
ಸಚಿವ ಪ್ರಿಯಾಂಕ್ ಖರ್ಗೆಗೆ ಅಮೆರಿಕ ಪ್ರವಾಸಕ್ಕೆ ನಿರ್ಬಂಧ: ತಡೆದಿದ್ದು ಯಾರು ? ಭಾರತವೇ? ಅಮೆರಿಕವೇ?
ಪ್ಯಾರಿಸ್ನಲ್ಲಿನ ಅಧಿಕೃತ ಕಾರ್ಯಕ್ರಮಗಳನ್ನು ಮುಗಿಸಿ ಅಮೆರಿಕಕ್ಕೆ ತೆರಳಬೇಕಿದ್ದ ಪ್ರಿಯಾಂಕ್ ಖರ್ಗೆ, ತಮ್ಮ ಯುಎಸ್ ಪ್ರವಾಸಕ್ಕೆ ಅನುಮತಿ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಿಸಲಾಗಿದೆ. ಆದರೆ, ಇದು ಭಾರತೀಯ ವಿದೇಶಾಂಗ ಇಲಾಖೆ ನಿರ್ಧರಿಸಿತೇ ಅಥವಾ ಅಮೆರಿಕದಿಂದ ನಿರಾಕರಣೆ ವ್ಯಕ್ತವಾಯಿತೇ ಎಂಬುದನ್ನು ಸದ್ಯಕ್ಕೆ ಸ್ಪಷ್ಟವಾಗಿಲ್ಲ.
ಸಚಿವ ಖರ್ಗೆ ಅವರು ಪ್ರಸ್ತುತ ಪ್ಯಾರಿಸ್ ಪ್ರವಾಸದಲ್ಲಿದ್ದಾರೆ. ಅಲ್ಲಿಂದ ಅವರು ಅಮೆರಿಕದ ಬೋಸ್ಟನ್ ಮತ್ತು ಸ್ಯಾನ್ಫ್ರಾನ್ಸಿಸ್ಕೋ ನಗರಗಳಲ್ಲಿ ನಡೆಯಬೇಕಿದ್ದ ಬಯೋ ಇಂಟರ್ ನ್ಯಾಷನಲ್ ಕನ್ವೆನ್ಷನ್ ಮತ್ತು ಡಿಸೈನ್ & ಆಟೋಮೇಷನ್ ಕಾನ್ಫರೆನ್ಸ್ಗಳಲ್ಲಿ ಭಾಗವಹಿಸಬೇಕಾಗಿತ್ತು ಆದರೆ ಅವರಿಗೆ ಪ್ರವಾಸಕ್ಕೆ ಹೋಗಲು ಅನುಮತಿ ಸಿಗದ ಕಾರಣ ಭಾರತಕ್ಕೆ ವಾಪಸ್ ಬರಬೇಕಾಗಿದೆ.
ಕ್ಲಿಯರೆನ್ಸ್ ನಿರಾಕರಣೆ ಮತ್ತು ಖರ್ಗೆ ಬೇಸರ
ಪ್ಯಾರಿಸ್ನಲ್ಲಿನ ಅಧಿಕೃತ ಕಾರ್ಯಕ್ರಮಗಳನ್ನು ಮುಗಿಸಿ ಅಮೆರಿಕಕ್ಕೆ ತೆರಳಬೇಕಿದ್ದ ಪ್ರಿಯಾಂಕ್ ಖರ್ಗೆ, ತಮ್ಮ ಯುಎಸ್ ಪ್ರವಾಸಕ್ಕೆ ಅನುಮತಿ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರದಿಂದ ನಿರ್ದಿಷ್ಟ ಕಾರಣವನ್ನು ಕೇಳುವುದಾಗಿ ಹೇಳಿದ್ದಾರೆ. ವಿಶೇಷ ಎಂದರೆ ಸಚಿವರ ಜೊತೆ ತೆರಳಿದ್ದ ಪ್ಯಾರಿಸ್ಗೆ ತೆರಳಿದ್ದ ಐಎಎಸ್ ಅಧಿಕಾರಿಯೊಬ್ಬರಿಗೆ ಅಮೆರಿಕಕ್ಕೆ ತೆರಳಲು ಅನುಮತಿ ದೊರೆತಿದೆ.
ಐಟಿ-ಬಿಟಿ ಕಾರ್ಯಕ್ರಮಗಳಲ್ಲಿ ಭಾಗಿ ನಿರೀಕ್ಷೆ
ಖರ್ಗೆ ಅವರು ಐಟಿ-ಬಿಟಿಗೆ ಸಂಬಂಧಿಸಿದ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು. ಅನುಮತಿ ಸಿಗದ ಕಾರಣ ಅವರು ವಾಪಸ್ ಬರಬೇಕಾಗಿದೆ. ಆದರೆ, ಸಚಿವರೊಬ್ಬರಿಗೆ ವಿದೇಶ ಪ್ರವಾಸಕ್ಕೆ ಅನುಮತಿ ನಿರಾಕರಿಸಿ, ಅವರೊಂದಿಗಿದ್ದ ಅಧಿಕಾರಿಗೆ ಮಾತ್ರ ಅನುಮತಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.
ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕಕ್ಕೆ ಹಿಂದಿರುಗಿದ ನಂತರ ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಹೆಚ್ಚಿನ ವಿವರಗಳನ್ನು ನೀಡುವ ಸಾಧ್ಯತೆಯಿದೆ. ಈ ಘಟನೆ ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಮತ್ತಷ್ಟು ಇಂಬು ನೀಡುವ ಸಾಧ್ಯತೆಯಿದೆ.