Attack on Bus Conductor | ಕಂಡಕ್ಟರ್ ವಿರುದ್ಧದ ಪೋಕ್ಸೊ ಪ್ರಕರಣ‌ ವಾಪಸ್
x
ಹಲ್ಲೆಗೊಳಗಾದ ಕಂಡಕ್ಟರ್‌ ಮಹಾದೇವ ಹುಕ್ಕೇರಿ

Attack on Bus Conductor | ಕಂಡಕ್ಟರ್ ವಿರುದ್ಧದ ಪೋಕ್ಸೊ ಪ್ರಕರಣ‌ ವಾಪಸ್

ನಿರ್ವಾಹಕ ಮಹಾದೇವ ಹುಕ್ಕೇರಿ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣವನ್ನು ದೂರುದಾರೆ ಹಿಂಪಡೆದಿದ್ದಾರೆ ಎನ್ನಲಾಗಿದೆ.


ಕನ್ನಡದಲ್ಲಿ ಮಾತನಾಡಿದ್ದಕ್ಕಾಗಿ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಕಂಡಕ್ಟರ್‌ ವಿರುದ್ಧ ಮರಾಠಿಗರು ದಾಖಲಿಸಿದ್ದ ಪೋಕ್ಸೊ ಪ್ರಕರಣವನ್ನು ಹಿಂತೆಗೆದುಕೊಂಡಿದ್ದಾರೆ.

ಪೋಕ್ಸೊ ಕೇಸ್ ದಾಖಲು ಮಾಡಿದ್ದ ಸಂತ್ರಸ್ಥೆಯ ತಾಯಿ ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಾವೂ ಸಹ ಕನ್ನಡಿಗರೇ ಇದ್ದೇವೆ. ಈ ಜಗಳವನ್ನು ಕನ್ನಡ, ಮರಾಠಿ ಜಗಳ ಮಾಡಲಾಗುತ್ತಿದೆ. ನಾವೂ ಸಹ ಕನ್ನಡಿಗರು. ಇದನ್ನು ಬೆಳೆಸಬೇಡಿ ಎಂದು ವೀಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.

ಕಂಡಕ್ಟರ್ ಮಹಾದೇವ ಅವರು ಬಸ್‌ನಲ್ಲೇ ಕೆಟ್ಟ ದೃಷ್ಟಿಯಿಂದ ನೋಡಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಾರಿಹಾಳ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಪೋಕ್ಸೊ ಕೇಸ್ ಪ್ರಕರಣ ದಾಖಲಿಸುವ ಮೂಲಕ ಮರಾಠಿಗರು ಸುಳ್ಳು ಕೇಸು ಹೂಡಿ ಸೇಡಿಗೆ ಇಳಿದಿದ್ದಾರೆ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಮಂಗಳವಾರ ಕೂಡ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಬೆಳಗಾವಿಯಲ್ಲಿ ಭಾರೀ ಪ್ರತಿಭಟನಾ ರ್ಯಾಲಿಗೆ ಮುಂದಾಗಿದ್ದಾರೆ.

ಈ ನಡುವೆ ದಿಢೀರ್‌ ಬೆಳವಣಿಗೆಯಲ್ಲಿ ಪೋಕ್ಸೊ ದೂರುದಾರೆ ಮಹಿಳೆ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದು, ತಾವೂ ಕನ್ನಡಿಗರೇ ಆಗಿದ್ದು, ಪ್ರಕರಣವನ್ನು ಕನ್ನಡಿಗರು ವರ್ಸಸ್‌ ಮರಾಠಿಗರು ಎಂಬಂತೆ ಬಿಂಬಿಸುತ್ತಿರುವುದು ನೋವು ತಂದಿದೆ. ಪ್ರಕರಣವನ್ನು ಬೆಳೆಸುವುದು ಬೇಡ, ಇಲ್ಲಿಗೇ ನಿಲ್ಲಿಸೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕಂಡಕ್ಟರ್‌ ವಿರುದ್ಧ ದಾಖಲಿಸಿದ್ದ ಪೋಕ್ಸೊ ಪ್ರಕರಣವನ್ನು ವಾಪಸ್‌ ಪಡೆದಿರುವುದಾಗಿ ಅವರು ಹೇಳಿದ್ದಾರೆ ಎಂದು ವರದಿಗಳು ಹೇಳಿವೆ.

ನಡೆದಿದ್ದೇನು?

ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ಬೆಳಗಾವಿ ಸಿಬಿಟಿಯಿಂದ ಸುಳೇಬಾವಿಗೆ ಹೊರಟಿದ್ದ ಬಸ್‌ನಲ್ಲಿ ಓರ್ವ ಯುವಕ, ಯುವತಿ ಪ್ರಯಾಣಿಸುತ್ತಿದ್ದರು. ಟಿಕೆಟ್‌ ಪಡೆಯಲು ನಿರ್ವಾಹಕ ಹೇಳಿದಾಗ, ಮರಾಠಿ ಭಾಷೆಯಲ್ಲಿ ಯುವಕ ಉತ್ತರಿಸಿದ್ದಾನೆ. ಮರಾಠಿ ಭಾಷೆ ಅರ್ಥವಾಗುತ್ತಿಲ್ಲ. ಕನ್ನಡದಲ್ಲಿ ಮಾತನಾಡಿ ಎಂದು ಕಂಡಕ್ಟರ್‌ ಹೇಳಿದ್ದಾರೆ. ಈ ಕಾರಣಕ್ಕೆ ಯುವಕ- ಯುವತಿ ಇಬ್ಬರೂ ನಿರ್ವಾಹಕ ಮಹಾದೇವ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಸ್‌ ಸುಳೇಬಾವಿ ಗ್ರಾಮ ಪ್ರವೇಶಿಸುತ್ತಿದ್ದಂತೆ ತಮ್ಮೂರಿನ ನಾಲ್ವರು ಯುವಕರನ್ನು ಕರೆಯಿಸಿಕೊಂಡು ನಿರ್ವಾಹಕನ ಮೇಲೆ ಹಲ್ಲೆಮಾಡಿದ್ದಾರೆ.

ಪೋಕ್ಸೊ ಬಗ್ಗೆ ಶುಕ್ರವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲೂ ಪ್ರಸ್ತಾಪವೇ ಆಗಿಲ್ಲ. ಆದರೆ ನಿರ್ವಾಹಕ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ರಾತ್ರೋರಾತ್ರಿ ಪೋಕ್ಸೊ ಪ್ರಕರಣ ದಾಖಲಾಗಿತ್ತು.

Read More
Next Story