ಅಕ್ರಮ ಗಣಿ ಗುತ್ತಿಗೆ | ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿಗೆ ಮತ್ತೆ ಪ್ರಸ್ತಾವ
x

ಹೆಚ್‌ ಡಿ ಕುಮಾರಸ್ವಾಮಿ 

ಅಕ್ರಮ ಗಣಿ ಗುತ್ತಿಗೆ | ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿಗೆ ಮತ್ತೆ ಪ್ರಸ್ತಾವ

ಕುಮಾರಸ್ವಾಮಿ ಅವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಎಸ್‌ಎಸ್‌ವಿಎಂ ಕಂಪನಿಗೆ ಗಣಿ ಮತ್ತು ಖನಿಜ ನಿಯಮಗಳನ್ನು ಉಲ್ಲಂಘಿಸಿ 550 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪವಿದೆ.


ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಕಾನೂನು ಉಲ್ಲಂಘಿಸಿ ಗಣಿಗಾರಿಕೆ ಗುತ್ತಿಗೆ ನೀಡಿದ ಪ್ರಕರಣದಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಕರ್ನಾಟಕ ಲೋಕಾಯುಕ್ತರು ಬುಧವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.

ಕುಮಾರಸ್ವಾಮಿ ಅವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಎಸ್‌ಎಸ್‌ವಿಎಂ ಕಂಪನಿಗೆ ಗಣಿ ಮತ್ತು ಖನಿಜ ನಿಯಮಗಳನ್ನು ಉಲ್ಲಂಘಿಸಿ 550 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪವಿದೆ. 2011ರಲ್ಲಿ ಲೋಕಾಯುಕ್ತರಾಗಿದ್ದ ಎನ್. ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿದ್ದ ವರದಿಯಲ್ಲಿನ ಉಲ್ಲೇಖ ಆಧರಿಸಿ ಲೋಕಾಯುಕ್ತದ ಎಸ್‌ಐಟಿ ತನಿಖೆ ನಡೆಸುತ್ತಿದೆ.

ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಎಸ್‌ಐಟಿ ಅಧಿಕಾರಿಗಳು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ 2023ರ ನವೆಂಬರ್ 21ರಂದು ಮೊದಲ ಬಾರಿಗೆ ಪ್ರಸ್ತಾವ ಸಲ್ಲಿಸಿದ್ದರು. ಕುಮಾರಸ್ವಾಮಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಗಳನ್ನು ಒದಗಿಸುವಂತೆ ಸೂಚಿಸಿ ರಾಜ್ಯಪಾಲರು 2024ರ ಜುಲೈ ತಿಂಗಳಲ್ಲಿ ಎಸ್‌ಐಟಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ರಾಜ್ಯಪಾಲರು ಕೋರಿದ್ದ ಸ್ಪಷ್ಟನೆಗಳೊಂದಿಗೆ 2024ರ ಆಗಸ್ಟ್‌ನಲ್ಲಿ ಹೊಸ ಪ್ರಸ್ತಾವ ಸಲ್ಲಿಸಿದ್ದ ತನಿಖಾ ತಂಡ, ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಮತ್ತೆ ಕೋರಿತ್ತು. ಆಗ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಹಾಗೂ ಕರಡು ಆರೋಪಪಟ್ಟಿಯ ಪ್ರತಿಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಸಲ್ಲಿಸುವಂತೆ ಸೂಚಿಸಿದ್ದರು.

ಇದೀಗ ಲೋಕಾಯುಕ್ತ ಅಧಿಕಾರಿಗಳು ವರದಿಯ 5,000 ಕ್ಕೂ ಹೆಚ್ಚು ಪುಟಗಳ ಅನುವಾದವನ್ನು ಪಡೆದುಕೊಂಡು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಇದೀಗ ರಾಜ್ಯಪಾಲರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.

Read More
Next Story