ಪ್ರಜ್ವಲ್‌ ಪ್ರಕರಣ | ದೇವೇಗೌಡರ ಮೊದಲ ಪ್ರತಿಕ್ರಿಯೆ: ಏನೆಂದರು ಮಾಜಿ ಪ್ರಧಾನಿ?
x

ಪ್ರಜ್ವಲ್‌ ಪ್ರಕರಣ | ದೇವೇಗೌಡರ ಮೊದಲ ಪ್ರತಿಕ್ರಿಯೆ: ಏನೆಂದರು ಮಾಜಿ ಪ್ರಧಾನಿ?


ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಬೆಳಕಿಗೆ ಬಂದ ಬಳಿಕ 20 ದಿನಗಳಿಂದ ಮೌನಕ್ಕೆ ಶರಣಾಗಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ಶನಿವಾರ(ಮೇ 18 ) ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, "ಪ್ರಜ್ವಲ್‌ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ಕೈಗೊಳ್ಳಬಹುದೋ ಅವೆಲ್ಲವನ್ನೂ ಮಾಡಲು ಸರ್ಕಾರ ಸ್ವತಂತ್ರವಿದೆ. ನಮ್ಮ ಅಭ್ಯಂತರವಿಲ್ಲ" ಎಂದು ಹೇಳಿದ್ದಾರೆ.

"ಈ ಪ್ರಕರಣದಲ್ಲಿ ಬಹಳಷ್ಟು ಮಂದಿಯ ಹೆಸರುಗಳು ಕೇಳಿಬಂದಿವೆ. ಅವರೆಲ್ಲರ ವಿರುದ್ಧವೂ ಕ್ರಮ ಜರುಗಬೇಕು. ಹಾಗೆಯೇ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗಬೇಕು. ಅವರಿಗೆ ಪರಿಹಾರ ಸಿಗಬೇಕು" ಎಂದು ದೇವೇಗೌಡರು ಹೇಳಿದರು.

"ಈ ಎಲ್ಲಾ ವಿಷಯಗಳ ಬಗ್ಗೆ ಎಚ್.ಡಿ. ಕುಮಾರಸ್ವಾಮಿಯವರು ಪದೇ ಪದೇ ಹೇಳುತ್ತಲೇ ಇದ್ದಾರೆ" ಎಂದ ಅವರು, ಈ ವಿಷಯದಲ್ಲಿ ತಾವು ಹೊಸದಾಗಿ ಹೇಳುವುದೇನೂ ಇಲ್ಲ ಎಂದೂ ಹೇಳಿದರು.

"ಆದರೆ ರೇವಣ್ಣ ವಿಷಯದಲ್ಲಿ ಏನೆಲ್ಲಾ ನಡೆದಿದೆ, ಯಾವ ರೀತಿ ಪ್ರಕರಣಗಳನ್ನು ದಾಖಲಿಸಿದ್ದಾರೆ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಅವರ ವಿರುದ್ಧ ಯಾವ ಯಾವ ರೀತಿಯ ಪ್ರಕರಣಗಳನ್ನು ಸೃಷ್ಟಿ ಮಾಡಿದ್ದಾರೆ ಎಂಬುದೂ ಗೊತ್ತಿದೆ. ಒಂದು ಪ್ರಕರಣ ಮುಗಿದು ಜಾಮೀನು ಸಿಗುತ್ತಿದ್ದಂತೆ ಮತ್ತೊಂದು ಪ್ರಕರಣ ದಾಖಲಿಸುತ್ತಿದ್ದಾರೆ. ಅದೂ ಕೂಡ ಹೇಗೆ ನಡೆದಿದೆ ಎನ್ನುವುದೂ ಗೊತ್ತಿದೆ. ಆದರೆ, ಅದೆಲ್ಲ ಈಗ ನ್ಯಾಯಾಂಗ ವ್ಯಾಪ್ತಿಗೆ ಬರುವುದರಿಂದ ನಾನು ಆ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಮಾಡುವುದಿಲ್ಲ" ಎಂದು ಮಾಜಿ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.

"ಪ್ರಜ್ವಲ್‌ ರೇವಣ್ಣ ಸೇರಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿಯವರು ಈ ಪ್ರಕರಣದಲ್ಲಿ ಯಾರ ಬಗ್ಗೆಯೂ ಮುಲಾಜಿಲ್ಲದೆ ಕ್ರಮಕೈಗೊಳ್ಳಲಿ ಎಂದು ಖಂಡತುಂಡವಾಗಿ ಹೇಳಿದ್ದಾರೆ" ಎಂದು ಗೌಡರು ಪುನರುಚ್ಛರಿಸಿದರು.

ಜೂನ್‌ 4ರಂದು ಎಲ್ಲರನ್ನೂ ಕರೆಯುತ್ತೇನೆ

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಬಿಜೆಪಿ ಮುಖಂಡ ಮತ್ತು ವಕೀಲ ದೇವರಾಜೇ ಗೌಡ ಅವರ ಆರೋಪದ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ದೇವೇಗೌಡರು, "ದೇವರಾಜೇಗೌಡರ ವಿಷಯವೂ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಈಗಾಗಲೇ ಕುಮಾರಸ್ವಾಮಿಯವರು ಮಾತನಾಡಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಅವರು ಎಲ್ಲವನ್ನು ನಿಭಾಯಿಸುತ್ತಿದ್ದಾರೆ. ಹಾಗಾಗಿ ನಾನು ಏನೂ ಹೇಳಲಾರೆ. ಆದರೆ ಜೂ.4ರಂದು ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ನಿಮ್ಮಲ್ಲರನ್ನೂ ಪಕ್ಷದ ಕಚೇರಿಯಲ್ಲಿ ಭೇಟಿ ಮಾಡುತ್ತೇನೆ. ಅಂದು ಎಲ್ಲರನ್ನೂ ಆಹ್ವಾನಿಸುತ್ತೇನೆ" ಎಂದು ಹೇಳಿದರು.

ಈ ಪ್ರಕರಣ ಬಳಸಿಕೊಂಡು ರಾಜಕೀಯವಾಗಿ ದೇವೇಗೌಡರ ಕುಟುಂಬಕ್ಕೆ ಹಿನ್ನಡೆ ಮಾಡಬೇಕೆಂಬ ಸಂಚು ನಡೆದಿದೆ ಎಂಬ ಮಾತು ಕೇಳಿಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, " ಹೌದು, ಅದು ನಿಜ" ಎಂದಷ್ಟೇ ಪ್ರತಿಕ್ರಿಯಿಸಿದರು. "ದೇವರಾಜೇಗೌಡರು ಪ್ರಸ್ತಾಪಿಸಿದ ವಿಷಯವೂ ಸೇರಿದಂತೆ ಪ್ರಕರಣದ ಹಿಂದೆ ಬಹಳಷ್ಟು ಜನ ಇದ್ದಾರೆ. ಅದೆಲ್ಲವನ್ನೂ ಕುಮಾರಸ್ವಾಮಿಯವರು ಗಮನಿಸಿದ್ದಾರೆ," ಎಂದೂ ಅವರು ಹೇಳಿದರು.

ಮಾಧ್ಯಮದವರಿಗೆ ತರಾಟೆ

ಇದೇ ಸಂದರ್ಭದಲ್ಲಿ ಪ್ರಜ್ವಲ್‌ ಪ್ರಕರಣ ಬೆಳಕಿಗೆ ಬಂದಂದಿನಿಂದಲೂ ತಮ್ಮ ಮನೆಯ ಮುಂದೆ ಬೀಡು ಬಿಟ್ಟಿರುವ ಮಾಧ್ಯಮಗಳನ್ನು ಉದ್ದೇಶಿಸಿ, ಗೌಡರು, "ಒಂದು ತಿಂಗಳಿನಿಂದ ಮಳೆ, ಗಾಳಿಯೆನ್ನದೆ ಹಗಲು ರಾತ್ರಿ ನನ್ನ ಮನೆ ಮುಂದೆ ಕಾಯುತ್ತಿದ್ದೀರಾ. ಏನು ಪ್ರಯೋಜನ? ಏನಕ್ಕೆ ಕಾಯುತ್ತಿದ್ದೀರಾ? ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳನ್ನು ವರದಿ ಮಾಡಲು ನಿಮಗೆ ಸ್ವಾತಂತ್ರ್ಯ ಇದೆ. ಇಲ್ಲಿ ಕೂತು ಏನು ಸಾಧಿಸುತ್ತೀರಾ? 92ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಮಾಧ್ಯಮ ಮತ್ತು ಮಾಧ್ಯಮ ಮಾಲೀಕರಿಗೆ ಮನವಿ ಮಾಡುತ್ತಿದ್ದೇನೆ. ಇಲ್ಲಿ ಕಾದು ಪ್ರಯೋಜನವಿಲ್ಲ" ಎಂದು ತರಾಟೆಗೆ ತೆಗೆದುಕೊಂಡರು.

ಶನಿವಾರ ಮಾಜಿ ಪ್ರಧಾನಿ ದೇವೇಗೌಡರು ತಮ್ಮ 92ನೇ ಜನ್ಮದಿನ ಆಚರಿಸಿಕೊಂಡರು. ಈ ಬಾರಿ ಸಂಭ್ರಮಾಚರಣೆ ಬೇಡ ಎಂದು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಗೆ ಕರೆ ನೀಡಿದ್ದ ಗೌಡರು, ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಿಕೊಂಡರು. ದೇವಾಲಯದಿಂದ ಮರಳಿ ಮನೆಗೆ ಬರುವಾಗ ಅವರ ಮನೆ ಮುಂದೆ ಬೀಡುಬಿಟ್ಟಿರುವ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮೇಲಿನ ಹೇಳಿಕೆ ನೀಡಿದ್ದಾರೆ.

Read More
Next Story