Hampi Gangrape | ಹಂಪಿಯಲ್ಲಿ ಹೋಂ ಸ್ಟೇ, ರೆಸಾರ್ಟ್​ಗಳ ಮೇಲೆ ಪೊಲೀಸ್​​ ದಾಳಿ
x

ಹೋಂ ಸ್ಟೇ, ರೆಸಾರ್ಟ್​ಗಳ ಮೇಲೆ ಪೊಲೀಸರ ದಾಳಿ ನಡೆಸಿ ಪರಿಶೀಲನೆ ನಡೆಸಿದರು. 

Hampi Gangrape | ಹಂಪಿಯಲ್ಲಿ ಹೋಂ ಸ್ಟೇ, ರೆಸಾರ್ಟ್​ಗಳ ಮೇಲೆ ಪೊಲೀಸ್​​ ದಾಳಿ

ವಿದೇಶಿ ಪ್ರವಾಸಿಗರು ʻಫಾರ್ಮ್ ಸಿʼ ಅನ್ನು ಕಡ್ಡಾಯವಾಗಿ ಭರ್ತಿ ಮಾಡಿ ವೀಸಾ, ಪಾಸ್‌ಪೋರ್ಟ್‌ನ ವಿವರಗಳನ್ನು ಹಂಚಿಕೊಳ್ಳಬೇಕು ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ಹತ್ತಿರದ ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು.


ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿಯಿರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ವಿದೇಶಿ ಮಹಿಳೆ, ಹೋಂ ಸ್ಟೇ ಮಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಕೊಪ್ಪಳ ಜಿಲ್ಲಾ ಪೊಲೀಸ್​ ಇಲಾಖೆ, ಗಂಗಾವತಿ ತಾಲೂಕಿನ ಆನೆಗೊಂದಿ ಮತ್ತು ಕೊಪ್ಪಳ ತಾಲೂಕಿನ ಬಸ್ಸಾಪುರ ಸುತ್ತಮುತ್ತಲಿರುವ ಹೋಂ ಸ್ಟೇ, ರೆಸಾರ್ಟ್​ಗಳ ಮೇಲೆ ಸೋಮವಾರ ದಾಳಿ ಮಾಡಿದೆ.

ಹೋಂ ಸ್ಟೇ, ರೆಸಾರ್ಟ್​ಗಳು ವಿದೇಶಿಗರ ಬಗ್ಗೆ ಯಾವುದೇ ಮಾಹಿತಿ ನೀಡದ ಆರೋಪ ಮತ್ತು ಅಕ್ರಮ ಚಟುವಟಿಕೆ ನಡೆಯುತ್ತಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ರಾಮ್​ ಅರಸಿದ್ದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಆನೆಗೊಂದಿ ಮತ್ತು ಸಣಾಪುರ ಪ್ರದೇಶದ ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೆಳೆ ರಿಜಿಸ್ಟರ್ ಪುಸ್ತಕ ಸೇರಿದಂತೆ ಹೋಂ ಸ್ಟೇ, ರೆಸಾರ್ಟ್​ಗಳ ದಾಖಲೆಗಳನ್ನು ಪರಿಶೀಲಿಸಿದರು.

ಭದ್ರತಾ ಶಿಷ್ಟಾಚಾರ ಪಾಲಿಸಿ

ಪ್ರವಾಸಿಗರ ಸುರಕ್ಷತೆಗಾಗಿ, ವಿಶೇಷವಾಗಿ ವಿದೇಶಿಯರ ಸುರಕ್ಷತೆಗಾಗಿ ಕೆಲವು ಭದ್ರತಾ ಶಿಷ್ಟಾಚಾರಗಳನ್ನು ಅನುಸರಿಸಲು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಕೊಡುವಂತೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ರಾಮ್​ ಅರಸಿದ್ದಿ ಅವರು ಹೋಂಸ್ಟೇಗಳು ಮತ್ತು ರೆಸಾರ್ಟ್‌ ಮಾಲೀಕರಿಗೆ ಸೂಚಿಸಿದ್ದಾರೆ.

ಫಾರ್ಮ್ ಸಿ ಕಡ್ಡಾಯ

ವಿದೇಶಿ ಪ್ರವಾಸಿಗರು ಉಳಿದುಕೊಳ್ಳವಾಗ ʻಫಾರ್ಮ್ ಸಿʼ ಅನ್ನು ಕಡ್ಡಾಯವಾಗಿ ಭರ್ತಿ ಮಾಡಿ ವೀಸಾ, ಪಾಸ್‌ಪೋರ್ಟ್‌ನ ವಿವರಗಳನ್ನು ಹಂಚಿಕೊಳ್ಳಬೇಕು. ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಸಲ್ಲಿಸಬೇಕು ಎಂದು ಹೇಳಿದರು. ಇದೇ ವೇಳೆ ಅವರು, ರೆಸಾರ್ಟ್​ಗಳಲ್ಲಿ ಗಾಂಜಾ ಪೂರೈಕೆ ಸೇರಿದಂತೆ ಯಾವುದೇ ಅಕ್ರಮ ದಂಧೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಹೆಚ್ಚುವರಿ ಗಸ್ತು ವಾಹನ

ಮುಂಜಾಗೃತ ಕ್ರಮವಾಗಿ ನಗರದಲ್ಲಿ ವಾಹನ ತಪಾಸಣೆಗಾಗಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಹೆದ್ದಾರಿ ಗಸ್ತು ವಾಹನಗಳನ್ನು ದ್ವಿಗುಣಗೊಳಿಸಲಾಗಿದೆ. ತಡರಾತ್ರಿಯಲ್ಲಿ ಪ್ರವಾಸಿಗರಿಗೆ ಭದ್ರತೆ ನೀಡಲು ಇನ್ಸ್‌ಪೆಕ್ಟರ್ ಮಟ್ಟದ ಅಧಿಕಾರಿಯೊಬ್ಬರು ಆನೆಗೊಂದಿ ಮತ್ತು ಸಣಾಪುರ ಪ್ರದೇಶಗಳಲ್ಲಿ ರಾತ್ರಿ ಗಸ್ತು ತಿರುಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಏನಿದು ಘಟನೆ

ಮಾರ್ಚ್ 6ರಂದು ರಾತ್ರಿ 11 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ಸಾಣಾಪುರ ಕೆರೆಯ ಬಳಿ ಪುರುಷ ಪ್ರವಾಸಿಗರನ್ನು ಕಾಲುವೆಗೆ ನೂಕಿ, ಇಸ್ರೇಲ್ ಮಹಿಳೆ ಹಾಗೂ ಸ್ಥಳೀಯ ಹೋಮ್ ಸ್ಟೇ ನಿರ್ವಾಹಕಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿ ಪರಾರಿಯಾಗಿದ್ದರು. ಐವರು ಪ್ರವಾಸಿಗರು ಸಣಾಪುರ ಕೆರೆಯ ಬಳಿ ನಕ್ಷತ್ರಗಳನ್ನು ನೋಡುತ್ತಾ ಗಿಟಾರ್ ನುಡಿಸುತ್ತಾ ಆನಂದಿಸುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದಿದ್ದ ಮೂವರು ವ್ಯಕ್ತಿಗಳು ಪೆಟ್ರೋಲ್‌ಗೆ 100 ರೂಪಾಯಿ ನೀಡುವಂತೆ ಒತ್ತಾಯಿಸಿದ್ದರು. ಹಣ ನೀಡಲು ನಿರಾಕರಿಸಿದಾಗ ದುಷ್ಕರ್ಮಿಗಳು ಪುರುಷ ಪ್ರವಾಸಿಗರ ಮೇಲೆ ಹಲ್ಲೆ ಮಾಡಿ ಕಾಲುವೆಗೆ ದೂಡಿ, ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಕಾಲುವೆಗೆ ದೂಡಿದ್ದ ಮೂವರಲ್ಲಿ ಇಬ್ಬರು ಕಷ್ಟಪಟ್ಟು ಈಜಿ ದಡ ಸೇರಿದ್ದರು. ಒಡಿಶಾದ ಬಿಬಾಸ್ ಎಂಬುವರು ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿದ್ದು, ಅತ್ಯಾಚಾರ ಪ್ರಕರಣದಿಂದಾಗಿ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಕುಸಿತಗೊಂಡಿದ್ದು, ಅನೇಕರು ಬುಕಿಂಗ್‌ ಮಾಡಿರುವುದನ್ನು ರದ್ದು ಮಾಡುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಬರುವ ಪ್ರವಾಸಿಗರು ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

Read More
Next Story