![Namma Metro Fare Hike | ನಮ್ಮ ಮೆಟ್ರೋ ದರ ಏರಿಕೆಗೆ ಸಂಸದ ಪಿ ಸಿ ಮೋಹನ್ ಖಂಡನೆ Namma Metro Fare Hike | ನಮ್ಮ ಮೆಟ್ರೋ ದರ ಏರಿಕೆಗೆ ಸಂಸದ ಪಿ ಸಿ ಮೋಹನ್ ಖಂಡನೆ](https://karnataka.thefederal.com/h-upload/2025/02/11/511964-cpmohan.webp)
Namma Metro Fare Hike | ನಮ್ಮ ಮೆಟ್ರೋ ದರ ಏರಿಕೆಗೆ ಸಂಸದ ಪಿ ಸಿ ಮೋಹನ್ ಖಂಡನೆ
Namma Metro | ಮೆಟ್ರೋ ದರ ಏರಿಕೆ ನಿರ್ಧಾರವು ಬೆಂಗಳೂರಿನ ಪ್ರಯಾಣಿಕರ ಮೇಲೆ ಅನ್ಯಾಯದ ಹೊರೆಯಾಗಿದೆ ಎಂದು ಬಿಜೆಪಿ ಸಂಸದ ಪಿ ಸಿ ಮೋಹನ್ ಹೇಳಿದ್ದಾರೆ
ಬೆಂಗಳೂರಿನ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಬೆಂಗಳೂರು ನಾಗರಿಕರಿಗೆ ದೊಡ್ಡ ಆಘಾತ ತಂದಿದ್ದು, ಮೆಟ್ರೋ ಪ್ರಯಾಣಿಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಪ್ರಯಾಣ ದರ ಶೇ.50-100ರಷ್ಟು ದರ ಹೆಚ್ಚಳ ಖಂಡಿತವಾಗಿಯೂ ಒಪ್ಪತಕ್ಕದ್ದಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಇದೀಗ ನಮ್ಮ ಮೆಟ್ರೋ ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್, "ಮೆಟ್ರೋ ದರ ಏರಿಕೆ ನಿರ್ಧಾರವು ಬೆಂಗಳೂರಿನ ಪ್ರಯಾಣಿಕರ ಮೇಲೆ ಅನ್ಯಾಯದ ಹೊರೆಯಾಗಿದೆ" ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಪಿಸಿ ಮೋಹನ್, "ದರ ಏರಿಕೆಯು ಅನೇಕ ಮೆಟ್ರೋ ಪ್ರಯಾಣಿಕರನ್ನು ಪರ್ಯಾಯ ಸಂಚಾರ ಸಾಧ್ಯತೆಗಳತ್ತ ಚಿಂತಿಸುವಂತೆ ಒತ್ತಾಯಿಸುತ್ತದೆ. ಅಲ್ಲದೇ ಇದು ನಗರದಲ್ಲಿ ಖಾಸಗಿ ವಾಹನಗಳ ಸಂಖ್ಯೆ ಮತ್ತಷ್ಟು ಹೆಚ್ಚಲು ಕಾರಣವಾಗಲಿದ್ದು, ರಸ್ತೆ ಸಂಚಾರ ದಟ್ಟಣೆ ಮತ್ತಷ್ಟು ಬಿಗಡಾಯಿಸಲಿದೆ.." ಎಂದು ಹೇಳಿದ್ದಾರೆ.
"ಸಾರ್ವಜನಿಕ ಸಾರಿಗೆ ಕೈಗೆಟಕುವ ದರದಲ್ಲಿರಬೇಕು. ಆದರೆ ಸರ್ಕಾರ ಈಗ ಶೇ.50ರಷ್ಟು ದರ ಏರಿಕೆ ಮಾಡಿ ಈ ತತ್ವಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ. ನಮ್ಮ ಮೆಟ್ರೋ ದರ ಏರಿಕೆ ವಿಚಾರವಾಗಿ ಶುಲ್ಕ ನಿಗದಿ ಸಮಿತಿಯ ವರದಿಯನ್ನು ಬಿಡುಗಡೆ ಮಾಡುವ ಮೂಲಕ, ಸಂಸ್ಥೆಯು ಈ ವಿಚಾರವಾಗಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಬೇಕು." ಎಂದು ಪಿಸಿ ಮೋಹನ್ ಒತ್ತಾಯಿಸಿದ್ದಾರೆ.
"ಪ್ರಯಾಣಿಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು BMRCL ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಪಾಸ್‌ಗಳನ್ನು ಪರಿಚಯಿಸಬೇಕು. ಇದು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಸಂಸ್ಥೆಯೆಡೆಗೆ ಪ್ರಯಾಣಿಕರ ನಿಷ್ಠೆಗೆ ಪ್ರತಿಫಲ ನೀಡಿದಂತಾಗುತ್ತದೆ. ಟಿಕೆಟ್ ದರಗಳಲ್ಲಿ ಅಗತ್ಯ ರಿಯಾಯಿತಿಗಳನ್ನು ಘೋಷಿಸುವ ಮೂಲಕ, ವಾರಾಂತ್ಯದ ಮೆಟ್ರೋ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.." ಎಂದು ಸಲಹೆ ನೀಡಿದ್ದಾರೆ.
"BMRCL ನಾಗರಿಕರ ಅಗತ್ಯಗಳಿಗೆ ಆದ್ಯತೆ ನೀಡಬೇಕು ಮತ್ತು ಎಲ್ಲರಿಗೂ ಸಮಾನ, ಸುಲಭ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಹಾಗೂ ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಜನರ ಕೈಗೆಟುಕುವ ದರದಲ್ಲಿ ಖಾತರಿಪಡಿಸಬೇಕು.." ಎಂದು ಆಗ್ರಹಿಸಿದ್ದಾರೆ.