
WOMEN'S DAY SPECIAL | ಸಾಧನೆಗಳಿಂದ ಧೂಳೆಬ್ಬಿಸಿದ ಕಾರ್ ರೇಸರ್; ಮಹಿಳಾ ಮೋಟಾರ್ ಸ್ಪೋರ್ಟ್‌ಗೆ ಪ್ರಗತಿಯೇ ಸ್ಪೂರ್ತಿ
ಈ ಯುವತಿ ತನ್ನ ಸ್ಪೋರ್ಟ್ಸ್ ಕಾರು ಏರಿದರೆ, ರಸ್ತೆ, ಬೆಟ್ಟ ಗುಡ್ಡ , ಅರಣ್ಯ.. ಹೀಗೆ ಯಾವುದೇ ಅಡೆತಡೆಯಿಲ್ಲದೆ ಕ್ಲಿಷ್ಟಕರ ರಸ್ತೆಗಳಲ್ಲಿ ಶರವೇಗದಿಂದ ಸಂಚರಿಸುತ್ತಾಳೆ. ಹಾಗೆ ಮಾಡುತ್ತಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಪತಾಕೆಯನ್ನು ಹಾರಿಸುತ್ತಿದ್ದಾಳೆ.
ಯಾವುದೇ ದೇಶವಿರಲಿ, ನಾಡಿರಲಿ, ಈ ಯುವತಿ ತನ್ನ ಸ್ಪೋರ್ಟ್ಸ್ ಕಾರು ಏರಿದರೆ, ರಸ್ತೆ, ಬೆಟ್ಟ ಗುಡ್ಡ , ಅರಣ್ಯ... ಹೀಗೆ ಯಾವುದೇ ಅಡೆತಡೆಯಿಲ್ಲದೆ ಕ್ಲಿಷ್ಟಕರ ರಸ್ತೆಗಳಲ್ಲಿ ಶರವೇಗದಿಂದ ಸಂಚರಿಸುತ್ತಾಳೆ. ಹಾಗೆ ಮಾಡುತ್ತಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಪತಾಕೆಯನ್ನು ಹಾರಿಸುತ್ತಿದ್ದಾಳೆ.
ಜೂನಿಯರ್ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ (2022), ಎಫ್‌ಐಎ ರ್ಯಾಲಿಸ್ಟಾರ್ ಏಷಿಯಾ ಪೆಸಿಫಿಕ್ (2022), ಇಂಡಿಯನ್ ನ್ಯಾಷನಲ್ ಜಿಮ್ಖಾನಾ ಚಾಂಪಿಯನ್ (2019), ಹೀಗೆ ಒಂದೊಂದು ಪ್ರಶಸ್ತಿಗಳನ್ನು ತನ್ನ ಸಾಧನೆಯ ಕಿರೀಟಕ್ಕೆ ಮಣಿಗಳಾಗಿ ಪೋಣಿಸುತ್ತಲೇ ಇದ್ದಾಳೆ!
ಧೂಳೆಬ್ಬಿಸುವ ರಸ್ತೆಯಲ್ಲಿ ಅತಿವೇಗದಲ್ಲಿ ಕಾರಿನಲ್ಲೇ ಸಾಗಿ ಮೋಟಾರ್ ಸ್ಪೋರ್ಟ್ಸ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿದ್ದಾಳೆ! ಆಕೆ, ನಮ್ಮ ಹೆಮ್ಮೆಯ ಕನ್ನಡತಿ! ಪುರುಷ ಪ್ರಧಾನ ಎನ್ನುವ ನಂಬಿಕೆಯನ್ನು ಹುಸಿ ಮಾಡಿದವರು. ಗಂಡಸರೇ ಕ್ಲಿಷ್ಟಕರ ಮೋಟಾರ್ ಸ್ಪೋರ್ಟ್ಸ್ ಮಾಡಬಹುದು ಎನ್ನುವ ನಂಬಿಕೆಯನ್ನು ಬುಡಮೇಲು ಮಾಡಿದ ಮಹಿಳಾಮಣಿಗಳಲ್ಲಿ ಈ ಯುವತಿಯೂ ಒಬ್ಬರು. ವೇಗ ಮತ್ತು ಸಾಹಸಗಳ ಲೋಕದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವವರು ಇವರು!
ಹೌದು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (ಮಾ.8) ಸಂದರ್ಭದಲ್ಲಿ ದ ಫೆಡರಲ್ ಕರ್ನಾಟಕ, ಆ ಯುವತಿಯನ್ನು ಭೇಟಿ ಮಾಡಿ ಮಾತಾಡಿಸಿದೆ. ಸದಾ ಈ ಮೋಟಾರು ಕ್ರೀಡಾ ವಿಭಾಗದಲ್ಲಿ ಪ್ರಗತಿಯ ಶಿಖರ ಏರಿರುವ ಈ ಯುವತಿಯ ಹೆಸರೇ ಪ್ರಗತಿ ಗೌಡ!
ಆಕೆ, ಭಾರತೀಯ ಮೋಟಾರ್ ಸ್ಪೋರ್ಟ್‌ನಲ್ಲಿ ಮಿಂಚುತ್ತಿರುವ ತಾರೆ. ಮೋಟಾರ್ ಸ್ಪೋರ್ಟ್ ಕಾರ್ ರೇಸ್‌ನಲ್ಲಿ ತಮ್ಮದೇ ಆದ ಸಾಧನೆ ಮಾಡುತ್ತಿರುವ ಪ್ರಗತಿ ಗೌಡ (27) ಮೂಲತ: ಕರ್ನಾಟಕದ ಹಾಸನ ಜಿಲ್ಲೆಯವರು. ಸದ್ಯ ಬೆಂಗಳೂರಿನಲ್ಲಿ ನಲೆಸಿದ್ದಾರೆ. ವೇಗ ಮತ್ತು ಸಾಹಸಗಳ ಲೋಕದಲ್ಲಿ ಮಹಿಳೆಯರ ಪಯಣ ಎಷ್ಟು ಕಠಿಣವೋ, ಅಷ್ಟೇ ಉತ್ಸಾಹಕರವೂ ಹೌದು. ಅದಲ್ಲದೆ ಹೆಚ್ಚಾಗಿ ಇಂಥಹ ಮೋಟಾರ್‌ಸ್ಪೋಟ್ಸ್‌ಗಳು ಪುರುಷರಿಗೆಂದೇ ಇರುತ್ತದೆ ಎಂಬ ಭಾವನೆಯನ್ನು ಪ್ರಗತಿಗೌಡ ಸುಳ್ಳೆಂದು ಸಾಧಿಸಿದ್ದಾರೆ.
ಕಾರ್ ರೇಸಿಂಗ್ ಜಗತ್ತಿನಲ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಂಡ ಮಹಿಳಾ ರಾಲಿ ಡ್ರೈವರ್‌ಗಳಲ್ಲಿ ಪ್ರಗತಿ ಗೌಡ ಕೂಡ ಒಬ್ಬರು. ಬಾಲ್ಯದಿಂದಲೇ ಅವರಿಗೆ ಮೋಟಾರ್ ಸ್ಪೋರ್ಟ್ಸ್‌ಗಳ ಬಗ್ಗೆ ಹೆಚ್ಚಿನ ಆಸಕ್ತಿ. ಅವುಗಳ ಸ್ಪೀಡ್ ಪ್ರಗತಿ ಗೌಡ ಅವರಲ್ಲಿ ಗಮನಸೆಳೆಯಿತು. ಕಾಲೇಜು ದಿನಗಳಲ್ಲಿ ಅವರು ಕಾರು ಓಡಿಸುವ ರೀತಿ, ಸ್ಪೀಡ್ ಬ್ಯಾಲೆನ್ಸ್ ಮಾಡುವ ರೀತಿ ನೋಡಿ ಆಕೆಯ ಗೆಳತಿಯರು ಆಶ್ಚರ್ಯಪಡುತ್ತಿದ್ದರು. ವೈಯಕ್ತಿಕ ಉತ್ಸಾಹ ಮತ್ತು ಕುಟುಂಬದ ಬೆಂಬಲ ಇವರನ್ನು ಈ ಕ್ಷೇತ್ರದತ್ತ ಮುನ್ನಡೆಸಿತು. ಇಂದು ಅವರು ಭಾರತದ ಮಹಿಳಾ ಮೋಟಾರ್ ಸ್ಪೋಟ್ಸ್‌ಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಪಡೆದಿದ್ದಾರೆ.
ಮೋಟಾರ್ ಸ್ಪೋರ್ಟ್ ಎಂದರೆ ಸಣ್ಣ ಸವಾಲಲ್ಲ. ಶಾರೀರಿಕ ಮತ್ತು ಮಾನಸಿಕ ಸದೃಢತೆ ಹೇರಳವಾಗಿ ಬೇಕಾಗುವ ಕ್ಷೇತ್ರವಿದು. ಮಹಿಳೆಯರು ಇಂಥಹ ಕ್ಷೇತ್ರಗಳಿಗೆ ಹೋಗುವುದು ಬಹಳ ಅಪರೂಪ. ಆದರೆ ಪ್ರಗತಿ ಗೌಡ ಅದನ್ನು ಸವಾಲಾಗಿ ಸ್ವೀಕರಿಸಿ, ತಮ್ಮ ಸಾಧನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಪ್ರಥಮವಾಗಿ ರ್ಯಾಲಿ ಮತ್ತು ರೇಸ್ ಟ್ರ್ಯಾಕ್‌ನಲ್ಲಿ ಪಾಲ್ಗೊಂಡಾಗ ಈ ಕ್ಷೇತ್ರದಲ್ಲಿ ಸಾಧನೆ ಮಾಡಬಹುದೆಂಬ ದೃಢ ವಿಶ್ವಾಸವನ್ನು ಪಡೆದು ಮುಂದುವರಿದರು.
ಪ್ರಗತಿಗೌಡ ಮೊದಲು ಮೊಟಾರು ಬೈಕ್‌ಗಳಲ್ಲಿ ಪ್ರವಾಸ ಹೋಗುತ್ತಿದ್ದರು. ಅವರ ಗಮನ ರಸ್ತೆಗಳಲ್ಲಿ ಹಾಗೂ ತಾವೂ ಓಡಿಸುವ ಮೋಟಾರು ವಾಹನದಲ್ಲಿ ಇರುತ್ತಿತ್ತು. ತಮ್ಮ ಅಣ್ಣ ಅವರಿಗೆ ಸ್ಪೂರ್ತಿಯಾಗಿದ್ದರು. ಅಣ್ಣನಿಂದ ಮೋಟಾರು ಬೈಕ್ ಹಾಗೂ ಅವುಗಳನ್ನು ಬ್ಯಾಲೆನ್ಸ್ ಮಾಡುವ ರೀತಿಗಳನ್ನು ಕಲಿತುಕೊಂಡರು. ಇದುವೇ ಮುಂದೆ ಕಾರು ರೇಸ್‌ನಲ್ಲಿ ಸಾಧನೆ ಮಾಡುವ ಮಟ್ಟಿಗೆ ತಲುಪಿತು.
ರಸ್ತೆ ಅಪಘಾತದಲ್ಲಿ ಅಣ್ಣನನ್ನು ಕಳೆದುಕೊಂಡರು
ಪ್ರಗತಿಗೌಡ ಅವರ ಈ ನಿರ್ಧಾರಕ್ಕೆ ಮನೆಯಲ್ಲಿ ಮೊದಲು ಆಕ್ಷೇಪ ವ್ಯಕ್ತವಾಗಿತ್ತು. ಏಕೆಂದರೆ ಈ ಮೊದಲು ರಸ್ತೆ ಅಪಘಾತದಲ್ಲಿ ಈ ಕುಟುಂಬ ತಮ್ಮ ಎದೆಯೆತ್ತರಕ್ಕೆ ಬೆಳೆದಿದ್ದ ಪ್ರಗತಿಯ ಅಣ್ಣನನ್ನು ಕಳೆದುಕೊಂಡಿತ್ತು. ಈ ನೋವಿನಲ್ಲಿ ಮಗಳನ್ನು ಕಳೆದುಕೊಳ್ಳುವ ಭಯದಿಂದ ಪ್ರಗತಿ ಗೌಡಗೆ ತಮ್ಮ ಕನಸನ್ನು ನನಸು ಮಾಡಲು ಮನೆಯವರು ಒಪ್ಪಿಗೆ ನೀಡಿರಲಿಲ್ಲ. ಆದರೆ ಛಲ ಬಿಡದ ಪ್ರಗತಿಗೌಡ ಕದ್ದುಮುಚ್ಚಿ ಕಾರ್ ರೇಸ್‌ಗಳಲ್ಲಿ ಭಾಗವಹಿಸಿ ಟ್ರೋಫಿಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಗೆದ್ದ ಟ್ರೋಫಿಗಳನ್ನು ತಮ್ಮ ಸ್ನೇಹಿತೆಯರ ಮನೆಯಲ್ಲಿ ಇಡುತ್ತಿದ್ದರು. ಆದರೆ ಮಗಳ ಸಾಧನೆಯ ಬಗ್ಗೆ ಪತ್ರಿಕೆಗಳ ಮೂಲಕ ತಿಳಿದ ತಂದೆ ಮಗಳ ಸಾಧನೆಯ ಬಗ್ಗೆ ತಿಳಿಯುತ್ತದೆ. ಇದರಿಂದ ಪೋಷಕರಿಗೆ ಮಗಳ ಸಾಧನೆಯ ಬಗ್ಗೆ ಹೆಮ್ಮೆಯಾತು. ಮಗಳ ಕನಸಿಗೆ ಸಂಪೂರ್ಣವಾಗಿ ಸಹಕಾರ ನೀಡಿದರು.
ತನ್ನ ಸಹೋದರನನ್ನು ಕಳೆದುಕೊಂಡಾಗ ನನ್ನ ಜೀವನದಲ್ಲಿ ಒಂದು ಮಹತ್ವದ ತಿರುವು ಪಡೆದುಕೊಂಡಿಕೊಂಡಿತ್ತು. "ಅಣ್ಣನನ್ನು ಕಳೆದುಕೊಂಡಾಗ ನನ್ನ ಜೀವನದಲ್ಲಿ ಒಂದು ಪೂರ್ಣವಿರಾಮ ಬಿದ್ದಿತು. ಸಂಪೂರ್ಣವಾಗಿ ಕತ್ತಲು ಆವರಿಸಿತ್ತು. ಆದರೆ ಕಳೆದುಕೊಂಡ ಅಣ್ಣನಿಗಾಗಿ ಏನಾದರೂ ಮಾಡಬೇಕು ಎಂಬ ಆಸೆ ನನ್ನಲ್ಲಿ ಚಿಗುರಿತು. ಅಣ್ಣನಿಗೂ ಈ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಆತ ನನನ್ನು ಬೆಂಬಲಿಸುತ್ತಿದ್ದ. ಈಗಾಲೂ ನಾನು ರೇಸ್‌ಗಳಲ್ಲಿ ಪಾಲ್ಗೊಳ್ಳುವಾಗ ಆತನೇ ನನಗೆ ಶಕ್ತಿ ನೀಡುತ್ತಿದ್ದಾನೆ ಎಂದು ಭಾಸವಾಗುತ್ತದೆ," ಎಂದು ಹೇಳುತ್ತಾರೆ ಪ್ರಗತಿಗೌಡ.
ಅಂತಾರಾಷ್ಟ್ರೀಯ ಖ್ಯಾತಿ
ಪ್ರಗತಿ ಗೌಡ ಅವರು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ರ್ಯಾಲಿ ಚಾಂಪಿಯನ್‌ಶಿಪ್‌ಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಾ ಅತ್ಯುತ್ತಮ ರ್ಯಾಲಿ ಡ್ರೈವರ್ ಎನಿಸಿಕೊಂಡಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ರ್ಯಾಲಿ ಡೆಸ್ ವ್ಯಾಲೀಸ್ 2024 ರಲ್ಲಿ 102.5 ಕಿಮೀ ವೇಗವನ್ನು ಸಾಧಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಪ್ರಗತಿ ಅವರ ಅದ್ಭುತ ಪ್ರದರ್ಶನಕ್ಕೆ ಜೂನಿಯರ್ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ - 2022ಪ್ರತಿಷ್ಠಿತ ಪ್ರಶಸ್ತಿಯನ್ನು ತಂದುಕೊಟ್ಟಿತು. ಎಫ್‌ಐಎ ರ‍್ಯಾಲಿಸ್ಟಾರ್ ಏಷ್ಯಾ ಪೆಸಿಫಿಕ್ ಪ್ರಶಸ್ತಿ, ಭಾರತೀಯ ರಾಷ್ಟ್ರೀಯ ಜಿಮ್ಖಾನಾ ಚಾಂಪಿಯನ್ 2019 ಪ್ರಶಸ್ತಿ ಪ್ರಗತಿಯವರಿಗೆ ಲಭ್ಯವಾಗಿದೆ. ಜಾಗತಿಕ ವೇದಿಕೆಯಲ್ಲಿ ಅವರ ಯಶಸ್ಸು ಭಾರತದ ಹೊಸ ರ‍್ಯಾಲಿ ಐಕಾನ್ ಆಗಮನವನ್ನು ಸೂಚಿಸಿದೆ ಎಂದರೆ ತಪ್ಪಾಗಲಾರದು.
ಈಗಿನ ಕಾಲದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ಸಾಬೀತುಪಡಿಸುತ್ತಿದ್ದಾರೆ. ಆದರೆ, ಮೋಟಾರ್ ಸ್ಪೋರ್ಟ್ ಕ್ಷೇತ್ರದಲ್ಲಿ ಮಹಿಳೆಯರ ಪಾಲಿಗೆ ಅಡೆತಡೆಗಳು ಇನ್ನೂ ಕಡಿಮೆಯಾಗಿಲ್ಲ. ಪುರುಷಪ್ರಧಾನ ವಾತಾವರಣ, ಪ್ರಾಯೋಜಕರ ಕೊರತೆ, ಶಾರೀರಿಕ ಹಾಗೂ ಮಾನಸಿಕ ಒತ್ತಡ – ಇವೆಲ್ಲವೂ ಮಹಿಳಾ ರೇಸರ್‌ಗಳ ಮುಂದೆ ಇರುವ ಕಠಿಣ ಸವಾಲುಗಳಾಗಿವೆ. ಪ್ರಗತಿ ಗೌಡ ಅವರು ಈ ಅಡೆತಡೆಗಳನ್ನು ಮೀರಿ, ತಮ್ಮ ಕಠಿಣ ಶ್ರಮದಿಂದಲೇ ಈ ಮಟ್ಟ ತಲುಪಿದ್ದಾರೆ. ಮೊಟಾರ್ ಸ್ಪೋರ್ಟ್‌ನಲ್ಲಿ ಮಹಿಳೆಯರು ಭಯವಿಲ್ಲದೆ ಭಾಗವಹಿಲು ಪ್ರಗತಿ ಗೌಡ ಸ್ಪೂರ್ತಿಯಾಗಿದ್ದಾರೆ. ಧೈರ್ಯವೊಂದಿದ್ದರೆ ಮಹಿಳೆಯರು ಏನನ್ನೂ ಸಾಧಿಸಬಹುದು ಎನ್ನುವುದು ಪ್ರಗತಿಗೌಡ ಅವರ ಅಭಿಪ್ರಾಯ.
ಪ್ರಗತಿ ಗೌಡ ಅವರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ ಮಹಿಳಾ ದಿನದ ಶುಭಾಶಯವನ್ನೂ ಕೋರಿದ್ದಾರೆ.
ಪ್ರಗತಿ ಗೌಡ ಅವರ ಯಶಸ್ಸು ಮಾತ್ರವಲ್ಲ, ಅವರ ಪ್ರಯತ್ನ ಮತ್ತು ಸಮರ್ಪಣೆ ಇಂದಿನ ಯುವತಿಯರಿಗೆ ಪ್ರೇರಣೆಯಾಗಿದೆ. ಮೋಟಾರ್‌ಸ್ಪೋರ್ಟ್ ಮುಂಬರುವ ಮಹಿಳಾ ರೇಸರ್‌ಗಳಿಗೆ ಒಂದು ಮುಕ್ತ ದಾರಿ ಕಲ್ಪಿಸಬೇಕು ಎಂಬುದು ಅವರ ಅಭಿಪ್ರಾಯ. ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಕನಸು ಹೊಂದಿರುವ ಪ್ರಗತಿ, ಮುಂದಿನ ದಿನಗಳಲ್ಲಿ ಮಹತ್ತರ ಸಾಧನೆಗಳತ್ತ ಕಣ್ಣಿಟ್ಟು ಸಾಗುತ್ತಿದ್ದಾರೆ. ನಾವೆಲ್ಲರೂ ಅವರ ಯಶಸ್ಸಿಗಾಗಿ ಹಾರೈಸೋಣ.
ಪ್ರಗತಿ ಗೌಡ ಅವರು ದ ಫೆಡರಲ್ ಕರ್ನಾಟಕಕ್ಕೆ ಏನು ಹೇಳಿದ್ದಾರೆ? ಇಲ್ಲಿ ನೋಡಿ...