಗಿದೆ. ಪ್ರಯಾಣ ದರ ಏರಿಕೆಯಿಂದಾಗಿ ಜನರು ಸ್ವಂತ ವಾಹನಗಳಲ್ಲಿ ಪ್ರಯಾಣಿಸಬೇಕಾಗುತ್ತದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ನಮ್ಮ ಮೆಟ್ರೋ ಪ್ರಯಾಣ ದರವನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವ್ಯಾಪಕ ಚರ್ಚೆ ಆರಂಭಿಸಿದ್ದಾರೆ.

ಮೆಟ್ರೋ ಪ್ರಯಾಣ ದರ ಬಿಎಂಟಿಸಿ ಬಸ್‌ಗಳಿಗಿಂತ ಹೆಚ್ಚಾಗಿದೆ. ದೇಶದ ಎಲ್ಲಾ ಮೆಟ್ರೋಗಳಲ್ಲಿ ಬೆಂಗಳೂರು ಮೆಟ್ರೋ ಪ್ರಯಾಣ ದರ ಅತ್ಯಧಿಕವಾಗಿದೆ. ಪ್ರಯಾಣ ದರ ಏರಿಕೆಯಿಂದಾಗಿ ಜನರು ಸ್ವಂತ ವಾಹನಗಳಲ್ಲಿ ಪ್ರಯಾಣಿಸಬೇಕಾಗುತ್ತದೆ ಎಂಬ ಅಸಮಾಧಾನ ವ್ಯಾಪಕವಾಗಿ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಜನಸಾಮಾನ್ಯರ ಪಾಲಿನ ಜೀವನಾಡಿಯಾಗಬೇಕಿದ್ದ ನಮ್ಮ ಮೆಟ್ರೋ ಈಗ ಸಿರಿವಂತರ ಶೋಕಿಯಾಗಿ ಮಾರ್ಪಟ್ಟಿದೆ. ಯಾವುದೇ ವೈಜ್ಞಾನಿಕ ಆಧಾರ ಇಲ್ಲದೇ ದಿಢೀರನೆ 50%-100% ದರ ಹೆಚ್ಚಳ ಮಾಡಿರುವ ಬಿಎಂಆರ್‌ಸಿಎಲ್ ತಕ್ಷಣವೇ ಮೆಟ್ರೋ ದರ ಇಳಿಸಬೇಕು ಎಂದು ಕರ್ನಾಟಕ ಆಮ್‌ ಆದ್ಮಿ ಪಾರ್ಟಿ ತನ್ನ ಎಕ್ಸ್‌ ಖಾತೆಯಲ್ಲಿ ಆಗ್ರಹಿಸಿದೆ.

ಸಂಚಾರದಟ್ಟಣೆಗೆ ಕಾರಣ

ಮೆಟ್ರೋ ಬಳಕೆದಾರರ ಸಂಖ್ಯೆ 12 ಲಕ್ಷ ಮೀರಲಿದೆ. ಇಂತಹ ಸನ್ನಿವೇಶದಲ್ಲಿ, ನಮ್ಮ ಮೆಟ್ರೋದ ದರಗಳ ತೀವ್ರ ಏರಿಕೆಯ ಬಗ್ಗೆ ಪ್ರಯಾಣಿಕರು ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಟ್ರೋ ದರ ಕೈಗೆಟುಕುವಂತಿತ್ತು. ಮೆಟ್ರೋ ಪ್ರಯಾಣ ದರ ಹೆಚ್ಚಳದಿಂದ ಬೈಕ್‌ಗಳು ಮತ್ತು ಕಾರುಗಳ ಬಳಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಇದು ನಗರದಲ್ಲಿ ಸಂಚಾರ ದಟ್ಟಣೆಗೂ ಕಾರಣವಾಗಬಹುದು. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಬದಲು, ಪ್ರಯಾಣ ದರಗಳನ್ನು ಹೆಚ್ಚಿಸುವ ಮೂಲಕ ಜನರನ್ನು ಮೆಟ್ರೋದಿಂದ ದೂರವಿಡಲಾಗುತ್ತಿದೆ ಎಂದು ಮೆಟ್ರೋ ಬಳಕೆದಾರರು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಬರೆದಿದ್ದಾರೆ.

50% ಸೇರಿಸಿದರೂ ಅದು ಸುಮಾರು 35 ರೂಪಾಯಿಗಳಾಗಿರಬೇಕು

ಇನ್ನೊಬ್ಬ ಎಕ್ಸ್‌ ಬಳಕೆದಾರ ಹೀಗೆ ಬರೆದಿದ್ದಾರೆ: ಇದು ತುಂಬಾ ಅಸಹ್ಯಕರ. ದಾಸರಹಳ್ಳಿಯಿಂದ ಮಹಾಲಕ್ಷ್ಮಿಯವರೆಗೆ ಮೊದಲು 23 ರೂಪಾಯಿಗಳಷ್ಟಿತ್ತು, ಈಗ ನೀವು 50% ಸೇರಿಸಿದರೂ ಅದು ಸುಮಾರು 35 ರೂಪಾಯಿಗಳಾಗಿರಬೇಕು. ಈಗ ನೀವು 40 ರೂಪಾಯಿಗಳನ್ನು ವಿಧಿಸುತ್ತಿದ್ದೀರಿ, ಇದು ಯಾವ ಕೋನದಿಂದ 46% ಹೆಚ್ಚಳವಾಗಿದೆ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಶೇ. 50 ಅಲ್ಲ, ಶೇ. 60-90 ರಷ್ಟು ತಲುಪಿರುವುದಕ್ಕೆ ದಿನನಿತ್ಯದ ಪ್ರಯಾಣಿಕರು ನಿರಾಶೆ ವ್ಯಕ್ತಪಡಿಸಿದ್ದಾರೆ. ಕಾಡುಗೋಡಿಯಿಂದ ಬೈಯಪ್ಪನಹಳ್ಳಿಗೆ ಪ್ರಯಾಣಿಸಿದ್ದ ಟೆಕ್ಕಿ ರಾಜೇಶ್ ತನ್ನ ಕೋಪವನ್ನು ವ್ಯಕ್ತಪಡಿಸುತ್ತಾ, “ಮೊದಲು ನಾನು ಟಿಕೆಟ್‌ಗೆ 33.25 ರೂ. ನೀಡುತ್ತಿದ್ದೆ. ಈಗ ನಾನು 60 ರೂ. ಪಾವತಿಸಬೇಕಾಗಿದೆ. ಇದು ಶೇಕಡಾ 90 ರಷ್ಟು ಹೆಚ್ಚಳವಾಗಿದೆ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.

ಸೊಮಾಲಿಯಾದಂತೆಯೇ ಸೇವೆಯನ್ನು ಪಡೆಯುತ್ತಿದ್ದೇವೆ

ಶರತ್ ಗೌತಮ್ ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಾ, ಸದನದಲ್ಲಿ ಸಚಿವರೊಬ್ಬರು ಹೇಳಿದಂತೆ, ನಾವು ಇಂಗ್ಲಿಷ್ ನಾಗರಿಕರಂತೆ ತೆರಿಗೆ ಪಾವತಿಸುತ್ತಿದ್ದೇವೆ ಮತ್ತು ಸೊಮಾಲಿಯಾದಂತೆಯೇ ಸೇವೆಯನ್ನು ಪಡೆಯುತ್ತಿದ್ದೇವೆ. ಇದು ಮೆಟ್ರೋದ ವಿಷಯದಲ್ಲೂ ಸಾಬೀತಾಗಿದೆ ಎಂದು ಅವರು ಬರೆದಿದ್ದಾರೆ.

ಇನ್ನೊಬ್ಬ ಬಳಕೆದಾರ ಹ್ಯಾಟ್ಸ್ ಆಫ್ ಟು ಯು ಸರ್ .. ಯಾರು ಮಾಡಕ್ ಆಗೋಲ್ಲ .. ಹ್ಯಾಟ್ಸ್ ಆಫ್ ಟು ಯು ಎಂದು ಎಲ್ಲಾ ರಾಜ್ಯಗಳ ಮೆಟ್ರೋ ಪ್ರಯಾಣ ದರವನ್ನು ಕರ್ನಾಟಕ ರಾಜ್ಯದ ದರಕ್ಕೆ ಹೋಲಿಸಿ ಅಪಹಾಸ್ಯ ಮಾಡಿದ್ದಾರೆ.

ಮೊದಲು ಕುಂದನಹಳ್ಳಿಯಿಂದ ಎಂ.ಜಿ. ರಸ್ತೆಗೆ ದರ 37 ರೂ. ಇತ್ತು, ಈಗ ಅದು 70 ರೂ. ಆಗಿದೆ. ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯು ಸಾರ್ವಜನಿಕ ಸಾರಿಗೆಯ ವಿಷಯದಲ್ಲಿ ಒಂದು ಹಿನ್ನಡೆಯಾಗಿದೆ. ಪ್ರಯಾಣ ದರ ಏರಿಕೆಯು ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಇನ್ನೊಬ್ಬ ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮೆಟ್ರೋ ದರ ಏರಿಕೆಯನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿ ಜಯನಗರ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದೆ. ಪ್ರತಿಭಟನಾ ನಿರತರು ದರ ಏರಿಕೆ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

Read More
Next Story